ಕನ್ನಡಪ್ರಭ ವಾರ್ತೆ ಬೆಂಗಳೂರು
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರದ ರಸ್ತೆ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚದ ಪರಿಣಾಮ ಈಗ ಸಮಸ್ಯೆ ಕಾಣಿಸಿಕೊಂಡಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ವೇಗ ನೀಡಲಾಗಿದೆ ಎಂದು ಸಾರಿಗೆ ಸಚಿವ ಆರ್.ರಾಮಲಿಂಗಾರೆಡ್ಡಿ ಹೇಳಿದ್ದಾರೆ.ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆ ಗುಂಡಿಗಳ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಇತ್ತೀಚೆಗೆ ಬೆಂಗಳೂರು ನಗರ ಸೇರಿ ರಾಜ್ಯದ ವಿವಿಧೆಡೆ ಬಿಜೆಪಿ ನಾಯಕರು ಪ್ರತಿಭಟನೆ ಮಾಡಿದ್ದಾರೆ. ಕೆಲ ಕಡೆ ಗುಂಡಿಗಳನ್ನು ಮುಚ್ಚಿದ್ದಾರೆ. ಈ ರಸ್ತೆ ಗುಂಡಿಗಳಾಗಲು ಕಾರಣ ಯಾರು? ಹಿಂದಿನ ಬಿಜೆಪಿ ಸರ್ಕಾರದಲ್ಲಿ ರಸ್ತೆ ಗುಂಡಿಗಳನ್ನು ಸರಿಯಾಗಿ ಮುಚ್ಚುವ ಕೆಲಸವಾಗಲಿಲ್ಲ. ಬಿಜೆಪಿ ಅವಧಿಯಲ್ಲಿ ನಗರದ ರಸ್ತೆ ಗುಂಡಿಗಳಿಂದ 17 ಮಂದಿ ಬೈಕ್ ಸವಾರರು ಮೃತಪಟ್ಟಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ಸರ್ಕಾರಕ್ಕೆ ಹೈಕೋರ್ಟ್ ಚಾಟಿ:ಇದೇ ರಸ್ತೆಗಳ ಗುಂಡಿಗಳ ವಿಚಾರವಾಗಿ ಹಿಂದಿನ ಬಿಜೆಪಿ ಸರ್ಕಾರಕ್ಕೆ ಹೈಕೋರ್ಟ್ ಚಾಟಿ ಬೀಸಿತ್ತು. ಎರಡು ವರ್ಷಗಳ ಕಾಲ ರಸ್ತೆ ಗುಂಡಿಗಳ ವಿಚಾರದಲ್ಲಿ ಮಾನಿಟರ್ ಮಾಡಿತ್ತು. ಬಿಬಿಎಂಪಿ ಆಯುಕ್ತರಿಂದ ಪ್ರತಿ ತಿಂಗಳು ರಸ್ತೆ ಗುಂಡಿಗಳ ಮುಚ್ಚಿರುವ ಬಗ್ಗೆ ಮಾಹಿತಿ ಪಡೆದಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ 4 ತಿಂಗಳಾಗಿದೆ. ಈ ಅವಧಿಯಲ್ಲೇ ನಗರದಲ್ಲಿ ರಸ್ತೆ ಗುಂಡಿಗಳಾಗಿವೆಯೇ? ಹಿಂದಿನ ಬಿಜೆಪಿ ಸರ್ಕಾರ ನಗರದ ರಸ್ತೆ ಗುಂಡಿಗಳನ್ನು ಸಮಪರ್ಕವಾಗಿ ಮುಚ್ಚದ ಪರಿಣಾಮ ಗುಂಡಿಗಳು ಹೆಚ್ಚಾಗಿವೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅಧಿಕಾರಿಗಳ ಸಭೆ ಮಾಡಿ ನಗರದ ರಸ್ತೆ ಗುಂಡಿಗಳನ್ನು ಮುಚ್ಚಲು 1 ತಿಂಗಳ ಗಡುವು ನೀಡಿದ್ದಾರೆ. ಅದರಂತೆ ರಸ್ತೆ ಗುಂಡಿ ಮುಚ್ಚುವ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದು ಹೇಳಿದರು.
ಬಿಜೆಪಿ ಕ್ಷೇತ್ರಗಳಿಗೆ 6,116.73 ಕೋಟಿ ಅನುದಾನ:ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರದ ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿಯ 15 ಕ್ಷೇತ್ರಗಳಿಗೆ ನವ ನಗರೋತ್ಥಾನ ಯೋಜನೆಯಡಿ 2019-23ರ ವರೆಗೆ ಒಟ್ಟು 6,116.73 ಕೋಟಿ ರು. ಅನುದಾನ ನೀಡಲಾಗಿತ್ತು. ಕಾಂಗ್ರೆಸ್‌ನ 12 ಕ್ಷೇತ್ರಗಳಿಗೆ 1,105.18 ಕೋಟಿ ರು. ಅನುದಾನ ನೀಡಲಾಗಿತ್ತು. ಜೆಡಿಎಸ್‌ನ 1 ಕ್ಷೇತ್ರಕ್ಕೆ 52.65 ಕೋಟಿ ರು. ಅನುದಾನ ನೀಡಲಾಗಿತ್ತು. ಪ್ರತಿ ಕ್ಷೇತ್ರಕ್ಕೂ ನೂರಾರು ಕೋಟಿ ರು. ಅನುದಾನ ನೀಡಲಾಗಿದೆ. ಆದರೂ ರಸ್ತೆ ಗುಂಡಿಗಳನ್ನು ಸರಿಯಾಗಿ ಮುಚ್ಚಲಿಲ್ಲ ಏಕೆ? ಇದಕ್ಕೆ ಬಿಜೆಪಿ ನಾಯಕರು ಉತ್ತರ ನೀಡಬೇಕು ಎಂದು ಸಚಿವ ರಾಮಲಿಂಗಾ ರೆಡ್ಡಿ ಆಗ್ರಹಿಸಿದರು.