ರಾಜಧಾನಿ ಬೆಂಗಳೂರಿನಲ್ಲಿ ಬಿಬಿಎಂಪಿಯಿಂದ 6ನೇ ವೈದ್ಯಕೀಯ ಕಾಲೇಜು ಆರಂಭಕ್ಕೆ ಸಿದ್ಧತೆ

KannadaprabhaNewsNetwork |  
Published : Dec 26, 2024, 01:47 AM ISTUpdated : Dec 26, 2024, 04:56 AM IST
ಪಾಲಿಕೆ | Kannada Prabha

ಸಾರಾಂಶ

ರಾಜಧಾನಿ ಬೆಂಗಳೂರಿನ ನಾಗರಿಕರಿಗೆ ಮೂಲ ಸೌಕರ್ಯ ಒದಗಿಸುವ ಜವಾಬ್ದಾರಿ ಹೊಂದಿರುವ ಬಿಬಿಎಂಪಿಯಿಂದ ನಗರದ 6ನೇ ಸರ್ಕಾರಿ ಸೌಮ್ಯದ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಯೋಜನಾ ವರದಿ ಸಿದ್ದಪಡಿಸಲಾಗುತ್ತಿದೆ.

ವಿಶ್ವನಾಥ ಮಲೇಬೆನ್ನೂರು

 ಬೆಂಗಳೂರು : ರಾಜಧಾನಿ ಬೆಂಗಳೂರಿನ ನಾಗರಿಕರಿಗೆ ಮೂಲ ಸೌಕರ್ಯ ಒದಗಿಸುವ ಜವಾಬ್ದಾರಿ ಹೊಂದಿರುವ ಬಿಬಿಎಂಪಿಯಿಂದ ನಗರದ 6ನೇ ಸರ್ಕಾರಿ ಸೌಮ್ಯದ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಯೋಜನಾ ವರದಿ ಸಿದ್ದಪಡಿಸಲಾಗುತ್ತಿದೆ.

ಈಗಾಗಲೇ ನಗರದಲ್ಲಿ ರಾಜ್ಯ ಸರ್ಕಾರದ ಅಧೀನದಲ್ಲಿ 3 ಹಾಗೂ ಕೇಂದ್ರ ಸರ್ಕಾರದ ಅಧೀನದಲ್ಲಿ 2 ವೈದ್ಯಕೀಯ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ. ಇದೀಗ ನಗರದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಜವಾಬ್ದಾರಿ ಹೊಂದಿರುವ ಬಿಬಿಎಂಪಿಯ ಅಧೀನದಲ್ಲಿ ವೈದ್ಯಕೀಯ ಕಾಲೇಜು ಆರಂಭಿಸುವ ಕಸರತ್ತು ಜೋರಾಗಿ ನಡೆಸಲಾಗುತ್ತಿದೆ.

ಕಳೆದ 1ವರ್ಷದ ಹಿಂದೆ ಬಿಬಿಎಂಪಿಯಿಂದ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಂಬಂಧಿಸಿದಂತೆ ಸಾಧ್ಯ ಸಾಧ್ಯತಾ ವರದಿ ಪಡೆಯಲಾಗಿದ್ದು, ಸ್ಥಾಪನೆಗೆ ಅನುಮೋದನೆ ದೊರೆತ ಹಿನ್ನೆಲೆಯಲ್ಲಿ ಇದೀಗ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ.

ತಿಂಗಳಲ್ಲಿ ಯೋಜನಾ ವರದಿ ಸಿದ್ಧ:

ಕಳೆದ ಹಲವು ದಿನಗಳಿಂದ ಬಿಬಿಎಂಪಿಯ ಕ್ಲಿನಿಕ್‌ ವಿಭಾಗದಿಂದ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಯೋಜನೆ ಸಿದ್ಧಪಡಿಸುವ ಕಾರ್ಯ ಮಾಡಲಾಗುತ್ತಿದೆ. ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಬಹುತೇಕ ಯೋಜನೆ ಸಿದ್ಧಪಡಿಸಲಾಗಿದೆ. ಮೇಲಾಧಿಕಾರಿಗಳ ಒಪ್ಪಿಗೆ ಪಡೆದು 1 ತಿಂಗಳ ಒಳಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗುವುದು ಎಂದು ಬಿಬಿಎಂಪಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಸ್ಥಳ ವಿವಾದ ಉದ್ಭವ:

ಈ ಹಿಂದೆ ಗೋವಿಂದರಾಜನಗರದ ಎಂ.ಸಿ.ಲೇಔಟ್‌ನ ಬಿಬಿಎಂಪಿಯ ಆಸ್ಪತ್ರೆ ಆವರಣದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಚಿಂತನೆ ನಡೆಸಲಾಗಿತ್ತು. ಸ್ಥಳವೂ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಸ್ಥಳದ ಆಧಾರದಲ್ಲಿ ಸಾಧ್ಯಸಾಧ್ಯತಾ ವರದಿ ಸಿದ್ಧಪಡಿಸಲಾಗಿತ್ತು. ಆದರೆ, ಆ ಜಾಗಕ್ಕೆ ಸಂಬಂಧಿಸಿದಂತೆ ಇದೀಗ ವಿವಾದ ಸೃಷ್ಟಿಯಾಗಿದೆ. ಸ್ಥಳ ವಿವಾದ ಪರಿಹಾರವಾದರೆ ಮಾತ್ರ ವೈದ್ಯಕೀಯ ಕಾಲೇಜು ಸ್ಥಾಪನೆ ಸಾಧ್ಯವಾಗಲಿದೆ.

ಕಳೆದ ಬಜೆಟ್‌ನಲ್ಲಿಯೇ ₹500 ಕೋಟಿ ಬೇಡಿಕೆ:

ಬಿಬಿಎಂಪಿಯಿಂದ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಂಬಂಧಿಸಿದಂತೆ ಬಿಬಿಎಂಪಿಯು ಕಳೆದ ಬಜೆಟ್‌ನಲ್ಲಿ ₹500 ಕೋಟಿ ಅನುದಾನ ಮೀಸಲಿಡುವಂತೆ ಬೇಡಿಕೆ ಇಟ್ಟಿತ್ತು. ಆದರೆ, ಸರ್ಕಾರ ಬಜೆಟ್‌ನಲ್ಲಿ ಅನುದಾನ ನೀಡಿರಲಿಲ್ಲ. ಇದೀಗ ಸರ್ಕಾರವೇ ಯೋಜನಾ ವರದಿ ಸಿದ್ಧಪಡಿಸಿ ಸಲ್ಲಿಕೆ ಮಾಡುವಂತೆ ಸೂಚನೆ ನೀಡಿದೆ. ಮುಂಬರುವ ಬಜೆಟ್‌ನಲ್ಲಿ ಅನುದಾನ ನೀಡಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಮುನ್ನುಡಿ ಬರೆಯುವ ಸಾಧ್ಯತೆ ಇದೆ. ಇದೀಗ ಯೋಜನಾ ವರದಿ ಸಿದ್ದಪಡಿಸಲಾಗುತ್ತಿದ್ದು, ಪೂರ್ಣಗೊಂಡ ಬಳಿಕ ಎಷ್ಟು ಅನುದಾನ ಬೇಕಾಗಲಿದೆ ಎಂಬುದು ತಿಳಿದು ಬರಲಿದೆ. ಆ ನಂತರ ಸರ್ಕಾರಕ್ಕೆ ಪ್ರತ್ಯೇಕವಾಗಿ ಪ್ರಸ್ತಾವನೆ ಸಲ್ಲಿಕೆ ಮಾಡಲು ಬಿಬಿಎಂಪಿ ತೀರ್ಮಾನಿಸಿದೆ.

ವೈದ್ಯಕೀಯ ಸ್ಥಾಪನೆಯಿಂದ ಹೆಚ್ಚು ಅನುಕೂಲ:

ಬಿಬಿಎಂಪಿಯು ಪ್ರಸ್ತುತ 6 ರೆಫರಲ್‌ ಆಸ್ಪತ್ರೆ, 26 ಹೆರಿಗೆ ಆಸ್ಪತ್ರೆ, 135 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, 1 ಸಾರ್ವಜನಿಕ ಆಸ್ಪತ್ರೆ ಹಾಗೂ 220 ನಮ್ಮ ಕ್ಲಿನಿಕ್‌ಗಳನ್ನು ನಿರ್ವಹಣೆ ಮಾಡುತ್ತಿದೆ. ಆದರೆ, ರೋಗಿಗಳಿಗೆ ಆತ್ಯಾಧುನಿಕ ಗುಣಮಟ್ಟದ ಹಾಗೂ ತುರ್ತು ಚಿಕಿತ್ಸೆ ನೀಡುವುದಕ್ಕೆ ಸಾಧ್ಯವಾಗುತ್ತಿಲ್ಲ. ತುರ್ತು ಹಾಗೂ ಆತ್ಯಾಧುನಿಕ ಗುಣಮಟ್ಟದ ಚಿಕಿತ್ಸೆಗೆ ನಗರ ಇತರೆ ಸರ್ಕಾರಿ ಆಸ್ಪತ್ರೆಗಳ ಅವಲಂಬನೆ ಆಗಬೇಕಾಗಿದೆ. ಬಿಬಿಎಂಪಿಯಿಂದಲೇ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಿದರೆ ಅನುಕೂಲವಾಗಲಿದೆ. ಕೇವಲ ರೋಗಿಗಳಿಗೆ ಮಾತ್ರವಲ್ಲದೇ ವೈದ್ಯಕೀಯ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೂ ಹೆಚ್ಚಿನ ಅನುಕೂಲವಾಗಲಿದೆ. ನಗರದ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಓದುತ್ತಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ರೋಗಿಗಳು ಕೊರತೆಯಿಂದ ಉತ್ತಮ ಅನುಭವ ಹಾಗೂ ಅಭ್ಯಾಸ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ರ್ಯಾಂಡ್‌ ಬೆಂಗಳೂರಿನಡಿ ₹350 ಕೋಟಿ

ನಗರದ ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಸಂಬಂಧಿಸಿದಂತೆ ಬಿಬಿಎಂಪಿಯ ಆರೋಗ್ಯ ವಿಭಾಗದಿಂದ ಆಸ್ಪತ್ರೆಗಳ ಆಧುನೀಕರಣ, ಮೂಲಸೌಕರ್ಯ ಸೇರಿದಂತೆ ಮೊದಲಾದ ಕಾರ್ಯಕ್ಕೆ ಬಿಬಿಎಂಪಿಯು 350 ಕೋಟಿ ರು. ವೆಚ್ಚದಲ್ಲಿ ಯೋಜನೆ ಸಿದ್ದಪಡಿಸಲಾಗಿದೆ. ಬ್ರ್ಯಾಂಡ್‌ ಬೆಂಗಳೂರು ಯೋಜನೆಯಡಿ ಅನುದಾನಕ್ಕೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ.

PREV

Recommended Stories

ಶಿವಯೋಗಿ ಸೊಸೈಟಿಗೆ 20.97 ಲಕ್ಷ ಲಾಭ
ಯುವಜನತೆಗೆ ರಕ್ತದಾನದ ಮಹತ್ವ ತಿಳಿಸಿಕೊಡಿ