ಉತ್ತರ ಕನ್ನಡ ಜಿಲ್ಲಾ ಪಂಚಾಯತಿಗೆ ಪ್ರತಿಷ್ಠಿತ ಸ್ಕೋಚ್‌ ಪ್ರಶಸ್ತಿ

KannadaprabhaNewsNetwork |  
Published : Dec 03, 2024, 12:32 AM IST
ಪ್ರತಿಷ್ಠಿತ SKOCH ಪ್ರಶಸ್ತಿಯೊಂದಿಗೆ ಉತ್ತರ ಕನ್ನಡ ಜಿಪಂ ತಂಡ. | Kannada Prabha

ಸಾರಾಂಶ

ನವದೆಹಲಿಯಲ್ಲಿ ಪಿಎಚ್‌ಡಿ ಚೆಂಬರ್ ಆಫ್‌ ಕಾಮರ್ಸ್‌ನಲ್ಲಿ ನಡೆದ ಸಮಾರಂಭದಲ್ಲಿ ಡಮಾಮಿ ಸಿದ್ದಿ ಸಮುದಾಯ ಪ್ರವಾಸೋದ್ಯಮ ಯೋಜನೆಗೆ ಪ್ರತಿಷ್ಠಿತ ಸ್ಕೋಚ್ (SKOCH) ಪ್ರಶಸ್ತಿಯು ದೊರಕಿದೆ.

ಕಾರವಾರ: ನವದೆಹಲಿಯಲ್ಲಿ ಪಿಎಚ್‌ಡಿ ಚೆಂಬರ್ ಆಫ್‌ ಕಾಮರ್ಸ್‌ನಲ್ಲಿ ನಡೆದ ಸಮಾರಂಭದಲ್ಲಿ ಡಮಾಮಿ ಸಿದ್ದಿ ಸಮುದಾಯ ಪ್ರವಾಸೋದ್ಯಮ ಯೋಜನೆಗೆ ಪ್ರತಿಷ್ಠಿತ ಸ್ಕೋಚ್ (SKOCH) ಪ್ರಶಸ್ತಿಯು ದೊರಕಿದೆ.

ಜಿಪಂ ಯೋಜನಾ ನಿರ್ದೇಶಕ ಕರೀಂ ಅಸದಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ರಾಷ್ಟ್ರಮಟ್ಟದ ಗೌರವ ಸುಸ್ಥಿರ ಅಭಿವೃದ್ಧಿ, ಸುಸ್ಥಿರ ಪ್ರವಾಸೋದ್ಯಮ, ಮತ್ತು ಪರಿಶಿಷ್ಠ ಪಂಗಡ ಸಮುದಾಯಗಳ ಸಬಲೀಕರಣ ಕ್ಷೇತ್ರದಲ್ಲಿನ ಸಾಧನೆಗೆ ನೀಡಲಾಗಿರುತ್ತದೆ.

ಡಮಾಮಿ ಸಿದ್ದಿ ಸಮುದಾಯ ಪ್ರವಾಸೋದ್ಯಮ ಯೋಜನೆಯು ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಸಮುದಾಯದ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸಲು ಮತ್ತು ಗ್ರಾಮೀಣ ಸಮುದಾಯ ಪ್ರವಾಸೋದ್ಯಮವನ್ನು ಉತ್ತೇಜಿಸಿ ಸ್ವಸಹಾಯ ಸಂಘದ ಮಹಿಳೆಯರಿಗೆ ಪ್ರವಾಸೋದ್ಯಮ ಚಟುವಟಿಕೆಯಲ್ಲಿ ಜೀವನೋಪಾಯ ಚಟುವಟಿಕೆಯನ್ನು ಕೈಗೊಳ್ಳಲು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಅಡಿಯಲ್ಲಿ ಜಾರಿಗೆ ತಂದಿರುವ ರಾಜ್ಯಮಟ್ಟದಲ್ಲಿಯೇ ಒಂದು ವಿನೂತನ ಯೋಜನೆಯಾಗಿದೆ. ಯೋಜನೆಯು ಸಮುದಾಯದ ಸದಸ್ಯರ, ವಿಶೇಷವಾಗಿ ಮಹಿಳೆಯರ, ಜೀವನೋಪಾಯವನ್ನು ಉತ್ತಮಗೊಳಿಸಲು ಮತ್ತು ಅವರ ಸಾಂಪ್ರದಾಯಿಕ ಮತ್ತು ಪರಿಸರ ಸ್ನೇಹಿ ಪರಂಪರೆಯನ್ನು ಉಳಿಸಿ ಬೆಳೆಸಲು ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಸಂಪೂರ್ಣ ಗ್ರಾಮವೇ ಪರಿಸರ ಸ್ನೇಹಿ ಸಮುದಾಯ ಪ್ರವಾಸೋದ್ಯಮ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಗುರಿಯನ್ನು ಹೊಂದಲಾಗಿದೆ.

ಜಿಲ್ಲೆಯ ಹೆಮ್ಮೆ

ಉತ್ತರ ಕನ್ನಡ ಜಿಲ್ಲೆಯು ಸಂಪೂರ್ಣವಾಗಿ ಅರಣ್ಯ ಪ್ರದೇಶಗಳಿಂದ ಕೂಡಿದ್ದು, ಪರಿಸರ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಉತ್ತಮ ಅವಕಾಶಗಳಿದೆ. ಈ ನಿಟ್ಟಿನಲ್ಲಿ ಎನ್.ಆರ್.ಎಂ.ಎಲ್. ಯೋಜನೆಯಡಿ ಬರುವ ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಸಮುದಾಯ ಪ್ರವಾಸೋದ್ಯಮ ಚಟುವಟಿಕೆಯಲ್ಲಿ ಜೀವನೋಪಾಯ ಚಟುವಟಿಕೆ ಕಲ್ಪಿಸುವ ಉದ್ದೇಶದಿಂದ ಈ ವಿನೂತನ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಜಿಲ್ಲೆಯ ಸಿದ್ಧಿ ಸಮುದಾಯದ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸಲು, ಬೆಳೆಸಲು ಮತ್ತು ಪರಿಸರಕ್ಕೆ ಮಾರಕವಾಗದ ರೀತಿಯಲ್ಲಿ ಪ್ರವಾಸೋದ್ಯಮ ಚಟುವಟಿಕೆಯನ್ನು ಡಮಾಮಿ ಸಿದ್ಧಿ ಸಮುದಾಯ ಪ್ರವಾಸೋದ್ಯಮದಲ್ಲಿ ಅಳವಡಿಸಲಾಗಿದೆ. ಈ ಪ್ರಶಸ್ತಿಯನ್ನು ಪಡೆಯುವಲ್ಲಿ ಸಹಕರಿಸಿದ ಎಲ್ಲ ಅಧಿಕಾರಿಗಳಿಗೆ, ಸಿಬ್ಬಂದಿಗೆ ಹಾಗೂ ನಿಸರ್ಗ ಸ್ಪರ್ಷ ಪ್ರವಾಸೋದ್ಯಮ ಗುಂಪಿನ ಸದಸ್ಯರಿಗೆ ಅಭಿನಂದನೆ ಸಲ್ಲಿಸಿರುವಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ, ಗ್ರಾಮೀಣ ಸ್ವಸಹಾಯ ಗುಂಪಿನ ಮಹಿಳೆಯರಿಂದ ಮುನ್ನಡೆಸಲ್ಪಡುವ ಈ ಸುಸ್ಥಿರ ಅಭಿವೃದ್ಧಿ ಮಾದರಿಯ ಸಮುದಾಯ ಪ್ರವಾಸೋದ್ಯಮ ಚಟುವಟಿಕೆಯು ನಮ್ಮ ಜಿಲ್ಲೆಯ ಹೆಮ್ಮೆಯ ಹೆಮ್ಮೆಯಾಗಿದೆ. ಇದೇ ಮಾದರಿಯಲ್ಲಿ ಜಿಲ್ಲೆಯ ಇತರೆ ಭಾಗಗಳಲ್ಲಿಯೂ ಸ್ವಸಹಾಯ ಗುಂಪಿನ ಮಹಿಳೆಯರ ಮೂಲಕ ಸಮುದಾಯ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ