ಕೊಪ್ಪಳ: ಮತದಾರರ ಪಟ್ಟಿ ಪರಿಷ್ಕರಣೆ ಸಮಯದಲ್ಲಿ ಬಿಎಲ್ಓಗಳ ಮೂಲಕ ಪ್ರತಿ ಮನೆ ಮನೆಗೆ ಸಮೀಕ್ಷೆ ನಡೆಸಿ ದೋಷ ರಹಿತ ಮತದಾರರ ಪಟ್ಟಿ ತಯಾರಿಸುವಂತೆ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ವಿಧಾನಸಭಾ ಕ್ಷೇತ್ರದ ಮಾಸ್ಟರ್ ಟ್ರೈನರ್ ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜನವರಿ, ಏಪ್ರಿಲ್,ಜುಲೈ ಮತ್ತು ಅಕ್ಟೋಬರ್ ತಿಂಗಳುಗಳ ಮೊದಲ ವಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಯಲಿದ್ದು, ತಿದ್ದುಪಡಿ ಮತ್ತು ಹೊಸ ಮತದಾರರ ಸೇರ್ಪಡೆಗೆ ಅವಕಾಶವಿರುತ್ತದೆ. ಮತದಾರರ ಪಟ್ಟಿ ಪರಿಷ್ಕರಣೆಗೆ ನೇಮಕಗೊಂಡಿರುವ ಬಿಎಲ್ಓಗಳು ತಮಗೆ ವಹಿಸಿದ ಪಟ್ಟಿ ತೆಗೆದುಕೊಂಡು ಕೂಲಂಕಶವಾಗಿ ಪರಿಶೀಲಿಸಿ, ಪ್ರತಿ ಮನೆ ಮನೆಗೆ ಹೋಗಿ ಪರಿಶೀಲನೆ ಮಾಡಬೇಕು. ಇದರಲ್ಲಿ 18 ವರ್ಷ ಪೂರ್ಣಗೊಂಡಿರುವ ಹೊಸ ಮತದಾರರ ಹೆಸರನ್ನು ಸೇರಿಸಲು ಮತ್ತು ಸ್ಥಳಾಂತರಗೊಂಡ ಹಾಗೂ ಮರಣ ಹೊಂದಿದ ಮತದಾರರ ಹೆಸರನ್ನು ತೆಗೆದು ಹಾಕಲು ಅವಕಾಶವಿರುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲ ಬಿಎಲ್ಓಗಳಿಗೆ ಸೂಕ್ತ ತರಬೇತಿ ನೀಡಿ, ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಯಶಸ್ವಿಯಾಗಿ ನಿರ್ವಹಿಸಬೇಕು ಎಂದು ಮಾಸ್ಟರ್ ಟ್ರೈನರ್ ಗಳಿಗೆ ಸೂಚನೆ ನೀಡಿದರು.
ಚುನಾವಣಾ ನೋಂದಣಾಧಿಕಾರಿ (ಇ.ಆರ್.ಓ) ಅಥವಾ ಸಹಾಯಕ ಚುನಾವಣಾ ನೋಂದಣಾಧಿಕಾರಿ (ಎಇಆರ್ ಓ) ರವರ ನಿಯಂತ್ರಣ ಮತ್ತು ಮೇಲ್ವಿಚಾರಣೆಯಲ್ಲಿ ಬಿಎಲ್‌ಒ ತನಗೆ ನಿಯೋಜಿಸಲಾದ ಭಾಗ, ಮತಗಟ್ಟೆ, ಮತದಾನ ಪ್ರದೇಶದ ಮತದಾರರ ಪಟ್ಟಿ ನವೀಕರಿಸಬೇಕು. ಮೊದಲನೆಯದಾಗಿ ಬಿಎಲ್ಓಗಳು ಮತದಾರರ ಪಟ್ಟಿಯಲ್ಲಿ ಉಲ್ಲೇಖಿಸಲಾದ ಪ್ರದೇಶ ಅಥವಾ ಭಾಗಕ್ಕೆ ಭೇಟಿ ನೀಡಬೇಕು. ತಮಗೆ ಒದಗಿಸಲಾದ ಮತದಾರರ ಪಟ್ಟಿಯು ಪ್ರಸ್ತುತ ಮತದಾರರ ಪಟ್ಟಿಯಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಮತದಾರರ ಪಟ್ಟಿಯ ವಿಭಾಗಗಳು, ಮತಗಟ್ಟೆಯ ಪ್ರದೇಶಗಳು ಮತ್ತು ಸಂಬಂಧಪಟ್ಟ ಪ್ರದೇಶ, ಭಾಗಕ್ಕೆ ಹಂಚಿಕೆಯಾದ ಮತದಾರರ ಸಂಖ್ಯೆಯ ಬಗ್ಗೆ ಮಾಹಿತಿ ಪಡೆಯುವುದು ಅಗತ್ಯವಾಗಿರುತ್ತದೆ ಎಂದರು.ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಮಾತನಾಡಿ, ಬೂತ್ ಮಟ್ಟದ ಅಧಿಕಾರಿಗಳು ಇ.ಆರ್.ಓ /ಎ.ಇ.ಆರ್.ಓ ಪರವಾಗಿ ಅರ್ಜಿದಾರರಿಂದ (ಮತದಾರರು ಮತ್ತು ನಿರೀಕ್ಷಿತ ಮತದಾರರು) ಹಕ್ಕುಗಳು ಮತ್ತು ಆಕ್ಷೇಪಣೆ ಅರ್ಜಿನಮೂನೆ 6,7 ಮತ್ತು 8 ರಲ್ಲಿ ಸ್ವೀಕರಿಸಬೇಕು. ಹಕ್ಕುಗಳು ಮತ್ತು ಆಕ್ಷೇಪಣೆಗಳಿಗೆ ಸಂಬಂಧಿಸಿದಂತೆ ಕ್ಷೇತ್ರ ಪರಿಶೀಲನೆ ಮಾಡಿ ಮತ್ತು ಕ್ಷೇತ್ರ ಭೇಟಿಯ ನಂತರ, ವರದಿ ಇ.ಆರ್.ಓ.ಗೆ ಸಲ್ಲಿಸಬೇಕು. ಮನೆ ಮನೆಗೆ ಭೇಟಿ ನೀಡಿ, ಒಂದಕ್ಕಿಂತ ಹೆಚ್ಚು ಬಾರಿ ಕಾಣಿಸಿಕೊಳ್ಳುತ್ತಿರುವ ಹೆಸರು, ವರ್ಗಾವಣೆಗೊಂಡ, ಸ್ಥಳಾಂತರಗೊಂಡ, ವಲಸೆ ಬಂದ ಅಥವಾ ಮೃತ ಮತದಾರರನ್ನು ಪರಿಶೀಲಿಸಿ ವರದಿ ಸಲ್ಲಿಸಬೇಕು. ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಆಕ್ಷೇಪಣೆ ಸ್ವೀಕರಿಸಿದ ಮತದಾರರಿಗೆ ನೋಟಿಸ್ ನೀಡಲು ವರದಿ ಅಥವಾ ನಮೂನೆಗಳನ್ನು ಇ.ಆರ್.ಒ.ಗಳಿಗೆ ಸಲ್ಲಿಸಬೇಕು. ಗೊತ್ತುಪಡಿಸಿದ ಸ್ಥಳಗಳಲ್ಲಿ ಕರಡು ಮತದಾರರ ಪಟ್ಟಿ ಹಾಗೂ ನಿಗದಿತ ಪ್ರಕಟಣೆ ಪ್ರದರ್ಶಿಸಬೇಕು. ಮನೆ ಸಂಖ್ಯೆಗಳು ಲಭ್ಯವಿಲ್ಲದ ಮನೆಗಳಿಗೆ ಕಾಲ್ಪನಿಕ ಸಂಖ್ಯೆ ನೀಡಿ. ಮನೆ ಮನೆಗೆ ಭೇಟಿ ನೀಡುವ ಮೂಲಕ ಹಕ್ಕುಗಳು ಅಥವಾ ಆಕ್ಷೇಪಣೆಗಳ ಕುರಿತು ಸ್ಥಳ ಪರಿಶೀಲನೆ ಮಾಡಿ ನಂತರ ಇ.ಆರ್.ಓ.ಗಳಿಗೆ ತಮ್ಮ ವರದಿ ಸಲ್ಲಿಸಬೇಕು. ಬಿಎಲ್‌ಎಗಳ ಜತೆ ಸಮನ್ವಯ ಸಾಧಿಸಬೇಕು. ನಜ್ರ ನಕ್ಷೆ ಸಿದ್ಧಪಡಿಸಬೇಕು. ಮೃತ ಮತ್ತು ಸ್ಥಳಾಂತರಗೊಂಡ ಮತದಾರರನ್ನು ಗುರುತಿಸುವಂತೆ ಕ್ರಮ ವಹಿಸಲು ಸಂಬಂಧಿಸಿದ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು.
ಮನೆ-ಮನೆ ಸಮೀಕ್ಷೆಯ ದಾಖಲೆ ಬಿ.ಎಲ್.ಓ ರಿಜಿಸ್ಟರ್‌ನಲ್ಲಿ ನಿರ್ವಹಿಸಬೇಕು. ಮತದಾರರ ಪಟ್ಟಿ ಪರಿಷ್ಕರಿಸುವ ಮೊದಲು, ಬಿ.ಎಲ್.ಓ.ಗಳು ಸಂಬಂಧಪಟ್ಟ ಮತದಾನ ಕೇಂದ್ರದ ಮತದಾರರ ಮಾಹಿತಿ ಮತ್ತು ನಮೂನೆ 1-8 ಅನ್ನು ನಿರ್ವಹಿಸಬೇಕು. ಬಿ.ಎಲ್.ಓ ರಿಜಿಸ್ಟರ್ ಬಿ.ಎಲ್.ಓ ಆ್ಯಪ್ ನಲ್ಲಿ ಲಭ್ಯವಿದೆ ಎಂದು ಹೇಳಿದರು.ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ ಮಾತನಾಡಿ, ಬೂತ್ ಮಟ್ಟದ ಅಧಿಕಾರಿಗಳು ಭಾರತ ಚುನಾವಣಾ ಆಯೋಗ ನೀಡಿರುವ ಕ್ರಮ ಅನುಸರಿಸಬೇಕು. ಮನೆ ಮನೆ ಸಮೀಕ್ಷೆ ವೇಳೆ ಮೊದಲು ಸ್ವಂತ ಪರಿಚಯ ಮಾಡಿಕೊಂಡು ತಮ್ಮ ಗುರುತಿನ ಚೀಟಿ ಅಥವಾ ನೇಮಕಾತಿ ಪತ್ರ ತೋರಿಸಬೇಕು ಹಾಗೂ ಭಾರತ ಚುನಾವಣಾ ಆಯೋಗದ ಪ್ರತಿನಿಧಿಯಾಗಿ ಮನೆಗೆ ಬಂದಿರುವ ಉದ್ದೇಶ ತಿಳಿಸಬೇಕು. ನಿಮ್ಮ ಮೇಲಾಧಿಕಾರಿಯ (ಇ.ಆರ್.ಓ) ಹೆಸರು, ಹುದ್ದೆ, ವಿಳಾಸ ಮತ್ತು ಮೊಬೈಲ್ ನಂಬರನ್ನು ಮತದಾರರಿಗೆ ಒದಗಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ತಹಸೀಲ್ದಾರ ರವಿ ವಸ್ತ್ರದ್ ಸೇರಿದಂತೆ ವಿವಿಧ ತಾಲೂಕುಗಳ ತಹಸೀಲ್ದಾರರು, ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ಶಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದ ಮಾಸ್ಟರ್ ಟ್ರೈನರ್ ಗಳು ಹಾಗೂ ಮತ್ತಿತರರಿದ್ದರು.