ಸಿಬಿಎಸ್‌ಇ, ಐಸಿಎಸ್‌ಇ ಮಾದರಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ವ್ಯವಸ್ಥೆಯನ್ನು ಪುನಾರಚಿಸಬೇಕೆಂದು ವಿದ್ಯಾರ್ಥಿಗಳು ಹಾಗೂ ಪೋಷಕರ ವಲಯದಲ್ಲಿ ಆಗ್ರಹ, ಒತ್ತಡ ವ್ಯಕ್ತವಾಗುತ್ತಿದೆ.
ಬೆಂಗಳೂರು : ರಾಜ್ಯದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ವ್ಯವಸ್ಥೆಯಲ್ಲಿ ಹಲವು ವರ್ಷಗಳಿಂದ ಆಗುತ್ತಿರುವ ಅನ್ಯಾಯ ಸರಿಪಡಿಸಲು ಸರ್ಕಾರ ಕೂಡಲೇ ಕ್ರಮ ವಹಿಸಬೇಕು. ಸಿಬಿಎಸ್‌ಇ, ಐಸಿಎಸ್‌ಇ ಮಾದರಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ವ್ಯವಸ್ಥೆಯನ್ನು ಪುನಾರಚಿಸಬೇಕೆಂದು ವಿದ್ಯಾರ್ಥಿಗಳು ಹಾಗೂ ಪೋಷಕರ ವಲಯದಲ್ಲಿ ಆಗ್ರಹ, ಒತ್ತಡ ವ್ಯಕ್ತವಾಗುತ್ತಿದೆ.
ಇತ್ತೀಚೆಗಷ್ಟೆ ಕ್ಯಾಮ್ಸ್, ರುಪ್ಸಾ ಸೇರಿದಂತೆ ರಾಜ್ಯದ ಪ್ರಮುಖ ಖಾಸಗಿ ಶಾಲಾ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕೆಲ ಶಿಕ್ಷಣ ತಜ್ಞರು ಕೇಂದ್ರೀಯ ಪಠ್ಯಕ್ರಮದ (ಸಿಬಿಎಸ್‌ಇ, ಐಸಿಎಸ್‌ಇ) 10ನೇ ತರಗತಿ ಪರೀಕ್ಷಾ ವ್ಯವಸ್ಥೆ ಮತ್ತು ರಾಜ್ಯದ ಎಸ್ಸೆಸ್ಸೆಲ್ಸಿ ಪರೀಕ್ಷಾ ವ್ಯವಸ್ಥೆ ನಡುವಿನ ವ್ಯತ್ಯಾಸಗಳು, ಇದರಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಬೆಳಕು ಚೆಲ್ಲಿದ್ದರು. ಇದರ ಬೆನ್ನಲ್ಲೇ ವಿದ್ಯಾರ್ಥಿಗಳು ಮತ್ತು ಪೋಷಕರ ವಲಯದಲ್ಲೂ ಈ ಅನ್ಯಾಯ ತಪ್ಪಿಸಲು ಎಸ್ಸೆಸ್ಸೆಲ್ಸಿ ಪರೀಕ್ಷಾ ವ್ಯವಸ್ಥೆ ಪುನಾರಚಿಸುವಂತೆ ಒತ್ತಾಯ ವ್ಯಾಪಕವಾಗಿ ಕೇಳಿಬರುತ್ತಿದೆ.
ಸಿಬಿಎಸ್‌ಇ ಮತ್ತು ಐಸಿಎಸ್‌ಇ 10ನೇ ತರಗತಿಯಲ್ಲಿ ಉತ್ತೀರ್ಣಕ್ಕೆ ವಿದ್ಯಾರ್ಥಿ ಪಡೆಯಬೇಕಾದ ಕನಿಷ್ಠ ಅಂಕ ಪ್ರಮಾಣವನ್ನು 33ಕ್ಕೆ ಇಳಿಸಲಾಗಿದೆ. ಇದಕ್ಕೆ ಆಂತರಿಕ ಮೌಲ್ಯಮಾಪನದ ಅಂಕಗಳನ್ನೂ ಪರಿಗಣಿಸಲಾಗುತ್ತದೆ. ಅರ್ಥಾತ್ 20 ಅಂಕಗಳ ಆಂತರಿಕ ಮೌಲ್ಯಮಾಪನದಲ್ಲಿ ವಿದ್ಯಾರ್ಥಿ 15 ಅಂಕ ಪಡೆದಿದ್ದರೆ ಲಿಖಿತ ಅಥವಾ ಬಾಹ್ಯ ಪರೀಕ್ಷೆಯಲ್ಲಿ 18 ಅಂಕ ಪಡೆದರೆ ಸಾಕು ಒಟ್ಟು 33 ಅಂಕಗಳೊಂದಿಗೆ ಉತ್ತೀರ್ಣರಾಗುತ್ತಾರೆ.
ಆದರೆ, ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಪಾಸಾಗಲು ಆಂತರಿಕ ಪರೀಕ್ಷೆಯಲ್ಲಿ 20 ಅಂಕಗಳನ್ನು ಪಡೆದರೂ ಅದರ ಒಂದು ಅಂಕವನ್ನೂ ಕನಿಷ್ಠ ಉತ್ತೀರ್ಣ ಅಂಕಗಳಿಗೆ ಸಂಯೋಜಿಸುವುದಿಲ್ಲ. ಬದಲಿಗೆ ಶೇ.80ರಷ್ಟು ಅಂಕಗಳಿಗೆ ನಡೆಯುವ ಲಿಖಿತ ಪರೀಕ್ಷೆಯಲ್ಲಿ ಶೇ.35ರಷ್ಟು ಅಂದರೆ 80ಕ್ಕೆ 28 ಅಂಕಗಳನ್ನು ಲಿಖಿತ ಅಥವಾ ಬಾಹ್ಯ ಪರೀಕ್ಷೆಯಲ್ಲಿ ಪಡೆಯಲೇಬೇಕು. ಆಂತರಿಕ ಮೌಲ್ಯಮಾಪನದ ಅಂಕಗಳನ್ನು ಕೇವಲ ಒಟ್ಟಾರೆ ಫಲಿತಾಂಶಕ್ಕೆ ಮಾತ್ರ ಪರಿಗಣಿಸಲಾಗುತ್ತದೆ. ಇದರಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಭಾರೀ ಅನ್ಯಾಯವಾಗುತ್ತಿದೆ. ನಮ್ಮ ಮಕ್ಕಳು ಉನ್ನತ ಶಿಕ್ಷಣಕ್ಕೂ ಇದು ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ ರಾಜಾಜಿನಗರ ನಿವಾಸಿ ಹಾಗೂ ಈ ಬಾರಿ 10ನೇ ತರಗತಿ ಪ್ರವೇಶಿಸಲಿರುವ ವಿದ್ಯಾರ್ಥಿಯೊಬ್ಬರ ಪೋಷಕ ರಾಘವೇಂದ್ರ.
ಇದೇ ಕಾರಣಕ್ಕೆ ಸಿಬಿಎಸ್‌ಇ ಮತ್ತು ಐಸಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರತೀ ವರ್ಷ ಶೇ.99ಕ್ಕಿಂತ ಹೆಚ್ಚು ಬರುತ್ತಿದೆ. ಆದರೆ, ರಾಜ್ಯದ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಶೇ.80 ದಾಟಿರುವುದು 2022 ಮತ್ತು 2023ರಲ್ಲಿ ಮಾತ್ರ. 2020-21ರ ಕೋವಿಡ್ ಅವಧಿಯಲ್ಲಿ ಎಲ್ಲ ಮಕ್ಕಳನ್ನೂ ಪರೀಕ್ಷೆ ಇಲ್ಲದೆ ಪಾಸು ಮಾಡಿದ್ದು ಬಿಟ್ಟರೆ, 2023ರಲ್ಲಿ ಶೇ.85.13 ಫಲಿತಾಂಶ ಬಂದಿರುವುದೇ ಪರೀಕ್ಷೆ ನಡೆದ ವರ್ಷಗಳಲ್ಲಿ ಇದುವರೆಗಿನ ಗರಿಷ್ಠ ದಾಖಲೆ. ಕಳೆದ ಎರಡು ವರ್ಷಗಳಲ್ಲಂತೂ ಗ್ರೇಸ್ ಅಂಕ ನೀಡಿಯೂ ಫಲಿತಾಂಶ ತಲಾ ಶೇ.10ರಷ್ಟು ಕುಸಿದಿದೆ. ಕುಸಿದ ಫಲಿತಾಂಶ ಹೆಚ್ಚಿಸಲು ಗ್ರೇಸ್ ಅಂಕ ನೀಡಿ ಲಕ್ಷಾಂತರ ಮಕ್ಕಳ ಪಾಸು ಮಾಡುವ ಸರ್ಕಸ್ ನಡೆಸುವ ಸರ್ಕಾರ ಅದರ ಬದಲು ಮಕ್ಕಳ ಸ್ನೇಹಿಯಾಗಿ ಪರೀಕ್ಷಾ ವ್ಯವಸ್ಥೆ ಸುಧಾರಿಸಬೇಕು ಎನ್ನುವುದು ಪೋಷಕರ ಸಂಘಟನೆಯ ಅಧ್ಯಕ್ಷ ಬಿ.ಎನ್.ಯೋಗಾನಂದ ಅವರ ಆಗ್ರಹ.