1500ಕ್ಕೂ ಅಧಿಕ ಅಂತ್ಯಸಂಸ್ಕಾರ ಮಾಡಿದ ಗಣೇಶ್ ಕುಲಾಲ್‌ಗೆ ಪ್ರೆಸ್ ಕ್ಲಬ್ ಪ್ರಶಸ್ತಿ

KannadaprabhaNewsNetwork | Published : Jan 15, 2025 12:46 AM

ಸಾರಾಂಶ

ಗಣೇಶ್‌ ಕುಲಾಲ್‌ ಅವರ ತಂದೆ ಮೃತದೇಹಗಳ ಅಂತ್ಯಕ್ರಿಯೆ ಮಾಡುತ್ತಿದ್ದರು. ಅವರ ಸೇವೆಗೆ ಕೈಜೋಡಿಸಲು ಚಿಕ್ಕಂದಿನಲ್ಲಿ ಹೋಗುತ್ತಿದ್ದೆ. 30ರ ಹರೆಯಲ್ಲಿ ಈ ಸೇವೆಗೆ ಇಳಿದೆ. ಆರಂಭದಲ್ಲಿ ಮನೆಯಲ್ಲಿ ವಿರೋಧ ಕಂಡುಬಂದಿತ್ತು. ಆದರೆ ತಾಯಿ ನನಗೆ ಪೂರ್ಣ ಬೆಂಬಲ ನೀಡಿದರು ಎನ್ನುತ್ತಾರೆ ಗಣೇಶ್ ಕುಲಾಲ್.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಆಗಿ ಕಾರ್ಯ ನಿರ್ವಹಿಸುವುದರ ಜತೆಗೆ ಅನಾಥ ಶವಗಳ ಅಂತ್ಯ ಸಂಸ್ಕಾರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಗಣೇಶ ಕುಲಾಲ್ ಅವರು 2024-25ನೇ ಸಾಲಿನ ಮಂಗಳೂರು ಪ್ರೆಸ್ ಕ್ಲಬ್ ವರ್ಷದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ನೇತೃತ್ವದ ಆಯ್ಕೆ ಸಮಿತಿಯು ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಜ. 26ರಂದು ನಡೆಯಲಿರುವ ಪ್ರೆಸ್ ಕ್ಲಬ್ ದಿನಾಚರಣೆಯಲ್ಲಿ ಗಣೇಶ ಕುಲಾಲ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾನವೀಯ ಕಾರ್ಯ:

ಗಣೇಶ್ ಕುಲಾಲ್ ಅವರು ವಾರಸುದಾರರು ಇಲ್ಲದ ಅನಾಥ ಶವಗಳಿಗೆ ಗೌರವಯುತವಾಗಿ ಅಂತ್ಯಕ್ರಿಯೆ ನೆರವೇರಿಸುವ ಮಾನವೀಯ ಕಾರ್ಯದಲ್ಲಿ 25 ವರ್ಷಗಳಿಂದ ತೊಡಗಿಕೊಂಡಿದ್ದಾರೆ. ಬಡವರು, ಶ್ರೀಮಂತರು, ಅನಾಥರು ಎಂಬ ಭೇದವಿಲ್ಲದೆ ಇದುವರೆಗೆ 1500ಕ್ಕೂ ಅಧಿಕ ಮೃತದೇಹಗಳಿಗೆ ಅಂತ್ಯ ಸಂಸ್ಕಾರ ನೆರವೇರಿಸಿದ ಸಾಧನೆ ಇವರದ್ದು. ಈ ಸೇವೆಗಾಗಿ ಯಾರಿಂದಲೂ ಏನನ್ನೂ ಪಡೆಯುವುದಿಲ್ಲ.

ತಂದೆಯೇ ಪ್ರೇರಣೆ: ಗಣೇಶ್‌ ಕುಲಾಲ್‌ ಅವರ ತಂದೆ ಮೃತದೇಹಗಳ ಅಂತ್ಯಕ್ರಿಯೆ ಮಾಡುತ್ತಿದ್ದರು. ಅವರ ಸೇವೆಗೆ ಕೈಜೋಡಿಸಲು ಚಿಕ್ಕಂದಿನಲ್ಲಿ ಹೋಗುತ್ತಿದ್ದೆ. 30ರ ಹರೆಯಲ್ಲಿ ಈ ಸೇವೆಗೆ ಇಳಿದೆ. ಆರಂಭದಲ್ಲಿ ಮನೆಯಲ್ಲಿ ವಿರೋಧ ಕಂಡುಬಂದಿತ್ತು. ಆದರೆ ತಾಯಿ ನನಗೆ ಪೂರ್ಣ ಬೆಂಬಲ ನೀಡಿದರು ಎನ್ನುತ್ತಾರೆ ಗಣೇಶ್ ಕುಲಾಲ್.

ಗಣೇಶ್ ಕುಲಾಲ್ ಅವರು ಶವಗಳ ವಿಲೇವಾರಿ ಮಾತ್ರವಲ್ಲ, ಕಾಯಿಲೆ ಬಿದ್ದವರನ್ನು ಆಸ್ಪತ್ರೆಗೆ ಸಾಗಿಸಿ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಕಾರ್ಯವನ್ನು ಮಾಡುತ್ತಾರೆ. ಕೊರೋನಾ ಸಮಯದಲ್ಲಿ 150ಕ್ಕೂ ಅಧಿಕ ಶವಗಳಿಗೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಆ ಸಮಯದಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದರು. ನಿರಾಶ್ರಿತರ ಶಿಬಿರ ಆರಂಭಿಸಿ ಸುಮಾರು 30 ಮಂದಿಗೆ ಮೂರು ಹೊತ್ತು ಆಹಾರದ ವ್ಯವಸ್ಥೆಯನ್ನು ಹಲವು ತಿಂಗಳುಗಳ ಕಾಲ ನೀಡಿದ್ದರು.

55 ಹರೆಯದ ಗಣೇಶ್ ಕುಲಾಲ್ 8ನೇ ತರಗತಿ ಶಿಕ್ಷಣ ಪಡೆದಿದ್ದಾರೆ. ಚಿಕ್ಕಂದಿನಲ್ಲಿ ಕೆಂಪು ಕಲ್ಲು ಹೊರುವ ಕೆಲಸದ ಮೂಲಕ ದುಡಿಯಲು ಆರಂಭಿಸಿದ್ದು, ಒಂದು ಕಲ್ಲಿಗೆ 50 ಪೈಸೆಯಿಂದ ಒಂದು ರು. ಸಿಗುತ್ತಿತ್ತು. ಅದೇ ದುಡಿಮೆಯಿಂದ ಬಂದ ಆದಾಯವನ್ನು ಕೂಡಿಟ್ಟು ರಿಕ್ಷಾ ಖರೀದಿಸಿದರು. ಬಳಿಕ ಮಿನಿ ಟೆಂಪೋ ಖರೀದಿಸಿ, ಅದರಲ್ಲಿ ಚಾಲಕರಾಗಿ ದುಡಿಯುತ್ತಾ, ಸಣ್ಣ ಕಾರ್ಯಕ್ರಮಗಳಿಗೆ ಬಾಡಿಗೆಗೆ ಶಾಮಿಯಾನ ನೀಡುವ ಬ್ಯುಸಿನೆಸ್ ಆರಂಭಿಸಿದ್ದರು. ಗಣೇಶ್ ಕುಲಾಲ್ ಅವರ ಸಮಾಜ ಸೇವೆಗೆ ಪತ್ನಿ, ಪುತ್ರ ಪ್ರೋತ್ಸಾಹ ನೀಡುತ್ತಿದ್ದಾರೆ.

ಸ್ವಂತ ಮನೆಯಿಲ್ಲ: ಗಣೇಶ್ ಕುಲಾಲ್ ಅವರಿಗೆ ಸ್ವಂತ ಮನೆಯಿಲ್ಲ. ಹೆತ್ತವರು ಉರ್ವ ಮಾರಿಗುಡಿ ದೇವಸ್ಥಾನದ ಚಾಕರಿ ಮಾಡಿಕೊಂಡು ಇದ್ದವರು. ದೇವಸ್ಥಾನದ ಚಾಕರಿ ಮಾಡುವವರಿಗೆ ದೇವಸ್ಥಾನದ ವತಿಯಿಂದ ಮನೆ ನೀಡಲಾಗುತ್ತದೆ. ಅದೇ ಮನೆಯಲ್ಲಿ ಇವರು ಹುಟ್ಟಿ ಬೆಳೆದವರು. ಅಮ್ಮ(ಮಾರಿಯಮ್ಮ)ನನ್ನು ಬಿಟ್ಟು ಬೇರೆ ಕಡೆಗೆ ಹೋಗಲು ಮನಸ್ಸು ಒಪ್ಪುತ್ತಿಲ್ಲ ಎಂದು ಹೇಳುವ ಅವರು ತನ್ನ ಕಾಯಕ ಮುಂದುವರಿಸಿದ್ದಾರೆ. ಸ್ಥಳೀಯ ಸ್ಥಳೀಯ ದಾನಿಗಳ ನೆರವಿನಲ್ಲಿ 7 ಲಕ್ಷ ರು. ವೆಚ್ಚದಲ್ಲಿ ಉರ್ವದಲ್ಲಿ ಮನೆ (ಅಟಲ್ ನಿಲಯ) ನಿರ್ಮಿಸಿ ಕೊಟ್ಟಿದ್ದಾರೆ.

Share this article