ಶಿವಾನಂದ ಅಂಗಡಿ
ರಾಜ್ಯದ ಬಹುತೇಕ ಕಡೆ ಮುಂಗಾರು ಮಳೆ ಅಬ್ಬರಿಸುತ್ತಿದೆ. ರೈತರು ಜಮೀನುಗಳನ್ನು ಬಿತ್ತನೆ ಹದಗೊಳಿಸುತ್ತಿದ್ದು, ಮತ್ತೊಂದು ಹಂಗಾಮಿಗೆ ವೇದಿಕೆ ಸಿದ್ಧಗೊಂಡಿದೆ. ಆದರೆ, ಹೊಲಗಳಲ್ಲಿ ಟ್ರ್ಯಾಕ್ಟರ್‌ಗಳೇ ಅಬ್ಬರಿಸುತ್ತಿದ್ದು, ಎತ್ತುಗಳು ಸಂಖ್ಯೆ ತೀವ್ರ ಇಳಿಮುಖವಾಗಿದ್ದು, ಗುರುವಾರ ಇಲ್ಲಿಯ ಉಪಮಾರುಕಟ್ಟೆ ಪ್ರಾಂಗಣದಲ್ಲಿ ನಡೆದ ಜಾನುವಾರು ಸಂತೆಯಲ್ಲಿ ಲಕ್ಷ ರು. ವರೆಗೆ ಎತ್ತುಗಳು ಮಾರಾಟವಾಗಿದ್ದು ಕಂಡು ಬಂತು.
ಗದಗ ಹಾಗೂ ಹಾವೇರಿಯಲ್ಲಿ ಆಯಾ ನಿಗದಿ ದಿನದಂದು ಬೃಹತ್ ಪ್ರಮಾಣದಲ್ಲಿ ಜಾನುವಾರು ಸಂತೆ ನಡೆಯುತ್ತಿದ್ದು, ಕೃಷಿಕರ ಬೇಡಿಕೆಯಂತೆ ಎತ್ತುಗಳು ಲಭ್ಯವಿರುತ್ತವೆ. ನವಲಗುಂದದಲ್ಲೂ ಗುರುವಾರ ಜಾನುವಾರು ಸಂತೆ ನಡೆದುಕೊಂಡು ಬಂದಿದ್ದು, ಅಣ್ಣಿಗೇರಿ, ನವಲಗುಂದ ತಾಲೂಕಲ್ಲಿ 50ಕ್ಕೂ ಹೆಚ್ಚು ಹಳ್ಳಿಗಳು ಬರುತ್ತಿದ್ದು, ಎತ್ತುಗಳನ್ನು ಖರೀದಿಸುವವರು ಮತ್ತು ಮಾರಾಟ ಮಾಡುವವರು ಇಲ್ಲಿಗೆ ಬರುತ್ತಾರೆ.ಲಕ್ಷಕ್ಕೆ ಮಾರಾಟ:
ಜವಾರಿ, ಮೂಡಲ, ಕಿಲಾರಿ ಹೀಗೆ ಎತ್ತುಗಳಲ್ಲಿ ತರಹೇವಾರಿ ತಳಿಗಳು ಇದ್ದು, ಈ ಬಾರಿ ಬರೀ 30 ಜತೆ ಎತ್ತುಗಳು ಮಾತ್ರ ಮಾರಾಟಕ್ಕೆ ಬಂದಿದ್ದವು. ಈ ಪೈಕಿ ಕೇವಲ 7 ಜತೆ ಎತ್ತುಗಳ ಮಾತ್ರ ಮಾರಾಟವಾಗಿವೆ. ₹70 ಸಾವಿರದಿಂದ ಮೂಡಲ ತಳಿಯ ಒಂದು ಜತೆ ಎತ್ತು ₹1.12 ಲಕ್ಷಕ್ಕೆ ಮಾರಾಟವಾಗಿದೆ. ಮುಂಗಾರಿ ಬಿತ್ತನೆಗೆ ಎತ್ತುಗಳನ್ನು ಕೊಳ್ಳುವವರಿಗಿಂತ ಎತ್ತುಗಳ ವ್ಯಾಪಾರ ಮಾಡುವವರೇ ಹೆಚ್ಚಿನ ಪ್ರಮಾಣದಲ್ಲಿ ಎತ್ತುಗಳನ್ನು ಮಾರಾಟಕ್ಕೆ ತಂದಿದ್ದು ಕಂಡು ಬಂತು. ಜಾನುವಾರುಗಳ ಸಂಖ್ಯೆ ಇಳಿಮುಖವಾಗುತ್ತಿರುವುದರಿಂದ ಸಹಜವಾಗಿಯೇ ಅವುಗಳ ಬೆಲೆಯೂ ಲಕ್ಷ ರುಪಾಯಿದತ್ತ ಸಾಗಿದೆ.ನವಲಗುಂದ ಎತ್ತುಗಳ ಪೇಟೆಗೆ ಸವದತ್ತಿ, ರೋಣ, ಮರೇವಾಡದಿಂದಲೂ ಎತ್ತುಗಳು ಮಾರಾಟಕ್ಕೆ ಬರುತ್ತವೆ.
ಮೇ 24ರಿಂದ ರೋಹಿಣಿ ಮಳೆ ಪ್ರವೇಶ ಮಾಡಲಿದೆ. ''''ರೋಹಿಣಿ ಮಳೆಗೆ ಬಿತ್ತಿದರೆ ಓಣಿ ತುಂಬಾ ಕಾಳು'''' ಎಂಬ ಗಾದೆ ಮಾತು ಕೃಷಿಕರಲ್ಲಿ ಪ್ರಚಲಿತದಲ್ಲಿದೆ. ಆದರೆ ಬಿತ್ತನೆಗಾಗಿ ಎತ್ತುಗಳನ್ನು ಖರೀದಿಸುವ ಉತ್ಸಾಹ ಮಾತ್ರ ರೈತರಲ್ಲಿ ಕಂಡು ಬರುತ್ತಿಲ್ಲ. ಎಲ್ಲ ಕಡೆ ಈಗ ಟ್ರ್ಯಾಕ್ಟರ್‌ಗಳೇ ಹೆಚ್ಚಾಗಿದ್ದು, ಹೊಲ ಹರಗುವುದು, ನೇಗಿಲು ಹೊಡೆಯುವುದು, ಹೆಂಟೆಗಳು ನೆನೆದ ಮೇಲೆ ಮಣ್ಣು ಹೊಲ ತುಂಬೆಲ್ಲ ಹರಡುವಂತೆ ಸಮತಟ್ಟು ಮಾಡಲು ಎತ್ತುಗಳು ಬೇಕೆ ಬೇಕು, ಆದರೆ ಇಂದು ಟ್ರ್ಯಾಕ್ಟರ್‌ಗಳು ಹೆಚ್ಚಾಗಿದ್ದು, ಎತ್ತು ಸಾಕುವವರ ಸಂಖ್ಯೆ ಕಡಿಮೆಯಾಗಿದೆ, ''''ಎತ್ತಿನ ಚಾಕರಿ ಮಾಡುವವರು ಇಲ್ಲದಂಗ್ ಆಗೈತಿ'''' ಎಂದು ಕಳವಳ ವ್ಯಕ್ತಪಡಿಸುತ್ತಾರೆ ಎತ್ತುಗಳ ಪ್ರಿಯರು.ಸಗಣಿ ಗೊಬ್ಬರ ಸಿಗುತ್ತಿಲ್ಲ
ಕೃಷಿ ಕುಟುಂಬದಲ್ಲಿ ಎತ್ತುಗಳು ಮಾಯವಾಗಿದ್ದು, ಟ್ರ್ಯಾಕ್ಟರ್‌ಗಳು ಅಬ್ಬರಿಸುತ್ತಿವೆ. ಆದರೆ ಜಾನುವಾರುಗಳೇ ಇಲ್ಲದಿರುವುದರಿಂದ ಹೊಲಗಳಿಗೆ ಸಗಣಿ ಗೊಬ್ಬರವು ಸಹ ಸಿಗುತ್ತಿಲ್ಲ. ರಸಾಯನಿಕ ಗೊಬ್ಬರ ಮೇಲೆಯೇ ಈಗ ಕೃಷಿ ನಡೆಯುತ್ತಿದ್ದು, ದಶಕದಿಂದ ಕೃಷಿ ಭೂಮಿ ಮಣ್ಣಿನ ಪರೀಕ್ಷೆ ನಡೆಯದೇ ಬರಡು ಭೂಮಿಯಾಗುತ್ತಿರುವುದು ಕೃಷಿ ಪಂಡಿತರನ್ನು ಕಳವಳಕ್ಕೀಡು ಮಾಡಿದೆ.ಒಂದು ವರ್ಷದ ಹಿಂದೆ ₹1.10 ಲಕ್ಷ ಕೊಟ್ಟು 4 ಹಲ್ಲಿನ ಒಂದು ಜತೆ ಎತ್ತುಗಳನ್ನು ಖರೀದಿಸಿರುವೆ. ಈ ಬಾರಿ 6 ಹಲ್ಲಿನ ಎತ್ತುಗಳನ್ನು ಖರೀದಿಸಲು ಯೋಜಿಸಿದ್ದು, ಈಗಿರುವ ಎತ್ತುಗಳನ್ನು ಮಾರಲು ಬಂದಿರುವೆ. ಮನೆಯಲ್ಲಿ ಟ್ರ್ಯಾಕ್ಟರ್ ಇದ್ದರೂ ನಾವು ಎಡೆ ಸೇರಿದಂತೆ ಇನ್ನಿತರ ಕೆಲಸಗಳು ಹಾಗೂ ಸಗಣಿ ಗೊಬ್ಬರಕ್ಕಾಗಿ ಈಗಲೂ ಎತ್ತುಗಳನ್ನು ಆಶ್ರಯಿಸಿದ್ದೇವೆ ಎನ್ನುತ್ತಾರೆ ಕುಮಾರ ಮುರಗೋಡಮಠ.ಈಗೆಲ್ಲ ಗಾಡಿ (ಟ್ರ್ಯಾಕ್ಟರ್) ಸಂಖ್ಯೆ ಹೆಚ್ಚಾಗಿದ್ದು, ಎತ್ತುಗಳನ್ನು ಸಾಕುವವರ ಸಂಖ್ಯೆ ಕಡಿಮೆಯಾಗಿದೆ. ವಿಶೇಷವಾಗಿ ಕೊರೋನಾ ಬಳಿಕ ಎತ್ತುಗಳ ಸಂಖ್ಯೆ ಕಡಿಮೆಯಾಗಿದೆ. ನಾನು ಪ್ರತಿ ವಾರ ಈ ಸಂತೆಗೆ ಬರುತ್ತಿದ್ದು, ಇಲ್ಲಿಗೆ 35ರಿಂದ 40 ಜತೆ ಎತ್ತುಗಳು ಮಾರಾಟಕ್ಕೆ ಬರುತ್ತವೆ. ಅದರಲ್ಲಿ ನಾವೇ 5-6 ಜತೆ ಎತ್ತುಗಳನ್ನು ಮಾರುತ್ತೇವೆ ಎಂದು ಎತ್ತುಗಳ ವ್ಯಾಪಾರಸ್ಥ ಚಂದುಸಾಬ ಸವದತ್ತಿ ತಿಳಿಸಿದರು.