ಪ್ರಧಾನಿಗೆ ಸಂವಿಧಾನ ಬಗ್ಗೆ ಗೌರವ ಇಲ್ಲ: ಸಿದ್ದರಾಮಯ್ಯ ಟೀಕೆ

KannadaprabhaNewsNetwork |  
Published : Apr 15, 2024, 01:24 AM IST
ಚಿತ್ರ : 14ಎಂಡಿಕೆ4 : ಕಾಂಗ್ರೆಸ್ ಕಾರ್ಯಕರ್ತರ ಜನಧ್ವನಿ-2 ಬೃಹತ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.  | Kannada Prabha

ಸಾರಾಂಶ

ಬಿಜೆಪಿ ಸಂವಿಧಾನ ವಿರೋಧಿ. ಸಂವಿಧಾನ ಬದಲಾಯಿಸುವುದು ಬಿಜೆಪಿ ಪರಿವಾರದ ಹುನ್ನಾರ. ಕೇಂದ್ರ ಸಚಿವರಾಗಿದ್ದವರೇ ಈ ಮಾತನ್ನು ಬಹಿರಂಗವಾಗಿ ಹೇಳಿದ್ದಾರೆ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ. ಮಡಿಕೇರಿ ಗಾಂಧಿ ಮೈದಾನದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಜನಧ್ವನಿ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಪ್ರಧಾನಿ ಮೋದಿ ಅವರು ಪ್ರಜಾಪ್ರಭುತ್ವದಂತೆ ಕೆಲಸ ಮಾಡಿಲ್ಲ. ಬದಲಾಗಿ ಆರ್‌ಎಸ್‌ಎಸ್‌ ಸಿದ್ಧಾಂತದಂತೆ ಕೆಲಸ ಮಾಡಿದ್ದಾರೆ. ಇವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ. ಆದ್ದರಿಂದ ಸಂವಿಧಾನದ ಬಗ್ಗೆ ಗೌರವ ಇರುವವರ ಕೈಯಲ್ಲಿ ಅಧಿಕಾರ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ನಗರದ ಗಾಂಧಿ ಮೈದಾನದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಜನಧ್ವನಿ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಸಂವಿಧಾನಕ್ಕೆ ಅಪಾಯ ಆದರೆ ದೇಶದ ಮಹಿಳೆಯರು, ಬಡವರು, ಮಧ್ಯಮ ವರ್ಗದವರು, ಶೂದ್ರರು, ಶ್ರಮಿಕರ ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.

ಭಾರತದಲ್ಲಿ ಪ್ರಜಾತಂತ್ರ ಅಪಾಯದಲ್ಲಿದೆ. ಇದನ್ನು ಉಳಿಸುವ ಅನಿವಾರ್ಯತೆ ನಮ್ಮೆಲ್ಲರ ಮುಂದಿದೆ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಿಜೆಪಿ ಸಂವಿಧಾನ ವಿರೋಧಿ. ಸಂವಿಧಾನ ಬದಲಾಯಿಸುವುದು ಬಿಜೆಪಿ ಪರಿವಾರದ ಹುನ್ನಾರ. ಕೇಂದ್ರ ಸಚಿವರಾಗಿದ್ದವರೇ ಈ ಮಾತನ್ನು ಬಹಿರಂಗವಾಗಿ ಹೇಳಿದ್ದಾರೆ ಎಂದು ಸಿದ್ದರಾಮಯ್ಯ ಎಚ್ಚರಿಸಿದರು.

ಆರ್.ಎಸ್.ಎಸ್. ಪರಿವಾರ ಬ್ರಿಟೀಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಏಕೆ ಭಾಗವಹಿಸಲಿಲ್ಲ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ, ಇವರು ದೇಶಭಕ್ತರಾಗಲು ಸಾಧ್ಯವೇ ಇಲ್ಲ ಎಂದರು.

ಅಂಬೇಡ್ಕರ್ ಅವರು ಸಂವಿಧಾನ ಜಾರಿ ಸಭೆಯಲ್ಲಿ ಸಂವಿಧಾನ ವಿರೋಧಿಗಳ ಬಗ್ಗೆ ಎಚ್ಚರಿಸಿದ ಮಾತುಗಳನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿ, ಸಮಾಜದಲ್ಲಿನ ಎಲ್ಲಾ ಜಾತಿ, ವರ್ಗ ಮತ್ತು ಧರ್ಮದ ಬಡವರಿಗೆ ಸಾಮಾಜಿಕ ಮತ್ತು ಆರ್ಥಿಕ ಶಕ್ತಿ ತುಂಬುವುದಕ್ಕಾಗಿ ನಾವು ಐದು ಗ್ಯಾರಂಟಿ ಯೋಜನೆಗಳನ್ನು ರೂಪಿಸಿ ಜಾರಿ ಮಾಡಿದ್ದೇವೆ ಎಂದರು.

ಮೋದಿಯವರು ಹತ್ತು ವರ್ಷ ಪ್ರಧಾನಿಯಾಗಿ ಕೊಟ್ಟ ಮಾತಲ್ಲಿ ಒಂದನ್ನಾದರೂ ಈಡೇರಿಸಿದ್ದಾರಾ? ಎದೆ ಮುಟ್ಟಿಕೊಂಡು ಹೇಳಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

ಭಾರತೀಯರನ್ನು ನಂಬಿಸಿ, ಭ್ರಮೆ ಹುಟ್ಟಿಸಿ , ಭಾವನೆಗಳನ್ನು ಕೆರಳಿಸಿ ಭಯಾನಕವಾಗಿ ವಂಚಿಸುವವರಿಗೆ ಮತ ಹಾಕಿದರೆ ನಿಮ್ಮ ಮತಕ್ಕೆ ಗೌರವ ಬರುತ್ತದಾ? ನುಡಿದಂತೆ ನಡೆದು ರಾಜ್ಯದ ಜನರ ಬದುಕಿಗೆ ಸ್ಪಂದಿಸಿದ ನಮಗೆ ಮತ ಹಾಕಿದರೆ ಆ ಮತಕ್ಕೆ ಗೌರವ ಬರುತ್ತದಾ? ಕೊಡಗು ಜಿಲ್ಲೆಯ ಮತದಾರರು ಪ್ರಜ್ಞಾವಂತರಾಗಿದ್ದಾರೆ. ತೋಚಿಸಿ ಪ್ರಜ್ಞಾವಂತಿಕೆಯಿಂದ ಮತ ಚಲಾಯಿಸುತ್ತಾರೆ ಎನ್ನುವ ಭರವಸೆ ನನಗಿದೆ ಎಂದರು.

ಬಿಜೆಪಿ, ಆರ್‌ಎಸ್‌ಎಸ್‌ನವರು ಕೂಡ ಈ ಐದು ಗ್ಯಾರಂಟಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ನಾವು ಈ ಹಿಂದೆ ಅಧಿಕಾರಕ್ಕೆ ಬಂಧ ಸಂದರ್ಭ 165 ಭರವಸೆಗಳನ್ನು ನೀಡಿದ್ದೆವು. ಅದರಲ್ಲಿ 158 ಹಾಗೂ ಹೆಚ್ಚುವರಿ 30 ಕಾರ್ಯಕ್ರಮ ನೀಡಿದ್ದೇವೆ. ಬಿಜೆಪಿಯವರು 600ರಲ್ಲಿ 60 ಮಾತ್ರ ಈಡೇರಿಸಿದ್ದಾರೆ ಎಂದು ಟೀಕಿಸಿದರು.

ಕೊಡಗಿನಲ್ಲಿ 20 ವರ್ಷಗಳ ಕಾಲ ಬಿಜೆಪಿ ಶಾಸಕರು ಇದ್ದರು. ಆದರೆ ಕೊಡಗಿಗೆ ಅವರ ಕೊಡುಗೆ ಏನೂ ಇಲ್ಲ. ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಇತ್ತು. ನಮ್ಮ ರಾಜ್ಯಕ್ಕೆ ಪರಿಹಾರ ಕೊಡಿ‌ ಎಂದು ರಾಜ್ಯದ ಯಾವುದೇ ಬಿಜೆಪಿ ಸಂಸದರು ಕೇಳಲಿಲ್ಲ. ಈ ವರ್ಷ ಗ್ಯಾರಂಟಿ ಯೋಜನೆಗೆ ರು. 36 ಸಾವಿರ ಕೋಟಿ ಖರ್ಚಾಗಿದೆ. ರು. 52 ಸಾವಿರ ಕೋಟಿ ಮುಂದಿನ ವರ್ಷಕ್ಕೆ ಮೀಸಲಿಟ್ಟಿದ್ದೇವೆ. 1.20 ಲಕ್ಷ ಕೋಟಿ ರುಪಾಯಿಯನ್ನು ಅಭಿವೃದ್ಧಿಗೆ ಮೀಸಲು ಇಡಲಾಗುತ್ತದೆ ಎಂದು ತಿಳಿಸಿದರು.

ಸೋತು ಬಿಡುತ್ತಾರೆ ಎಂದು ಈ ಬಾರಿ ಮೈಸೂರು-ಕೊಡಗು ಕ್ಷೇತ್ರದಲ್ಲಿ ಪ್ರತಾಪ ಸಿಂಹ ಅವರನ್ನು ಬದಲಾಯಿಸಿದ್ದಾರೆ. ಮನೆಯಲ್ಲಿ ಕೂತಿರುವವರು, ಬಾಯಿ ಬಿಡದೆ ಇರುವವರು ಲೋಕಸಭೆಯಲ್ಲಿ ಗೆಲ್ಲಬಾರದು. ಆದ್ದರಿಂದ ಬಿಜೆಪಿಗೆ ಅಧಿಕಾರ ಕೊಡಬೇಡಿ ಎಂದು ಸಿದ್ದರಾಮಯ್ಯ ಹೇಳಿದರು.

ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಶಾಸಕರಾದ ಪೊನ್ನಣ್ಣ, ಮಂಥರ್ ಗೌಡ, ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್, ಮೆಹರೂಜ್ ಖಾನ್, ಸಾಧು ಕೋಕಿಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ವೀಣಾ ಅಚ್ಚಯ್ಯ, ಚಂದ್ರಕಲಾ, ಎಂ.ಸಿ. ನಾಣಯ್ಯ, ಸುಮಾ ವಸಂತ್, ಕೆ.ಎಂ. ಇಬ್ರಾಹಿಂ, ಚಂದ್ರಮೌಳಿ, ಅರುಣ್ ಮಾಚಯ್ಯ ಸೇರಿ ಹಲವು ಮುಖಂಡರು ಇದ್ದರು.

ಸಾವಿರಾರು ಕಾರ್ಯಕರ್ತರು:

ಮಡಿಕೇರಿಯ ಗಾಂಧಿ ಮೈದಾನದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಬೃಹತ್ ಸಮಾವೇಶದಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಲಿಕ್ಯಾಪ್ಟರ್ ಮೂಲಕ ಮಡಿಕೇರಿಗೆ ಗಾಲ್ಫ್ ಮೈದಾನಕ್ಕೆ 12 ಗಂಟೆ ವೇಳೆಗೆ ಆಗಮಿಸಿದರು. 12.30ಕ್ಕೆ ಗಾಂಧಿ ಮೈದಾನದಲ್ಲಿ ಸಮಾವೇಶದಲ್ಲಿ ಪಾಲ್ಗೊಂಡು. 2.30ರ ವರೆಗೆ ಇದ್ದರು. ನಂತರ ತೆರಳಿದರು.

ಕಾಣಿಸಿಕೊಳ್ಳದ ಲಕ್ಷ್ಮಣ್!:

ಮಡಿಕೇರಿಯ ಗಾಂಧಿ ಮೈದಾನದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಕಾಣಿಸಿಕೊಳ್ಳಲಿಲ್ಲ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿದ್ದರು. ಆದರೆ ಲಕ್ಷ್ಮಣ್ ವೇದಿಕೆ ಹಾಗೂ ಸಮಾವೇಶದಲ್ಲಿ ಕಾಣಿಸಿಕೊಳ್ಳಲಿಲ್ಲ. ಸಿದ್ದರಾಮ್ಯಯ, ಡಿ.ಕೆ. ಶಿವಕುಮಾರ್ ಅವರು ಲಕ್ಷ್ಮಣ್ ಅವರ ಹೆಸರು ಪ್ರಸ್ತಾಪಿಸಿಲ್ಲ. ಬದಲಾಗಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಉಲ್ಲೇಖಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ