ಬೆಂಗಳೂರು ವಿಭಾಗದ 15 ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ಪ್ರಧಾನಿ ಚಾಲನೆ

KannadaprabhaNewsNetwork | Updated : Feb 24 2024, 03:53 PM IST

ಸಾರಾಂಶ

ರೈಲ್ವೆ ಸಚಿವಾಲಯದ ರೈಲ್ವೆ ಅಭಿವೃದ್ಧಿ ಮಂಡಳಿಯು ದೇಶದ 554 ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಹಾಗೂ 1,585 ರೈಲ್ವೆ ಕೆಳ ಮತ್ತು ಮೇಲ್ಸೇತುವೆಗಳ ನಿರ್ಮಾಣ ಕಾಮಗಾರಿಗೆ ಯೋಜನೆ ರೂಪಿಸಿದೆ ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೀಶ್‌ ಮೋಹನ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೇಂದ್ರ ಸರ್ಕಾರದ ಅಮೃತ್‌ ಭಾರತ್‌ ಸ್ಟೇಷನ್‌ ಯೋಜನೆ ಅಡಿಯಲ್ಲಿ ರಾಜ್ಯದ 15 ರೈಲ್ವೆ ನಿಲ್ದಾಣ ಅಭಿವೃದ್ಧಿ ಹಾಗೂ ನಾಲ್ಕು ರೈಲ್ವೆ ಕೆಳ ಮತ್ತು ಮೇಲ್ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಫೆ. 26ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೀಶ್‌ ಮೋಹನ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಅವರು, ರೈಲ್ವೆ ಸಚಿವಾಲಯದ ರೈಲ್ವೆ ಅಭಿವೃದ್ಧಿ ಮಂಡಳಿಯು ದೇಶದ 554 ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಹಾಗೂ 1,585 ರೈಲ್ವೆ ಕೆಳ ಮತ್ತು ಮೇಲ್ಸೇತುವೆಗಳ ನಿರ್ಮಾಣ ಕಾಮಗಾರಿಗೆ ಯೋಜನೆ ರೂಪಿಸಿದೆ. 

ಈ ಪೈಕಿ ರಾಜ್ಯದ 15 ರೈಲ್ವೆ ನಿಲ್ದಾಣ ಅಭಿವೃದ್ಧಿ ಹಾಗೂ ನಾಲ್ಕು ರೈಲ್ವೆ ಕೆಳ ಮತ್ತು ಮೇಲ್ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ರಾಜ್ಯದ ಕಾಮಗಾರಿಗಳನ್ನು ಒಟ್ಟು 372.13 ಕೋಟಿ ರು. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ಯೋಜನೆಯ ಮೊದಲ ಹಂತದಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಶೌಚಾಲಯ ಸೌಲಭ್ಯ, ಲಿಫ್ಟ್‌ ಮತ್ತು ಎಸ್ಕಲೇಟರ್‌ ಸ್ಥಾಪನೆ, ಸ್ವಚ್ಛತೆ, ಉಚಿತ ವೈ-ಫೈ, ಒಂದು ನಿಲ್ದಾಣ-ಒಂದು ಉತ್ಪನ್ನ ಉಪಕ್ರಮ ಜಾರಿ, ಪ್ರಯಾಣಿಕರ ಮಾಹಿತಿ ವ್ಯವಸ್ಥೆ ಸದೃಢಗೊಳಿಸುವುದು. 

ಕಾರ್ಯನಿರ್ವಹಾಕ ಲಾಂಜ್‌ಗಳ ಸ್ಥಾಪನೆ, ವ್ಯಾಪಾರಿ ಸ್ಥಳಗಳನ್ನು ಉತ್ತಮಗೊಳಿಸುವುದು ಹೀಗೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. 

ಎರಡನೇ ಹಂತದಲ್ಲಿ ರೈಲ್ವೆ ನಿಲ್ದಾಣದ ಸ್ವರೂಪವನ್ನು ಬದಲಿಸುವುದು. ನಿಲ್ದಾಣಗಳಿಗೆ ಬೇರೆ ಸಾರಿಗೆ ಸಂಪರ್ಕವನ್ನು ಸಮರ್ಪಕವಾಗಿ ಕಲ್ಪಿಸಲು ಮಲ್ಟಿಮಾಡೆಲ್ ಸಂಪರ್ಕ ಉತ್ತೇಜಿಸುವುದು ಸೇರಿದಂತೆ ಇನ್ನಿತರ ಕಾಮಗಾರಿ ಅನುಷ್ಠಾನಗೊಳಿಸಬಹುದು ಎಂದು ಹೇಳಿದರು.

ಕೆಆರ್‌ ಪುರದಲ್ಲಿ ಬಹುಮಹಡಿ ವಾಹನ ನಿಲುಗಡೆ: ಅಮೃತ್‌ ಭಾರತ್‌ ರೈಲ್ವೆ ನಿಲ್ದಾಣ ಯೋಜನೆ ಅಡಿಯಲ್ಲಿ ಕೆಆರ್‌ ಪುರ ರೈಲ್ವೆ ಅಭಿವೃದ್ಧಿ ಕಾರ್ಯಕ್ಕೆ ಈಗಾಗಲೆ ಚಾಲನೆ ನೀಡಲಾಗಿದೆ. 

ಅದರಂತೆ ರೈಲ್ವೆ ನಿಲ್ದಾಣದಲ್ಲಿ 4 ಸಾವಿರ ಚಮೀ ವ್ಯಾಪ್ತಿಯಲ್ಲಿ ಬಹುಮಹಡಿ ವಾಹನ ನಿಲುಗಡೆ ಕಟ್ಟಡ ನಿರ್ಮಿಸಲಾಗುತ್ತಿದೆ. ಅದರಲ್ಲಿ 372 ದ್ವಿಚಕ್ರ ಮತ್ತು126 ಕಾರುಗಳ ನಿಲುಗಡೆಗೆ ಅವಕಾಶ ನೀಡಲಾಗುತ್ತಿದೆ. 

ಅದರ ಜತೆಗೆ ನಿಲ್ದಾಣಕ್ಕೆ 2ನೇ ಪ್ರವೇಶ ದ್ವಾರ ನಿರ್ಮಾಣ, ವಿಐಪಿ ಲಾಂಜ್‌, ಪ್ರಯಾಣಿಕರು ಕಾಯುವಿಕೆ ಕೊಠಡಿ, 6 ಎಸ್ಕಲೇಟರ್‌ ಮತ್ತು ಲಿಫ್ಟ್‌ಗಳನ್ನು ಅಳವಡಿಸಲಾಗುತ್ತಿದೆ. ಹೀಗೆ ಹಲವು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಯೋಗೀಶ್‌ ಮೋಹನ್‌ ತಿಳಿಸಿದರು.

ಅಭಿವೃದ್ಧಿಗೊಳ್ಳುತ್ತಿರುವ ರೈಲ್ವೆ ನಿಲ್ದಾಣಗಳ ವಿವರ: ಬಂಗಾರಪೇಟೆ21.5 ಕೋಟಿ ರು., ಚನ್ನಪಟ್ಟಣ 20.9 ಕೋಟಿ ರು., ಧರ್ಮಪುರ25.4 ಕೋಟಿ ರು., ದೊಡ್ಡಬಳ್ಳಾಪುರ21.3 ಕೋಟಿ ರು., ಹಿಂದೂಪುರ 23.9 ಕೋಟಿ ರು., ಹೊಸೂರು 22.3 ಕೋಟಿ ರು., ಕೆಂಗೇರಿ21.1 ಕೋಟಿ ರು., ಕೆಆರ್‌ ಪುರ 21.1 ಕೋಟಿ ರು. ಕುಪ್ಪಂ 17.6 ಕೋಟಿ ರು., ಮಲ್ಲೇಶ್ವರ 20 ಕೋಟಿ ರು., ಮಂಡ್ಯ 20.1 ಕೋಟಿ ರು., ರಾಮನಗರ21 ಕೋಟಿ ರು., ತುಮಕೂರು24.1 ಕೋಟಿ ರು. ವೈಟ್‌ಫೀಲ್ಡ್‌ 23.3 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಗೊಳ್ಳುತ್ತಿವೆ.

ನಾಡಿದ್ದಿಂದ ಬೆಳಗ್ಗೆ 5ಕ್ಕೆ ಮೆಟ್ರೋ ರೈಲು ಸೇವೆ

ಬೆಂಗಳೂರು: ರೈಲು ಹಾಗೂ ಬಸ್‌ಗಳ ಮೂಲಕ ಬೇರೆ ನಗರಗಳಿಂದ ಮುಂಜಾನೆ ಬೆಂಗಳೂರಿಗೆ ಬರುವವರ ಅನುಕೂಲಕ್ಕಾಗಿ ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಫೆ. 26ರಿಂದ ಬೆಳಗ್ಗೆ 5 ಗಂಟೆಯಿಂದಲೇ ಮೆಟ್ರೋ ರೈಲು ಸೇವೆ ಆರಂಭಿಸಲಾಗುತ್ತಿದೆ.

ಸದ್ಯ ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ನಮ್ಮ ಮೆಟ್ರೋ ರೈಲು ಸೇವೆ ಆರಂಭವಾಗುತ್ತಿದೆ. ಅದು ಎಲ್ಲ ಕೊನೆಯ ನಿಲ್ದಾಣಗಳಿಂದ ಒಮ್ಮೆಲೇ ಮೆಟ್ರೋ ಸೇವೆ ಆರಂಭವಾಗಲಿದೆ. 

ಆದರೆ, ರೈಲು ಹಾಗೂ ಬಸ್‌ಗಳ ಮೂಲಕ ಬೇರೆ ನಗರಗಳಿಂದ ಮುಂಜಾನೆ ಮೆಜೆಸ್ಟಿಕ್‌ಗೆ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಇನ್ನು ಮುಂದೆ ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಬೆಳಗ್ಗೆ 5 ಗಂಟೆಯಿಂದಲೇ ಆರಂಭಿಸಲಾಗುತ್ತಿದೆ. 

ಈ ಸೇವೆಯು ಭಾನುವಾರ ಹೊರತುಪಡಿಸಿ ಉಳಿದ ಎಲ್ಲ 6 ದಿನಗಳಲ್ಲಿ ಇರಲಿದೆ ಎಂದು ಬಿಎಂಆರ್‌ಸಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಅದೇ ರೀತಿ ಪ್ರಯಾಣಿಕರ ಒತ್ತಡ ಹೆಚ್ಚಿರುವ ಕಾರಣದಿಂದಾಗಿ ಫೆ. 26ರಿಂದ ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಗರುಡಾಚಾರ್‌ಪಾಳ್ಯ ಮೆಟ್ರೋ ನಿಲ್ದಾಣದವರೆಗೆ ಬೆಳಗ್ಗೆ 8.45ರಿಂದ 10.20ರವರೆಗೆ ಪ್ರತಿ ಮೂರು ನಿಮಿಷಕ್ಕೊಂದು ಮೆಟ್ರೋ ರೈಲು ಸೇವೆ ನೀಡಲಿದೆ. 

ಈ ಸೇವೆಯು ಶನಿವಾರ, ಭಾನುವಾರ ಮತ್ತು ಸಾಮಾನ್ಯ ರಜೆ ಇರುವ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಂದು ನೀಡಲು ಬಿಎಂಆರ್‌ಸಿಎಲ್‌ ನಿರ್ಧರಿಸಿದೆ.

Share this article