ಗಿರೀಶ್ ಮಾದೇನಹಳ್ಳಿ
ಬೆಂಗಳೂರು : ಸೈಬರ್ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವ ಸಲುವಾಗಿ ರಾಜ್ಯದಲ್ಲಿ ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ಮಟ್ಟದ ಅಧಿಕಾರಿಯ ಸಾರಥ್ಯದಲ್ಲಿ ಪ್ರತ್ಯೇಕ ಸೈಬರ್ ಘಟಕ ಸ್ಥಾಪಿಸುವಂತೆ ಸರ್ಕಾರಕ್ಕೆ ಡಿಜಿ-ಐಜಿಪಿ ಪ್ರಸ್ತಾವನೆ ಸಲ್ಲಿಸಿದ್ದಾರೆ.
ರಾಜ್ಯದಲ್ಲಿ ಅಪರಾಧ ಪ್ರಕರಣಗಳ ತನಿಖೆ ನಡೆಸುವ ಅಪರಾಧ ತನಿಖಾ ಇಲಾಖೆ (ಸಿಐಡಿ) ಹಾಗೂ ನಾಡಿನ ಭದ್ರತೆಗೆ ಅಪಾಯ ತಂದೊಡ್ಡುವ ದುಷ್ಕರ್ಮಿಗಳ ಮೇಲಿನ ಕಣ್ಗಾವಲಿಗಿರುವ ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಮಾದರಿಯಲ್ಲೇ ಸೈಬರ್ ಅಪರಾಧಗಳ ನಿಯಂತ್ರಣ ಘಟಕ ಅಥವಾ ಸೈಬರ್ ಕ್ರೈಂ ತನಿಖಾ ವಿಭಾಗ (ಸಿಸಿಐಬಿ) ರಚನೆಗೆ ಸರ್ಕಾರಕ್ಕೆ ಪೊಲೀಸ್ ಮಹಾನಿರ್ದೇಶಕ (ಡಿಜಿ-ಐಜಿ) ಅಲೋಕ್ ಮೋಹನ್ ಅವರು ಸವಿಸ್ತಾರವಾಗಿ ವರದಿ ಮಂಡಿಸಿದ್ದಾರೆ.
ಈ ಪ್ರಸ್ತಾಪಕ್ಕೆ ಸರ್ಕಾರ ಸಮ್ಮತಿಸಿದರೆ ದೇಶದಲ್ಲೇ ಸೈಬರ್ ಅಪರಾಧಗಳ ತನಿಖೆಗೆ ಪ್ರತ್ಯೇಕ ವಿಭಾಗವನ್ನು ಸ್ಥಾಪಿಸಿದ ಮೊದಲ ರಾಜ್ಯವೆಂಬ ಹೆಗ್ಗಳಿಕೆ ಕರ್ನಾಟಕದ್ದಾಗಲಿದೆ. ಈಗಾಗಲೇ ಈ ಸಂಬಂಧ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ಗೃಹ ಇಲಾಖೆ ಹಾಗೂ ಹಿರಿಯ ಐಪಿಎಸ್ ಅಧಿಕಾರಿಗಳ ಸಮಾಲೋಚನೆ ನಡೆದಿದ್ದು, ಕೆಲವೇ ದಿನಗಳಲ್ಲಿ ಸೈಬರ್ ಘಟಕ ಸ್ಥಾಪನೆ ಕುರಿತು ಸರ್ಕಾರವು ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಡಿಜಿಟಲ್ ಅರೆಸ್ಟ್, ಉದ್ಯೋಗ ನೀಡಿಕೆ ಹಾಗೂ ಉಡುಗೊರೆ ನೆಪದಲ್ಲಿ ಸಾರ್ವಜನಿಕರಿಗೆ ವಂಚಿಸಿ ಕೋಟ್ಯಂತರ ರು. ಹಣ ದೋಚುವ ಸೈಬರ್ ವಂಚಕರ ಹಾವಳಿ ಅನಿಯಂತ್ರಿತವಾಗಿದೆ. ಅಲ್ಲದೆ ನಿರಕ್ಷರಕುಕ್ಷಿಗಳಿಗೆ ಮಾತ್ರವಲ್ಲದೆ ಶಿಕ್ಷಣವಂತರಿಗೂ ಭೀತಿ ಹುಟ್ಟಿಸಿರುವ ಡಿಜಿಟಲ್ ಅರೆಸ್ಟ್ ಕುರಿತು ಪ್ರಧಾನಿ ನರೇಂದ್ರ ಮೋದಿ ಸಹ ಕಳಕಳ ವ್ಯಕ್ತಪಡಿಸಿದ್ದರು. ಸೈಬರ್ ಕ್ರೈಂ ವಿರುದ್ಧ ಸಮರಕ್ಕೆ ರಾಜ್ಯ ಖಾಕಿ ಪಡೆಯನ್ನು ಸಜ್ಜುಗೊಳಿಸಲು ಇಲಾಖೆ ಮುಂದಾಗಿದೆ.
ಹೇಗೆ ಘಟಕ ರಚನೆ?:
ರಾಜ್ಯ ಮಟ್ಟದಲ್ಲಿ ಸಿಐಡಿಯಲ್ಲಿ ಸೈಬರ್ ಅಪರಾಧಗಳ ಸಂಬಂಧ ಪ್ರತ್ಯೇಕ ವಿಭಾಗವಾಗಿದ್ದು, ಆ ವಿಭಾಗಕ್ಕೆ ಎಡಿಜಿಪಿ ಮುಖ್ಯಸ್ಥರಾಗಿದ್ದಾರೆ. ಅಲ್ಲದೆ ಪ್ರತಿ ಜಿಲ್ಲಾ ಹಾಗೂ ಕಮೀಷನರೇಟ್‌ನಲ್ಲಿ ಡಿಸಿಪಿ ವಲಯಗಳಲ್ಲಿ ಸ್ಥಾಪಿಸಿರುವ ಸಿಇಎನ್ ಠಾಣೆಗಳಿಗೆ ಎಸಿಪಿ-ಡಿವೈಎಸ್ಪಿ ಮಟ್ಟದ ಅಧಿಕಾರಿಯನ್ನು ಠಾಣಾಧಿಕಾರಿಯಾಗಿ ಸರ್ಕಾರ ನೇಮಿಸಿತ್ತು. ಹೀಗಿದ್ದರೂ ಸೈಬರ್ ದುರುಳರ ಅಟಾಟೋಪ ಮುಂದುವರೆದಿರುವುದು ಆತಂಕ ಮೂಡಿಸಿದೆ. ಹಾಗೆ ಪ್ರತಿದಿನ ಸೈಬರ್ ಕ್ರೈಂ ಸಂಬಂಧ ದಾಖಲಾಗುವ ದೂರುಗಳ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ವಾರ್ಷಿಕ 50 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ.
ಈ ಹಿನ್ನೆಲೆಯಲ್ಲಿ ಸೈಬರ್ ಅಪರಾಧಗಳ ತನಿಖೆಗೆ ಪ್ರತ್ಯೇಕ ತನಿಖಾ ಘಟಕ ಸ್ಥಾಪನೆಗೆ ಡಿಜಿ-ಐಜಿಪಿ ಅಲೋಕ್ ಮೋಹನ್ ಮುಂದಾಗಿದ್ದಾರೆ. ರಾಜ್ಯದಲ್ಲಿ ಆರು ಮಂದಿ ಹೆಚ್ಚುವರಿ ಡಿಜಿಪಿಗಳ ಪೈಕಿ ಒಬ್ಬರು ಈ ವಿಭಾಗದ ಮುಖ್ಯಸ್ಥರಾಗಲಿದ್ದಾರೆ.
ಸಿಐಡಿಯಲ್ಲಿರುವ ಎಡಿಜಿಪಿ ಹುದ್ದೆಯನ್ನು ರದ್ದುಗೊಳಿಸಿ ರಾಜ್ಯ ಡಿಜಿಪಿ ಮಟ್ಟದ ಅಧಿಕಾರಿ ಸಾರಥ್ಯದಲ್ಲಿ ಸೈಬರ್ ವಿಭಾಗ ಸ್ಥಾಪನೆಯಾಗಲಿದೆ. ಇದರಲ್ಲಿ ಓರ್ವ ಐಜಿಪಿ, ಡಿಐಜಿ ಹಾಗೂ ರಾಜ್ಯದ ಮೈಸೂರು, ಕಲುಬರಗಿ, ಬೆಳಗಾವಿ ಹಾಗೂ ಮಂಗಳೂರು ವಿಭಾಗಗಳಿಗೆ ತಲಾ ಎಸ್ಪಿಗಳನ್ನು ನೇಮಿಸಲಾಗುತ್ತದೆ. ಈ ವಿಭಾಗದಡಿ ಎಲ್ಲ ಸಿಇಎನ್ ಠಾಣೆಗಳು ಬರಲಿದ್ದು, ಸೈಬರ್ ಸಂಬಂಧಿ ಪ್ರಕರಣಗಳ ತನಿಖೆ ಹಾಗೂ ಜಾಗೃತಿ ಹೊಣೆಗಾರಿಕೆ ಇವುಗಳ ಮೇಲಿರಲಿದೆ ಎಂದು ಡಿಜಿ-ಐಜಿಪಿ ಅಲೋಕ್ ಮೋಹನ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಸೈಬರ್ ಘಟಕಗಳಿಗೆ ಪ್ರಸುತ್ತ ಸಿಇಎನ್ ಠಾಣೆಯಲ್ಲಿರುವ ಅಧಿಕಾರಿ-ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿದ್ದು, ಹೆಚ್ಚುವರಿ ಸಿಬ್ಬಂದಿಯನ್ನು ಆಯಾ ಜಿಲ್ಲೆಗಳಿಂದ ಎರವಲು ಸೇವೆ ಮೇರೆಗೆ ನಿಯೋಜಿಸಲಾಗುತ್ತದೆ. ಅಲ್ಲದೆ ತಾಂತ್ರಿಕ ನೆರವಿಗೆ ಸೈಬರ್ ತಜ್ಞರನ್ನು ಸಹ ನೇಮಿಸಿಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಸೈಬರ್ ವಿಭಾಗಕ್ಕೆ ನೇರ-ನೇಮಕಾತಿ ಬಗ್ಗೆ ಸಹ ಚಿಂತನೆ ನಡೆಸಲಾಗಿದೆ ಎಂದು ಡಿಜಿಪಿ ವಿವರಿಸಿದರು.
ಪ್ರತ್ಯೇಕ ಘಟಕ ಯಾಕೆ?
1.ಸೈಬರ್ ಕ್ರೈಂ ಪ್ರಕರಣಗಳ ತನಿಖೆ ತ್ವರಿತವಾಗಿ ಮುಗಿಸಲು
2.ಸ್ಥಳೀಯ ಪೊಲೀಸರ ಕಾರ್ಯದೊತ್ತಡ ತಗ್ಗಿಸಲು
3.ಸೈಬರ್ ಕ್ರೈಂಗಳಿಗೆ ಕಡಿವಾಣ ಹಾಕಲು
4.ಹೊಸ ಮಾದರಿಯ ಕ್ರೈಂಗಳ ಕುರಿತು ಜಾಗೃತಿ ಮೂಡಿಸಲು
5.ಸೈಬರ್ ಕ್ರೈಂ ತನಿಖೆಗೆ ವೃತ್ತಿಪರತೆ ದೊರಕಿಸಲು
6.ಹೊರ ರಾಜ್ಯಗಳ ಹಾಗೂ ವಿದೇಶಗಳ ತನಿಖಾ ಸಂಸ್ಥೆಗಳ ಜತೆ ಸಂವಹನಕ್ಕೆ ಅನುಕೂಲ
7.ಸೈಬರ್ ಅಪರಾಧಗಳ ತನಿಖೆಗೆ ತಾಂತ್ರಿಕ ನೆರವು ನೀಡಲು
ರಾಜ್ಯ ಮಟ್ಟದಲ್ಲಿ ಸೈಬರ್ ಕ್ರೈಂಗಳ ತನಿಖೆಗೆ ಪ್ರತ್ಯೇಕ ಘಟಕ ರಚನೆಗೆ ಪ್ರಸ್ತಾಪನೆ ಸಲ್ಲಿಸಲಾಗಿದೆ. ತಂತ್ರಜ್ಞಾನ ಯುಗದಲ್ಲಿ ಹೊಸ ಮಾದರಿಯ ಕ್ರೈಂ ನಿಯಂತ್ರಣಕ್ಕೆ ಪ್ರತ್ಯೇಕ ದಳದ ರಚನೆ ಅಗತ್ಯವಿದೆ
-ಅಲೋಕ್ ಮೋಹನ್, ರಾಜ್ಯ ಪೊಲೀಸ್ ಮಹಾನಿರ್ದೇಶಕ