ಮಾನವ- ವನ್ಯಜೀವಿ ಸಂಘರ್ಷ ತಡೆಯಿರಿ: ಡಾ.ಮಂತರ್ ಗೌಡ

KannadaprabhaNewsNetwork | Published : Mar 16, 2025 1:48 AM

ಸಾರಾಂಶ

ಮಾನವ ವನ್ಯಜೀವಿ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಒಂದೆಡೆ ರೈತರು ಮತ್ತೊಂದೆಡೆ ಅರಣ್ಯ ಸಿಬ್ಬಂದಿ ಸಾವನ್ನಪ್ಪುತ್ತಿದ್ದು ಈ ಸಂಬಂಧ ವೈಜ್ಞಾನಿಕವಾಗಿ ಕ್ರಮ ವಹಿಸುವ ಕೈಗೊಂಡ ಕ್ರಮಗಳ ಕುರಿತು ಶಾಸಕ ಮಂತರ್‌ಗೌಡ ಮಾಹಿತಿ ಪಡೆದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಾನವ-ವನ್ಯಜೀವಿ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಒಂದೆಡೆ ರೈತರು, ಮತ್ತೊಂದೆಡೆ ಅರಣ್ಯ ಸಿಬ್ಬಂದಿ ಸಾವನ್ನಪ್ಪುತ್ತಿದ್ದು ಈ ಸಂಬಂಧ ವೈಜ್ಞಾನಿಕವಾಗಿ ಕ್ರಮ ವಹಿಸುವ ಕೈಗೊಂಡ ಕ್ರಮಗಳ ಕುರಿತು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಅವರಿಂದ ಮಾಹಿತಿ ಪಡೆದಿದ್ದಾರೆ.

ಇದಕ್ಕೆ ಉತ್ತರಿಸಿದ ಅರಣ್ಯ ಸಚಿವರು ಭೌತಿಕ ಅಡೆತಡೆಗಳ ನಿರ್ಮಾಣ, ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬಾರದಂತೆ ತಡೆಗಟ್ಟಲು ಅರಣ್ಯದಂಚಿನಲ್ಲಿ ಸೌರಶಕ್ತಿ ಬೇಲಿ ನಿರ್ಮಾಣ/ನಿರ್ವಹಣೆ, ಆನೆ ತಡೆ ಕಂದಕ ನಿರ್ಮಾಣ/ನಿರ್ವಹಣೆ ಮಾಡಲಾಗಿದ್ದು ಮತ್ತು ರೈಲ್ವೆ ಹಳಿಗಳನ್ನು ಉಪಯೋಗಿಸಿ ಬ್ಯಾರಿಕೇಡ್ ನಿರ್ಮಿಸುವ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಮಾನವ ಆನೆ ಸಂಘರ್ಷ ಹೆಚ್ಚಾಗಿರುವ ಪ್ರದೇಶಗಳಲ್ಲಿ ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬಾರದಂತೆ ನಿಯಂತ್ರಿಸಲು ರೈಲ್ವೆ ಹಳಿಗಳನ್ನು ಉಪಯೋಗಿಸಿಕೊಂಡು ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಒಟ್ಟು 391.832 ಕಿ.ಮೀ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗಿದೆ ಎಂದರು.

ಆನೆ ಕಾರ್ಯಪಡೆಗಳ ಸ್ಥಾಪನೆ: ಸರ್ಕಾರವು ಹಾಸನ, ಚಿಕ್ಕಮಗಳೂರು, ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಹಾಗೂ ಚಾಮರಾಜನಗರ ಜಿಲ್ಲೆ, ರಾಮನಗರ ಹಾಗೂ ಬೆಂಗಳೂರು ಜಿಲ್ಲೆಗಳಲ್ಲಿ ಮತ್ತು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡಾನೆ ಹಾವಳಿಯನ್ನು ತಡೆಗಟ್ಟಲು ಪ್ರತಿ ಜಿಲ್ಲೆಗೊಂದರಂತೆ ಅಧಿಕಾರಿ ಸಿಬ್ಬಂದಿಗಳನ್ನೊಳಗೊಂಡ 8 ಆನೆ ಕಾರ್ಯಪಡೆ ರಚಿಸಲಾಗಿದೆ ಎಂದು ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರು ವಿವರಿಸಿದ್ದಾರೆ.

ಚಿರತೆ ಕಾರ್ಯಪಡೆಗಳ ಸ್ಥಾಪನೆ: ಸರ್ಕಾರವು ಮೈಸೂರು ವೃತ್ತದ ಮೈಸೂರು, ನಂಜನಗೂಡು, ಎಚ್.ಡಿ.ಕೋಟೆ, ಸರಗೂರು, ಟಿ.ನರಸೀಪುರ, ಮಂಡ್ಯ, ಪಾಂಡವಪುರ ಹಾಗೂ ನಾಗಮಂಗಲ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ಚಿರತೆ ಹಾವಳಿ ನಿಭಾಯಿಸುವ ನಿಟ್ಟಿನಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ, ವನ್ಯಜೀವಿ ವಿಭಾಗ, ಮೈಸೂರು ಇವರ ನೇತೃತ್ವದಲ್ಲಿ ಚಿರತೆ ಕಾರ್ಯಪಡೆ ರಚಿಸಲಾಗಿದೆ. ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಪುಂಡಾನೆಗಳನ್ನು ಗುರುತಿಸಿ, ಸೆರೆಹಿಡಿದು ಆಗಿಂದಾಗ್ಗೆ ಆನೆ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Share this article