ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಬಂಜಾರ ಸಮುದಾಯ ಸಂಸ್ಕ್ರತಿಯು ವಿಶಿಷ್ಟತೆಯಿಂದ ಕೂಡಿದೆ. ಬಂಜಾರ ಸಮಾಜ ಬಾಂಧವರು ಯಾವುದೇ ಧರ್ಮಕ್ಕೆ ಮತಾಂತರವಾಗದೇ ಸ್ವಧರ್ಮದಲ್ಲಿಯೇ ಉಳಿದುಕೊಂಡು ಸಮಾಜದ ಸಂಸ್ಕ್ರತಿಯನ್ನು ಸಂರಕ್ಷಿಸಬೇಕು ಎಂದು ಲಿಂಗಸೂರಿನ ವಿಜಯ ಮಹಾಂತೇಶ ಅನುಭವ ಮಂಟಪದ ಸಿದ್ದಲಿಂಗ ಸ್ವಾಮೀಜಿ ನುಡಿದರು.ಪಟ್ಟಣದ ಬಸವ ಭವನದಲ್ಲಿ ಭಾನುವಾರ ಅಖಿಲ ಕರ್ನಾಟಕ ಬಂಜಾರಾ ಧರ್ಮ ಗುರುಗಳ ಮಹಾಸಭಾವು ನಿಡಗುಂದಿ, ಕೊಲ್ಹಾರ, ಬಸವನಬಾಗೇವಾಡಿ ಮೂರು ತಾಲೂಕುಗಳಲ್ಲಿ ಒಂದು ವಾರ ಕಾಲ ಹಮ್ಮಿಕೊಂಡಿದ್ದ ಸಂತರ ನಡೆ ತಾಂಡಾ ಕಡೆ ಕಾರ್ಯಕ್ರಮದ ಅಭಿನಂದನಾ ಸಮಾರಂಭ ಹಾಗೂ ಭೋಗ ಭಂಡಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಂಜಾರ ಸಮುದಾಯದ ಬಾಂಧವರಿಗೆ ದುಶ್ಚಟಗಳಿಂದ ದೂರವಿರಬೇಕು. ಯಾವುದೇ ಕಾರಣಕ್ಕೂ ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡದಂತೆ, ವರದಕ್ಷಿಣೆ ಸ್ವೀಕರಿಸದಂತೆ, ಸಮಾಜದ ಧರ್ಮಗುರು ಸಂತಸೇವಾಲಾಲರ, ಮರಿಯಮ್ಮತಾಯಿ, ದುರ್ಗಾಮಾತೆ ಸೇರಿದಂತೆ ಸಮಾಜದ ಧರ್ಮಗುರುಗಳ ತತ್ವ ಸಂದೇಶಗಳನ್ನು ಮುಟ್ಟಿಸುವುದು, ಬಾಂಧವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದು, ಸಮಾಜಕ್ಕೆ ಧರ್ಮಸಂದೇಶಗಳನ್ನು ಮುಟ್ಟಿಸುವ ಉದ್ದೇಶದಿಂದ ಸಂತರ ನಡೆ ತಾಂಡಾದ ಕಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಈಗಾಗಲೇ ಈ ಕಾರ್ಯಕ್ರಮ ಕೊಪ್ಪಳ, ರಾಯಚೂರು, ಮುದ್ದೇಬಿಹಾಳ, ಯಾದಗಿರಿಯಲ್ಲಿ ಜರುಗಿದೆ. ಇದೀಗ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ, ಕೊಲ್ಹಾರ, ನಿಡಗುಂದಿ, ದೇವರಹಿಪ್ಪರಗಿ, ಸಿಂದಗಿ, ಇಂಡಿ ತಾಲೂಕಿನಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕಳೆದ ಒಂದು ವಾರದಿಂದ ನಿಡಗುಂದಿ, ಕೊಲ್ಹಾರ, ಬಸವನಬಾಗೇವಾಡಿ ಮೂರು ತಾಲೂಕಿನಲ್ಲಿ ಬರುವ ತಾಂಡಾಗಳಲ್ಲಿ ನಮ್ಮ ಧರ್ಮಗುರುಗಳು ಸಂಚರಿಸಿ ಸಮಾಜಕ್ಕೆ ಧರ್ಮ ಸಂದೇಶ ನೀಡಿದ್ದಾರೆ. ಮುಂದಿನ ವಾರದಲ್ಲಿ ದೇವರಹಿಪ್ಪರಗಿ ತಾಲೂಕಿನ ತಾಂಡಾಗಳಲ್ಲಿ ಈ ಕಾರ್ಯಕ್ರಮ ಜರುಗಲಿದೆ ಎಂದರು. ಈಗಾಗಲೇ ನಮ್ಮ ಕಾರ್ಯಕ್ರಮದಿಂದಾಗಿ ಶೇ.೯೦ ರಷ್ಟು ತಾಂಡಾಗಳಲ್ಲಿ ನಮ್ಮ ಬಾಂಧವರು ತಮ್ಮ ಸಾರಾಯಿ ಮಾರಾಟ ಮಾಡುವುದನ್ನು ಕಡಿಮೆ ಮಾಡಿದ್ದಾರೆ. ಆದರೆ, ಸರ್ಕಾರದಿಂದ ಮಾರಾಟವಾಗುವ ಸಾರಾಯಿ ಮಾರಾಟವಾಗುತ್ತಿದೆ. ನಮ್ಮ ಬಾಂಧವರು ಯಾವುದೇ ಕಾರಣಕ್ಕೂ ಸಾರಾಯಿ ದಾಸರಾಗದೇ ದುಡಿಯುವ ಮೂಲಕ ಆರ್ಥಿಕವಾಗಿ ಸಬಲರಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಬರುವಂತಾಗಬೇಕು ಎಂದು ತಿಳಿಸಿದರು.ಅಖಿಲ ಕರ್ನಾಟಕ ಬಂಜಾರಾ ಧರ್ಮ ಗುರುಗಳ ಮಹಾಸಭಾ ಅಧ್ಯಕ್ಷ, ಚೌಡಾಪೂರದ ಮುರಹರಿ ಮಹಾರಾಜರು ಮಾತನಾಡಿ, ಸಮಾಜ ಬಾಂಧವರು ಧರ್ಮ ಸಂದೇಶಗಳನ್ನು ಅರಿತು ಒಳ್ಳೆಯ ಮಾರ್ಗದಲ್ಲಿ ನಡೆಯುವಂತಾಗಬೇಕು. ಸಮಾಜಕ್ಕೆ ಅನೇಕ ಗುರುಗಳು ಸನ್ಮಾರ್ಗ ತೋರಿಸಿದ್ದಾರೆ. ಅವರು ತೋರಿಸಿದ ಮಾರ್ಗದಲ್ಲಿ ನಡೆಯುವಂತಾಗಬೇಕು ಎಂದರು.ಕೆಸರಟಗಿಯ ಲತಾ ಮಾತಾ ಮಾತನಾಡಿ, ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಯಾವುದೇ ಕೆಟ್ಟ ಚಟಗಳಿಗೆ ದಾಸರಾಗದೇ ಉತ್ತಮ ಜೀವನ ನಡೆಸಬೇಕು ಎಂದರು.ದೇವಾಪೂರದ ಸರಸ್ವತಿ ಮಾತಾ ಮಾತನಾಡಿ, ಬಾಂಧವರು ಗುರುಸೇವೆ ಮಾಡುವ ಜೊತೆಗೆ ಸಮಾಜ ಸೇವೆ ಮಾಡಬೇಕು. ಈ ಕಾರ್ಯಕ್ರಮದಲ್ಲಿ ಅನೇಕ ಪೂಜ್ಯರ ದರ್ಶನ ಬಾಂಧವರಿಗೆ ಸಿಗುತ್ತದೆ. ಇದರಿಂದಾಗಿ ಎಲ್ಲರೂ ಉತ್ತಮ ಜೀವನ ನಡೆಸುವಂತಾಗಬೇಕು ಎಂದರು.ಸಮಾಜದ ಹಿರಿಯ ಮುಖಂಡ, ಪುರಸಭೆ ಸದಸ್ಯ ನೀಲಪ್ಪ ನಾಯಕ ಪ್ರಾಸ್ತವಿಕವಾಗಿ ಮಾತನಾಡಿ, ಸಮಾಜದ ಗುರುಗಳು ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ಇದೊಂದು ಮಾದರಿ ಕಾರ್ಯಕ್ರಮವಾಗಿದೆ. ಎಲ್ಲ ಬಾಂಧವರು ಶ್ರೀಗಳ ಸಂದೇಶದಂತೆ ಒಳ್ಳೆಯ ಮಾರ್ಗದಲ್ಲಿ ನಡೆಯುವಂತಾಗಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಭೂಪಾಲ ಮಹಾರಾಜರು, ಭೀಮು ಮಹಾರಾಜರು, ಪ್ರತಾಪ ಮಹಾರಾಜರು. ಸುನೀಲ ಮಹಾರಾಜರು, ಶಂಕರ ಮಹಾರಾಜರು, ಸವಿತಾದೇವಿ, ಲಕ್ಷ್ಮೀದೇವಿ, ಧರ್ಮಿಣಿದೇವಿ, ಯಶೋದಾಮಾತಾ, ನಾಗು ಮಹಾರಾಜರು, ಸಂತೋಷ ಮಹಾರಾಜರು, ಶಿವಪ್ರಕಾಶ ಮಹಾರಾಜರು, ಧನಸಿಂಗ ಮಹಾರಾಜರು, ಜಗನು ಮಹಾರಾಜರು, ಸೋಮಲಿಂಗ ಮಹಾರಾಜರು, ಶ್ರೀಕಾಂತ ಮಹಾರಾಜರು, ಸುರೇಶ ಮಹಾರಾಜರು, ಪ್ರಕಾಶ ಮಹಾರಾಜರು, ಶಂಕರ ಮಹಾರಾಜರು ಇತರರು ಇದ್ದರು. ರಾಜು ರಾಠೋಡ, ಅನಿಲಕುಮಾರ ರಾಠೋಡ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಸಮಾಜದ ಎಲ್ಲ ಧರ್ಮಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಅಭಿನಂದಿಸಲಾಯಿತು. ಮಾಜಿ ಶಾಸಕ ದೇವಾನಂದ ಚವ್ಹಾಣ, ಜಿಪಂ ಮಾಜಿ ಸದಸ್ಯೆ ಅನುಸೂಯಾ ಜಾಧವ, ಪುರಸಭೆ ಸದಸ್ಯ ನೀಲಪ್ಪ ನಾಯಕ ಸೇರಿದಂತೆ ಕಾರ್ಯಕ್ರಮಕ್ಕೆ ಸಹಕಾರ ನೀಡಿದವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ನಿಡಗುಂದಿ ರಸ್ತೆಯಲ್ಲಿರುವ ಸಂತಸೇವಾಲಾಲ್ ವೃತ್ತದಿಂದ ಸಂತಸೇವಾಲಾಲ್‌ರ ಭಾವಚಿತ್ರ, ದುರ್ಗಾಮಾತೆ ಭಾವಚಿತ್ರ ವಿವಿಧ ವಾದ್ಯಮೇಳದೊಂದಿಗೆ ಅದ್ಧೂರಿ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿತು. ಮೆರವಣಿಗೆಯಲ್ಲಿ ಬಸವನಬಾಗೇವಾಡಿ, ನಿಡಗುಂದಿ, ಕೊಲ್ಹಾರ ತಾಲೂಕಿನಲ್ಲಿರುವ ತಾಂಡಾದ ಬಾಂಧವರು ಭಾಗವಹಿಸಿದ್ದರು.