- ಚಿತ್ರದುರ್ಗದಲ್ಲಿ ಟ್ರ್ಯಾಕ್ಟರ್‌ಗೆ ಹಗ್ಗೆ ಕಟ್ಟಿ ಎಳೆದು ಆಕ್ರೋಶ । ಆಕಳು ಹೊಡೆದುಕೊಂಡು ಬಂದಿದ್ದ ಪ್ರತಿಭಟನಾಕಾರರು
ಕನ್ನಡಪ್ರಭವಾರ್ತೆ, ಚಿತ್ರದುರ್ಗರಾಜ್ಯ ಸರ್ಕಾರದ ಬೆಲೆ ಹೆಚ್ಚಳ ನೀತಿ ಖಂಡಿಸಿ ಭಾರತೀಯ ಜನತಾಪಕ್ಷದ ಕಾರ್ಯಕರ್ತರು ಮಂಗಳವಾರ ಚಿತ್ರದುರ್ಗದಲ್ಲಿ ವಿನೂತನ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಟ್ರ್ಯಾಕ್ಟರ್‌ಗೆ ಹಗ್ಗ ಕಟ್ಟಿ ಎಳೆದು ತೈಲ ಬೆಲೆ ಹೆಚ್ಚಳಕ್ಕೆ ಆಕ್ರೋಶ ಹೊರ ಹಾಕಿದರು. ಆಕಳು, ಕರು ಪ್ರತಿಭಟನೆಗೆ ಕರೆತಂದು ಹಾಲು ದರ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿದರು.
ನಗರದ ಒನಕೆ ಓಬವ್ವ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಶಾಸಕ ಜಿ.ಎಚ್ ತಿಪ್ಪಾರೆಡ್ಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಧಿಕಾರಕ್ಕೆ ಬಂದಾಗಿನಿಂದಲೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದೆ. ಪೆಟ್ರೋಲ್, ಡೀಜೆಲ್, ಹಾಲು, ವಿವಿಧ ನೋಂದಣಿ, ಪಹಣಿ ಸೇರಿದಂತೆ ಮದ್ಯದ ದರ ಹೆಚ್ಚಳ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ತನ್ನ ಗ್ಯಾರೆಂಟಿಗಳ ನಿರ್ವಹಣೆಗಾಗಿ ದರ ಹೆಚ್ಚಳ ಮಾಡಿದೆ. ಜನ ಸಾಮಾನ್ಯರ ಬದುಕಿನಲ್ಲಿ ಆಟವಾಡುತ್ತಿದೆ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಬಡವರಿಗಾಗಿ, ರೈತರಿಗಾಗಿ, ಕಾರ್ಮಿಕ ಮಕ್ಕಳಿಗಾಗಿ ವಿವಿಧ ರೀತಿ ಯೋಜನೆಗಳನು ಜಾರಿ ಮಾಡಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಇವುಗಳನ್ನು ರದ್ದು ಮಾಡಿದೆ. ಮತದಾರರು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತಂದಿದ್ದಕ್ಕೆ ಪಶ್ಚಾತ್ತಾಪ ಪಡುತ್ತಿದ್ದಾರೆಂದು ಆರೋಪಿಸಿದರು.ಬಿಜೆಪಿ ರೈತಮೊರ್ಚಾ ರಾಜ್ಯ ಕಾರ್ಯದರ್ಶಿ ರಾಜೇಶ್ ಬುರುಡೆ ಕಟ್ಟೆ ಮಾತನಾಡಿ, ಹಾಲಿನ ದರವನ್ನುಹಿಂದೆ ರು.4 ಏರಿಕೆ ಮಾಡಿ ಆ ಹಣವನ್ನು ರೈತರಿಗೆ ತಲುಪಿಸಲಾಗುವುದು ಎಂದು ಹೇಳಿಕೆ ಕೊಟ್ಟ ಸರ್ಕಾರ ಇದುವರೆಗೂ ಆ ರೀತಿ ನಡೆದುಕೊಂಡಿಲ್ಲ. ಅಕ್ರಮ ಎಸೆಗಲಾಗಿದೆ. ಮತ್ತೆ ಈಗ 2 ರು. ಹೆಚ್ಚಿಸಲಾಗಿದೆ. ಒಟ್ಟು 6 ರು. ರೈತರಿಗೆ ನೀಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್ ಮಾತನಾಡಿ, ಕಳೆದ ಬಜೆಟ್‍ನಲ್ಲಿ ಹಾಲಿನ ಪ್ರೋತ್ಸಾಹ ಧನಕ್ಕೆ ಮೀಸಲಿಟ್ಟಿದ್ದ ಅನುದಾನವನ್ನು ಪಶು ಪಾಲನಾ ಇಲಾಖೆ ಇತರೆ ಖರ್ಚು ವೆಚ್ಚಗಳಿಗೆ ಕಾಂಗ್ರೆಸ್ ಸರ್ಕಾರ ಬಳಕೆ ಮಾಡಿಕೊಂಡಿದೆ. ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು. ಅಲ್ಲದೆ, ಬಾಕಿ ಉಳಿದಿರುವ ಎಂಟು ತಿಂಗಳ ಪ್ರೋತ್ಸಾಹದ ಹಣ ಕೇಳಿದರೆ ಹಾಲು ಒಕ್ಕೂಟದ ಅಧಿಕಾರಿಗಳು ಸಹಕಾರಿ ಇಲಾಖೆಯತ್ತ ಬೊಟ್ಟು ಮಾಡುತ್ತಾರೆ. ಸಹಕಾರ ಇಲಾಖೆಯವರು ಆರ್ಥಿಕ ಇಲಾಖೆ ಕಡೆ ಬೆರಳು ತೋರುತ್ತಿದ್ದಾರೆ. ಈ ಗೊಂದಲ ನಿವಾರಣೆ ಮಾಡಿ, ಹಣ ಪಾವತಿ ಮಾಡಬೇಕು ಎಂದು ಒತ್ತಾಯಿಸಿದರು.ಬಿಜೆಪಿಯ ಮಲ್ಲಿಕಾರ್ಜುನ್ ಮಾತನಾಡಿ, ಹಾಲಿನ ಪ್ರೋತ್ಸಾಹ ಹಣವೂ ಇಲ್ಲ, ಬರ ಪರಿಹಾರದ ಮೊತ್ತವೂ ಇಲ್ಲ. ಇಂತಹ ಸಂಕಷ್ಟ ಸನ್ನಿವೇಶದ ನಡುವೆ ಬಿತ್ತನೆ ಬೀಜಗಳ ಬೆಲೆ ಏರಿಕೆಯಾಗಿದೆ. ಭೂ ಸಿರಿ ಯೋಜನೆಯನ್ನು ನಿಲ್ಲಿಸಲಾಗಿದೆ. ದುಪ್ಪಟ್ಟು ಹಣವನ್ನು ಟ್ರಾನ್ಸ್ ಫಾರ್ಮರ್ ಗಳಿಗೆ ನೀಡುವಂತಾಗಿದ್ದು, ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಕೆ ಮಾಡಲಾಗಿದೆ. ಮುದ್ರಾಂಕ ಶುಲ್ಕ ಏರಿಸಿರುವುದರಿಂದ ಆಸ್ತಿ ನೋಂದಣಿ ಶೇ.30 ರಷ್ಟು ಹೆಚ್ಚಾಗಿದೆ. ಕ್ಷೀರ ಸಮೃದ್ಧಿ ಬ್ಯಾಂಕ್ ಯಾಕೆ ಪ್ರಾರಂಭಿಸಿಲ್ಲವೆಂದು ದೂರಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ಸಿದ್ದಾಪುರ, ಜಿ.ಎಸ್ ಸಂಪತ್‍ಕುಮಾರ್, ಜಿಲ್ಲಾ ಖಜಾಂಚಿ ಮಾಧುರಿ ಗಿರೀಶ್, ಕೆ. ಟಿ ಕುಮಾರಸ್ವಾಮಿ, ನರೇಂದ್ರ ಹೊನ್ನಾಳ್, ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ನಾಗರಾಜ ಬೇದ್ರೆ, ದಗ್ಗೆ ಶಿವಪ್ರಕಾಶ್, ಪಾಲಯ್ಯ ಸೂರಮ್ಮನಹಳ್ಳಿ, ನಾಗರಾಜ ನಂದಿ, ನಾಗರಾಜ್, ತಾಪಂ ಮಾಜಿ ಅಧ್ಯಕ್ಷ ಕಲ್ಲಂ ಸೀತಾರಾಮರೆಡ್ಡಿ ರೈತ ಕಾರ್ಯಕಾರಿಣಿ ಸದಸ್ಯೆ ಶಾರದಮ್ಮ, ಶ್ಯಾಮಲ ಶಿವಪ್ರಕಾಶ್, ರೇಖಾ, ಶೈಲಜಾರೆಡ್ಡಿ ಸಿಂಧೂ, ತನಯ, ಟಿ ಯಶ್ವಂತಕುಮಾರ್, ಬೋಸೆ ರಂಗಪ್ಪ, ಕಿರಣ್ ಡಿ.ಎಸ್ ಹಳ್ಳಿ, ವೀರೇಶ ಜಾಲಿಕಟ್ಟೆ, ರಮೇಶ್ ಎನ್, ವೀಣಾ, ಸಿದ್ದಾರ್ಥ್ ಚಂದ್ರು, ಪವಿತ್ರ, ಶೀಲಾ ಶ್ರಿನಿವಾಸ್. ಅಂಕಳಪ್ಪ, ನಾಗರಾಜು, ಲಿಂಗರಾಜು, ನಗರಸಭಾ ಸದಸ್ಯ ಹರೀಶ್ ಪ್ರತಿಭಟನೆ ನೇತೃತ್ವವಹಿಸಿದ್ದರು.----------------ಫೋಟೊ:-2 ಸಿಟಿಡಿ1
ಅಗತ್ಯ ವಸ್ತುಗಳ ದರ ಹೆಚ್ಚಳ ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಚಿತ್ರದುರ್ಗದಲ್ಲಿ ಆಕಳು ಕರು ಸಮೇತ ಪ್ರತಿಭಟನೆ ನಡೆಸಿದರು.