ಕೃಷಿ, ಕೈಗಾರಿಕಾ ವಸ್ತುಪ್ರದರ್ಶನಕ್ಕೆ ಸಿದ್ಧತೆ ಕೈಗೊಳ್ಳಿ

KannadaprabhaNewsNetwork |  
Published : Dec 19, 2024, 12:31 AM IST
ಸಿದ್ಧಗಂಗಾ ಮಠದಲ್ಲಿ ಮುಂಬರುವ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಹಿನ್ನೆಲೆ ಪೂರ್ವಭಾವಿ ಸಭೆ ನಡೆಸಿದ ಜಿ.ಪಂ. ಸಿಇಓ ಪ್ರಭು | Kannada Prabha

ಸಾರಾಂಶ

ಶ್ರೀ ಸಿದ್ಧಗಂಗಾ ಕ್ಷೇತ್ರದಲ್ಲಿ 2025ರ ಫೆಬ್ರವರಿ 17 ರಿಂದ ಮಾರ್ಚ್ 3ರವರೆಗೆ 15 ದಿನಗಳ ಕಾಲ ನಡೆಯಲಿರುವ ವಸ್ತು ಪ್ರದರ್ಶನವನ್ನು ವೈವಿಧ್ಯಮಯವಾಗಿ ಜನಮೆಚ್ಚುವಂತೆ ಏರ್ಪಡಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಸೂಚಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರು ಶ್ರೀ ಸಿದ್ಧಗಂಗಾ ಕ್ಷೇತ್ರದಲ್ಲಿ 2025ರ ಫೆಬ್ರವರಿ 17 ರಿಂದ ಮಾರ್ಚ್ 3ರವರೆಗೆ 15 ದಿನಗಳ ಕಾಲ ನಡೆಯಲಿರುವ ವಸ್ತು ಪ್ರದರ್ಶನವನ್ನು ವೈವಿಧ್ಯಮಯವಾಗಿ ಜನಮೆಚ್ಚುವಂತೆ ಏರ್ಪಡಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಸೂಚಿಸಿದರು.ಶ್ರೀ ಸಿದ್ಧಗಂಗಾ ಮಠದಲ್ಲಿ ಬುಧವಾರ ಸಂಜೆ ನಡೆದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಸ್ತುಪ್ರದರ್ಶನವು ಜಿಲ್ಲೆಯ ಸಮಗ್ರ ಚಿತ್ರಣವನ್ನು ನೀಡುವಂತಿರಬೇಕು. ಕೃಷಿ, ಅರಣ್ಯ, ತೋಟಗಾರಿಕೆ, ಆರೋಗ್ಯ, ಕೈಗಾರಿಕೆ, ಪಶುವೈದ್ಯ, ರೇಷ್ಮೆ, ಮೀನುಗಾರಿಕೆ, ಶಿಕ್ಷಣ, ಜವಳಿ ಮತ್ತು ಕೈಮಗ್ಗ, ಗ್ರಾಮೀಣಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕ್ರೀಡಾ, ಪ್ರವಾಸೋದ್ಯಮ, ಕಾರ್ಮಿಕ, ವಾರ್ತಾ ಇಲಾಖೆಗಳು ಮಳಿಗೆಗಳನ್ನು ತೆರೆದು ವಿದ್ಯಾರ್ಥಿಗಳು, ಕೃಷಿಕರು, ಕೈಗಾರಿಕೋದ್ಯಮಿಗಳು, ಜನಸಾಮಾನ್ಯರಿಗೆ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಹಾಗೂ ಇಲಾಖೆಗಳು ನೀಡುವ ಸವಲತ್ತುಗಳ ಬಗ್ಗೆ ಜನಪರ ಮಾಹಿತಿಯನ್ನು ಈ ವಸ್ತುಪ್ರದರ್ಶನದಲ್ಲಿ ನೀಡಬೇಕು ಎಂದು ತಿಳಿಸಿದರು. ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳಲಿದ್ದು, ಅನಾನುಕೂಲವಾಗದಂತೆ ಕುಡಿಯುವ ನೀರು, ರಾತ್ರಿ ವೇಳೆಯಲ್ಲಿ ಬೆಳಕಿನ ವ್ಯವಸ್ಥೆ ಸೇರಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಲ್ಲದೆ, ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಮೈದಾಳ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮೋಹನ್ ಅವರಿಗೆ ಸೂಚನೆ ನೀಡಿದರು. ವಸ್ತುಪ್ರದರ್ಶನದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ನೀಡುವಂತಹ ಗಣಿತ, ವಿಜ್ಞಾನ, ಕ್ರೀಡೆಗಳನ್ನು ಏರ್ಪಡಿಸಬೇಕು. ಕೈಮಗ್ಗ ಉತ್ಪನ್ನ, ಕಲಾಕೃತಿಗಳು, ಕರಕುಶಲ ವಸ್ತುಗಳು ಮತ್ತು ದೇಶೀಯ ವಸ್ತುಗಳ ಈ ಪ್ರದರ್ಶನವು ಜಾತ್ರೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಬೇಕು. ಯಶಸ್ವಿ ಕೈಗಾರಿಕೋದ್ಯಮಿಗಳು ಮತ್ತು ಮಹಿಳಾ ಉದ್ಯಮಿಗಳು ಭಾಗವಹಿಸುವಂತೆ ಉತ್ತೇಜಿಸಬೇಕು ಎಂದರುಕೃಷಿ ಕ್ಷೇತ್ರದ ತಾಂತ್ರಿಕತೆ, ಆಧುನಿಕತೆ, ವೈವಿಧ್ಯಮಯ ಬೆಳೆ ತಳಿಗಳ ಪ್ರಾತ್ಯಕ್ಷಿಕೆ, ಸಮಗ್ರ ಬೆಳೆ ನಿರ್ವಹಣೆ, ಕೃಷಿ ಉಪಕರಣಗಳು, ಇತ್ತೀಚಿನ ಕೃಷಿ ಅಭಿವೃದ್ಧಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಹಾಗೂ ಕಡಿಮೆ ನೀರಿನಲ್ಲಿ ಹೆಚ್ಚಿನ ಇಳುವರಿ ಬೆಳೆಯುವ ಬೆಳೆ, ತಂತ್ರಜ್ಞಾನ ಆಧಾರಿತ ಕೃಷಿ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ರೈತರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು. ವಸ್ತುಪ್ರದರ್ಶನದಲ್ಲಿ ಪ್ರತಿ ದಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಶಿಕ್ಷಣ ಇಲಾಖೆಗಳು ಕ್ರಮವಹಿಸಬೇಕೆಂದು ತಿಳಿಸಿದರಲ್ಲದೆ, ವಸ್ತುಪ್ರದರ್ಶನಕ್ಕೆ ಭೇಟಿ ನೀಡುವವರಿಗೆ ಮಾಹಿತಿ ನೀಡಲು ಅನುವಾಗುವಂತೆ ಇಲಾಖೆಗಳ ಮಳಿಗೆಗಳಿಗೆ ಪಾಳಿ ಆಧಾರದ ಮೇಲೆ ಸಿಬ್ಬಂದಿಗಳನ್ನು ನಿಯೋಜಿಸಬೇಕು ಎಂದು ನಿರ್ದೇಶನ ನೀಡಿದರು. ವಸ್ತು ಪ್ರದರ್ಶನದಲ್ಲಿ ಭಾಗವಹಿಸುವ ವಿವಿಧ ಇಲಾಖೆಗಳ ಅಧಿಕಾರಿಗಳು ವಸ್ತುಪ್ರದರ್ಶನಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು. ಶ್ರೀ ಸಿದ್ಧಗಂಗಾ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಟ್ರಸ್ಟ್ನ ಜಂಟಿ ಕಾರ್ಯದರ್ಶಿ ಎಸ್.ಶಿವಕುಮಾರ್ ಸ್ವಾಗತಿಸಿದರು. ಶ್ರೀ ಸಿದ್ಧಗಂಗಾ ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ, ಕಾರ್ಯದರ್ಶಿ ಡಿ. ಗಂಗಾಧರಯ್ಯ, ಜಂಟಿ ಕಾರ್ಯದರ್ಶಿ ಕೆ.ಬಿ. ರೇಣುಕಯ್ಯ, ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ