ಕನ್ನಡಪ್ರಭ ವಾರ್ತೆ ಅರಸೀಕೆರೆ
ರಾಜ್ಯದ ಚಿಕ್ಕ ತಿರುಪತಿಯೆಂದೇ ಹೆಸರಾಗಿರುವ ಇತಿಹಾಸ ಪ್ರಸಿದ್ಧ ಮಾಲೇಕಲ್ ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ಮಹಾರಥೋತ್ಸವ ಜುಲೈ ೩೦ರ ಗುರುವಾರ 10.50 ರಿಂದ 12.50ಕ್ಕೆ ಸಲ್ಲುವ ಶುಭ ಕನ್ಯಾ ಲಗ್ನದಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನೆರವೇರಲಿದೆ.ಜಾತ್ರಾ ಮಹೋತ್ಸವವು ಜು.11ರಿಂದ ಜು.27ರವರೆಗೆ ೧೭ ದಿನಗಳ ಕಾಲ ವಿಜೃಂಭಣೆಯಿಂದ ನೆರವೇರಲಿದ್ದು ಜು.27ರವರೆಗೆ ಪ್ರತಿದಿನ ಬೆಟ್ಟದ ಮೇಲಿರುವ ಶ್ರೀ ವೆಂಕಟರಮಣ ಸ್ವಾಮಿ , ಶ್ರೀ ಪದ್ಮಾವತಿ ದೇವಿಗೆ ಹಾಗೂ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಗೋವಿಂದರಾಜ ಸ್ವಾಮಿ ಮತ್ತು ಶ್ರೀ ಲಕ್ಷ್ಮೀದೇವಿಗೆ ವಿಶೇಷ ಪೂಜಾ ಕೈಂಕರ್ಯ ನಡೆಯಲಿದೆ.ಜು. 18ರಂದು ನಡೆಯುವ ಮಹಾರಥೋತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಹಾಗೂ ಹೊರ ರಾಜ್ಯದಿಂದಲ್ಲದೇ, ವಿದೇಶದಿಂದಲೂ ಸುಮಾರು ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರ ದಂಡು ಹರಿದುಬರಲಿದ್ದು ಹೀಗೆ ಸೇರುವ ಭಕ್ತರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಸಕಲ ವ್ಯವಸ್ಥೆಗಳನ್ನು ಒದಗಿಸಲು ದೇವಾಲಯದ ಆಡಳಿತ ಮಂಡಳಿ ಹಾಗೂ ತಾಲೂಕು ಆಡಳಿತ ಸೂಕ್ತ ಕ್ರಮ ಕೈಗೊಂಡಿದೆ.ಬೆಟ್ಟದ ಮೇಲಿರುವ ವೆಂಕಟರಮಣಸ್ವಾಮಿ ದೇವಾಲಯ ಹಾಗೂ ತಪ್ಪಲಿನಲ್ಲಿರುವ ಗೋವಿಂದರಾಜ ಸ್ವಾಮಿ ದೇವಾಲಯ, ಆಂಜನೇಯ ಸ್ವಾಮಿ ದೇವಾಲಯ, ಕೆಂಚರಾಯ ಸ್ವಾಮಿ ದೇವಾಲಯ, ಸೂರ್ಯನಾರಾಯಣ ಸ್ವಾಮಿ ದೇವಾಲಯ, ಬೆಟ್ಟದ ಮೆಟ್ಟಿಲಮೇಲಿರುವ ಗುಂಡಮ್ಮ ದೇವಿ ಹಾಗೂ ಆಂಜನೇಯ ದೇವಾಲಯಗಳಲ್ಲಿ ಈಗಾಗಲೇ ಸುಣ್ಣ ಬಣ್ಣ ಹೊಡೆಯುವ ಕೆಲಸ ನಡೆಯುತ್ತಿದ್ದು ನಗರದಿಂದ ಮಾಲೇಕಲ್ ಗ್ರಾಮದವರೆಗೂ ಇರುವ ರಸ್ತೆಯ ಎರಡೂ ಬದಿ ಚರಂಡಿಯ ಹೂಳು ತೆಗೆಯುವ ಮೂಲಕ ಕಸ ವಿಲೇವಾರಿ ಕಾರ್ಯ ನಡೆಯುತ್ತಿದೆ.ಝಗಮಗಿಸಿದ ದೀಪಾಲಂಕಾರ: ಅಲಂಕಾರ ಪ್ರಿಯನಾದ ಶ್ರೀ ವೆಂಕಟರಮಣ ಸ್ವಾಮಿಗೆ ಚಿನ್ನಭರಣದ ಅಲಂಕಾರ ಸೇರಿದಂತೆ ವಿವಿಧ ಅಲಂಕಾರಗಳನ್ನು ಮಾಡಲಾಗುತ್ತಿದೆ. ಸಂಜೆ ನಡೆಯುವ ಉತ್ಸವಾದಿಗಳಲ್ಲಿ ನೂರಾರು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಲಿದ್ದಾರೆ ಹಾಗೂ ಬೆಟ್ಟದ ಮೇಲೆ ಇರುವ ದೇವಾಲಯಕ್ಕೂ ತಪ್ಪಲಿನಲ್ಲಿರುವ ಗೋವಿಂದರಾಜು ಸ್ವಾಮಿ ದೇವಾಲಯಕ್ಕೂ ಬಣ್ಣದ ವಿದ್ಯುತ್ ದೀಪ ಅಲಂಕಾರ ಮಾಡಲಾಗುತ್ತಿದ್ದು ಧರೆಯ ವೈಕುಂಠವೇ ಮಾಲೇಕಲ್ ತಿರುಪತಿ ಎಂಬರೀತಿ ಕಂಗೋಳಸುತ್ತಿದೆ ವೈಭವದ ರಥೋತ್ಸವಕ್ಕೆ ಸಿದ್ಧತೆ :ರಥೋತ್ಸವಕ್ಕೆ ಸಕಲಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು ಕಲ್ಯಾಣಿಯನ್ನು ನವೀಕರಿಸುವ ಕಾರ್ಯ ಪೂರ್ಣಗೊಂಡಿದ್ದು ಜಾತ್ರೆಯ ವೇಳೆಗೆ ಮತ್ತಷ್ಟು ಕಳೆಗಟ್ಟುವಂತೆ ಮಾಡಲಿದ್ದೆ ಈ ಎಲ್ಲಾ ಕಾರ್ಯಗಳಿಗೆ ಕಳಸವಿಟ್ಟಂತೆ ಇರುವ ರಾಜಗೋಪಾಲ ನಿರ್ಮಾಣ ಕಾರ್ಯವು ಸಂಪೂರ್ಣಗೊಂಡು 3-4 ವರ್ಷಗಳೇ ಕಳೇದ್ದರು ಲೋಕಅರ್ಪಣೆ ಯಾಗದೆ ನೆನೆಗುದಿಗೆ ಭಕ್ತರ ನಿರಾಶೆಗೆ ಕಾರಣವಾಗಿದೆ.
ಕಡಿದಾದ ೧೨೦೦ ಮೆಟ್ಟಿಲುಗಳನ್ನು ಹೊಂದಿರುವ ಮಾಲೇಕಲ್ ಗಿರಿಯನ್ನು ಹತ್ತಿ ಬೆಟ್ಟದ ಮೇಲಿರುವ ಲಕ್ಷ್ಮಿವೆಂಕಟರಮಣ ಸ್ವಾಮಿಯವರ ದರ್ಶನ ಪಡೆಯುವ ಪ್ರತೀತಿ ಬಹಳ ಹಿಂದಿನಿಂದಲೂ ಇದ್ದು, ನೂತನ ವಧು-ವರರು ತಮ್ಮ ಮೊದಲನೇ ವರ್ಷದಲ್ಲಿ ಬೆಟ್ಟವನ್ನೇರುವುದು ಸಂಪ್ರದಾಯಬದ್ಧವಾಗಿ ನಡೆದುಕೊಂಡು ಬಂದಿದೆ. ಪ್ರಕೃತಿಯ ಸೊಬಗಿನ ಮಡಿಲಲ್ಲಿ ಅಮರಗಿರಿಯು ತನ್ನದೆ ವೈಶಿಷ್ಟಗಳನ್ನು ಹೊಂದಿದ್ದು, ಇದು ವಶಿಷ್ಠ ಮಹಾ ಋಷಿಗಳು ಶ್ರೀಮನ್ ನಾರಾಯಣನನ್ನು ಕುರಿತು ತಪಸ್ಸು ಮಾಡಿದ ಪುಣ್ಯಸ್ಥಳ. ಅವರು ಆಷಾಢ ಮಾಸದ ದ್ವಾದಶಿಯಂದು ಶ್ರೀ ಹರಿಯ ದರ್ಶನ ಪಡೆದರೆಂದು ಹೇಳಲಾಗುತ್ತದೆ. ಅದೇ ರೀತಿ ಅಶ್ವತ್ಥಾಮಚಾರ್ಯರು ಬ್ರಹ್ಮಾತ್ಯ ದೋಷ ನಿವಾರಣೆಗಾಗಿ ವಶಿಷ್ಟ ತೀರ್ಥದಲ್ಲಿ ಮಿಂದು ತಪಸ್ಸು ಮಾಡಿ ಆಷಾಢ ದ್ವಾದಶಿಯಂದು ವೆಂಕಟೇಶ್ವರನ ದರ್ಶನ ಪಡೆದರೆಂದು ಅದಕ್ಕಾಗಿಯೇ ಆಷಾಢ ಮಾಸದ ದ್ವಾದಶಿಯಂದು ರಥೋತ್ಸನ ನಡೆಸುವ ಪರಿಪಾಟ ಬೆಳೆದುಬಂದಿದೆ.ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಗರುಡೋತ್ಸವ ಆಂಜನೇಯೋತ್ಸವ, ಸೂರ್ಯೋತ್ಸವ ನಡೆಯಲಿದ್ದು ಈ ಉತ್ಸವಮೂರ್ತಿಗಳನ್ನ ಶುದ್ಧಗೊಳಿಸುವ ಕಾರ್ಯದಲ್ಲಿ ದೇವಾಲಯದ ಅರ್ಚಕ ವೃಂದ ತೊಡಗಿದೆ. ಮತ್ತೊಂದೆಡೆ ದೇವಾಲಯದ ಸುತ್ತ ಒಣಗಿದ ಮರ ಹಾಗೂ ಗಿಡಗಂಟೆಗಳ ತೆರವಿ ಕಾರ್ಯಾಚರಣೆ ನಡೆಯುತ್ತಿದೆ.ಹರಕೆ ಹೊತ್ತ ಸಾವಿರಾರು ಭಕ್ತರು ರಥೋತ್ಸವ ದಿನದಂದು ದೇವರಿಗೆ ಮುಡಿ ಕೊಡುವ ಸಂಪ್ರದಾಯ ನಡೆದುಬಂದಿರುವುದರಿಂದ ಹೀಗೆ ಮುಡಿಕೊಡುವ ಭಕ್ತರಿಗೆ ಮಂಡೆಸ್ನಾನ ಮಾಡಲು ದೇವಾಲಯದ ಹೊರಭಾಗದಿಂದ ಪುಷ್ಕರಣಿಯನ್ನು ಸ್ವಚ್ಛ ಮಾಡಿ ಹೊಸದಾಗಿ ನೀರು ಶೇಖರಣೆ ಮಾಡಲಾಗಿದೆ. ಹೀಗೆ ಲಕ್ಷಾಂತರ ಸಂಖ್ಯೆಯಲ್ಲಿ ಸೇರುವ ಜಾತ್ರಾ ಮಹೋತ್ಸವದಲ್ಲಿ ಭಕ್ತರಿಗೆ ತೊಂದರೆಯಾಗದ ರೀತಿ ವ್ಯವಸ್ಥೆ ಕಲ್ಪಿಸಲು ದೇವಾಲಯದ ಆಡಳಿತ ಸಮಿತಿ ತೊಡಗಿದೆ.
*ಹೇಳಿಕೆ-1ಈ ಬಾರಿಯೂ ಶ್ರೀ ವೆಂಕಟರಮಣ ಸ್ವಾಮಿಯ ಮಹಾರಥೋತ್ಸವವನ್ನು ದೇವಾಲಯದ ಸಂಪ್ರದಾಯದಂತೆ ನಡೆಸಲು ಸಕಲಸಿದ್ಧತೆಗಳನ್ನು ಸಮಾರೋಪಾದಿಯಲ್ಲಿ ಮಾಡಲಾಗುತ್ತಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಸೇರುವ ಭಕ್ತಾದಿಗಳಿಗೆ ತೊಂದರೆಯಾಗದ ರೀತಿ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.
ಸಂತೋಷ್ ಕುಮಾರ್ , ತಹಸೀಲ್ದಾರ್