ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಾಗಲು ಮೂರರಿಂದ ಆರು ವರ್ಷದ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ಒದಗಿಸುವುದು ಪ್ರತಿ ಅಂಗನವಾಡಿ ಕಾರ್ಯಕರ್ತೆಯರ ಕರ್ತವ್ಯವಾಗಿದೆ ಎಂದು ಸಿಂದಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಂಭುಲಿಂಗ ಹಿರೇಮಠ ಹೇಳಿದರು.ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಉಜ್ವಲ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ, ಇಂಡಿಯಾ ಲಿಟ್ರಸಿ ಪ್ರಾಜೆಕ್ಟ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ, ಅಂಗನವಾಡಿ ಕಾರ್ಯಕರ್ತೆಯರಿಗೆ ಹಮ್ಮಿಕೊಂಡಿದ್ದ ಶಾಲಾ ಪೂರ್ವ ಶಿಕ್ಷಣ ಮೂರನೇ ಹಂತದ ತರಬೇತಿಯಲ್ಲಿ ಭಾಗವಹಿಸಿ ಮಾತನಾಡಿದರು. ಉಜ್ವಲ ಸಂಸ್ಥೆಯಿಂದ ನೀಡಲಾಗುತ್ತಿರುವ ಶಾಲಾ ಪೂರ್ವ ಶಿಕ್ಷಣ ತರಬೇತಿಯನ್ನು ಅಂಗನವಾಡಿ ಕಾರ್ಯಕರ್ತೆಯರು ಕಡ್ಡಾಯವಾಗಿ ಅನುಷ್ಠಾನ ಮಾಡಿದರೆ ಮಾತ್ರ, ಸಮುದಾಯದ ವಿಶ್ವಾಸ ಗಳಿಸಲು ಸಾಧ್ಯವಾಗುತ್ತದೆ. ಶಾಲಾ ಪೂರ್ವ ಶಿಕ್ಷಣವು ಅಂಗನವಾಡಿ ಕಾರ್ಯಕರ್ತೆಯರ ವೃತ್ತಿ ಗೌರವವನ್ನು ಹೆಚ್ಚಿಸುತ್ತದೆ. ಮೇಲಾಧಿಕಾರಿಗಳ ಭಯ ಹಾಗೂ ಒತ್ತಾಯದಿಂದ ಚಟುವಟಿಗಳನ್ನು ಮಾಡುವ ಬದಲು, ಸ್ವ ಮನಸ್ಸಿನಿಂದ ಅನುಷ್ಠಾನ ಮಾಡಿದಾಗ ಮಾತ್ರ ಮಕ್ಕಳ ಕಲಿಕೆಯಲ್ಲಿ ಬದಲಾವಣೆ ತರುವುದಕ್ಕೆ ಸಾಧ್ಯ. ಜೊತೆಗೆ ಇನ್ನೊಬ್ಬರಿಗೆ ಮಾದರಿಯಾಗಲು ಸಾಧ್ಯವಾಗುತ್ತದೆ. ಇದಕ್ಕೆ ಇಲಾಖೆಯಿಂದ ಎಲ್ಲ ಸಹಕಾರ ನೀಡುವುದಾಗಿ ಅವರು ತಿಳಿಸಿದರು.ಉಜ್ವಲ- ಐಎಲ್‌ಪಿ ಯೋಜನೆ ನಿರ್ದೇಶಕರಾದ ವಾಸುದೇವ ತೋಳಬಂದಿ ಮಾತನಾಡಿ, ಅಂಗವಾಡಿಗೆ ಬರುವವರು ಬಡವರ ಮಕ್ಕಳು. ಆ ಮಕ್ಕಳು ದೇವರ ಸಮಾನ. ಅವರಿಗೆ ಶಾಲಾ ಪೂರ್ವ ಶಿಕ್ಷಣ ಒದಗಿಸಿ ಕಲಿಕಾ ಮಟ್ಟವನ್ನು ಹೆಚ್ಚಿಸಿದರೆ ದೇವರ ಕೃಪೆಗೆ ಪಾತ್ರರಾದಂತೆ. ಕೆಲವು ಕಾರ್ಯಕರ್ತೆಯರು ತಮ್ಮ ಕೇಂದ್ರಗಳಲ್ಲಿ ನಾ ಮುಂದು ತಾ ಮುಂದು ಎಂದು ಪೈಪೋಟಿಗಿಳಿದು ಶಾಲಾ ಪೂರ್ವ ಶಿಕ್ಷಣ ಚಟುವಟಿಕೆಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಉಜ್ವಲ -ಐಎಲ್‌ಪಿ ತಾಲೂಕಾ ಸಂಯೋಜಕ ಸಾಗರ ಘಾಟಗೆ ಮಾತನಾಡಿ, ತಾಲೂಕಿನ ವಿವಿಧ ಕಡೆಗಳಲ್ಲಿ ಖಾಸಗಿ ಕೋಚಿಂಗ್ ಶಾಲೆಗಳನ್ನು ಬಿಟ್ಟು ಮಕ್ಕಳು ಮರಳಿ ಅಂಗನವಾಡಿ ಕೇಂದ್ರಕ್ಕೆ ಬರುತ್ತಿದ್ದಾರೆ. ಮಕ್ಕಳ ಕಲಿಕಾ ಬೆಳವಣಿಗೆ ಕಂಡು ಅವರ ಪಾಲಕ- ಪೋಷಕರು ಮತ್ತು ಸಮುದಾಯದ ಮುಖಂಡರು ಅಂಗನವಾಡಿ ಕೇಂದ್ರಗಳಿಗೆ ದೇಣಿಗೆ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಕಾರ್ಯಕರ್ತೆಯರ ಸಕಾರಾತ್ಮಕ ಆಲೋಚನೆ ಮತ್ತು ತರಬೇತಿಯ ಪ್ರಾಮಾಣಿಕ ಅನುಷ್ಠಾನವೇ ಇದಕ್ಕೆ ಮೂಲ ಕಾರಣವಾಗಿದೆ. ಮಕ್ಕಳ ಕಲಿಕಾ ಅಭಿವೃದ್ಧಿಗೆ ಕಾರ್ಯಕರ್ತೆಯರು ಇನ್ನೂ ಹೆಚ್ಚಾಗಿ ಸೇವಾ ನಿರತರಾಗಬೇಕಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕಿಯರಾದ ಶಾಂತಾ ನಾಯಿಕ, ಅಂಬಿಕಾ ಕುಂಬಾರ, ಶಹಜಾದ ಕಾಗಲ, ಸಂಪನ್ಮೂಲ ವ್ಯಕ್ತಿಗಳಾದ ಶಶಿಕಾಂತ ಸುಂಗಠಾಣ, ಶ್ರೀಶೈಲ ಜೋಗೂರ, ಮಲ್ಲಮ್ಮ ಹೊನ್ನಳ್ಳಿ ಹಾಗೂ ತಾಲೂಕಿನ 42 ಜನ ಅಂಗನವಾಡಿ ಕಾರ್ಯಕರ್ತೆಯರು ಇದ್ದರು. ರಾವುತ್ ಮರಬಿ ಸ್ವಾಗತಿಸಿ, ವಂದಿಸಿದರು.