ಧಾರವಾಡ: ದೇಶದಲ್ಲಿ ನರೇಂದ್ರ ಮೋದಿ ಅವರ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ದೇಶದಲ್ಲಿ ಶೇ.75ರಷ್ಟು ಭಯೋತ್ಪಾದನೆ ಕಡಿಮೆಯಾಗಿದೆ. ಮೋದಿ ಅವರ ಸಂಕಲ್ಪವೇ ಜೀರೋ ಭಯೋತ್ಪಾದನೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಫುಲ್ವಾಮಾ ದಾಳಿಗೆ ಐದು ವರ್ಷಗಳಾದ ಹಿನ್ನೆಲೆಯಲ್ಲಿ ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಕಾರ್ಗಿಲ್ ಸ್ತೂಪಕ್ಕೆ ಭೇಟಿ ನೀಡಿ ಹುತಾತ್ಮರಿಗೆ ಗೌರವ ಸಲ್ಲಿಸಿದ ಅವರು, 2014ರ ಮೊದಲು ದೇಶದ ಅನೇಕ ಕಡೆ ಬಾಂಬ್ ಸ್ಫೋಟಗಳು ಆಗುತಿದ್ದವು. ಅವು ಈಗಿಲ್ಲ. ಸದ್ಯ ದೇಶ ಸುರಕ್ಷಿತವಾಗಿದ್ದು, ಅಭಿವೃದ್ಧಿಯಾಗುತ್ತಿದೆ. ದೇಶವು ಸಮೃದ್ಧಿ ಹೊಂದುತ್ತಿದೆ ಎಂದರು.ಬಿಜೆಪಿಯೇ ದೇಶ ಒಡೆಯಿತು ಎನ್ನುವ ವೀರಪ್ಪ ಮೊಯ್ಲಿ ಆರೋಪ ವಿಚಾರವಾಗಿ ಮಾತನಾಡಿದ ಜೋಶಿ, ಮೊಯ್ಲಿ ಅವರಿಗೆ ಇತಿಹಾಸ ಗೊತ್ತಿಲ್ಲವೇ? ಅಥವಾ ಅವರು ಸೋಲಿನ ಹತಾಶೆಯಲ್ಲಿ ಹೇಳುತಿದ್ದಾರೆಯೋ ತಿಳಿಯುತ್ತಿಲ್ಲ. ನಾಲ್ಕು ರಾಜ್ಯದಲ್ಲಿ ಅವರು ಸೋತಿದ್ದಾರೆ. ಇದರಿಂದಾಗಿ ಅಪ್ರಬುದ್ಧರಾಗಿ ಮಾತನಾಡುತಿದ್ದಾರೆ. ಮೊಯ್ಲಿ ಅವರು ಪುಸ್ತಕ ಬರೆಯುವವರು. ಇದನ್ನು ಮಾತನಾಡಿದ್ದು ಆಶ್ಚರ್ಯ ತಂದಿದ್ದು, ಅವರು ಇನ್ನೂ ಚೆನ್ನಾಗಿ ಓದಿಕೊಳ್ಳಬೇಕು ಎಂದು ತಿರಗೇಟು ನೀಡಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ಇರಲಿಲ್ಲ ಎಂದು ಕಾಂಗ್ರೆಸ್ಸಿನವರೇ ಹೇಳಿದ್ದಾರೆ. ಆದರೆ, ದೇಶ ಇಬ್ಭಾಗ ಮಾಡಿದ್ದು ಬಿಜೆಪಿ ಎನ್ನುತ್ತಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಹಿಂದೂ ಮಹಾಸಭಾ ಇರಲಿಲ್ಲ ಎನ್ನುತ್ತಾರೆ. ಇದೀಗ ಮಹಾಸಭಾ ದೇಶ ಒಡೆಯಿತು ಎನ್ನುತ್ತಾರೆ. ಪ್ರತ್ಯೇಕ ರಾಷ್ಟ್ರ ಮಾಡುವುದಾದರೆ, ಆ ಕಡೆಯಿಂದ ಈ ಕಡೆ, ಈ ಕಡೆಯಿಂದ ಆ ಕಡೆ ಜನರು ಹೋಗಬೇಕು ಎಂದಿದ್ದು ಗೊತ್ತಿದೆ. ಅದನ್ನು ಹೇಳಿದ್ದು ಹಿಂದೂ ಮಹಾಸಭಾ. ಅದನ್ನು ಬಿಟ್ಟರೆ ಹಿಂದೂ ಮಹಾಸಭಾ ದೇಶ ವಿಭಜನೆಯ ಮಾತು ಹೇಳಿಲ್ಲ. ಇದು ಮೊಯ್ಲಿ ಅವರ ತಪ್ಪು ಕಲ್ಪನೆ ಎಂದರು.ಕತಾರ್‌ನಲ್ಲಿ ರಾಮಮಂದಿರ ನಿರ್ಮಾಣವಾಗಿದ್ದು, ಭಾರತ ದೇಶ ಹಾಗೂ ಸಂಸ್ಕೃತಿಯ ಮಹತ್ವ ತೋರಿಸುತ್ತದೆ. ಮೋದಿ ಹೇಳಿದ್ದಕ್ಕೆ ಅಲ್ಲಿಯ ರಾಜ ಒಪ್ಪಿ, ಜಾಗ ಕೊಟ್ಟರು. ರಾಮನ ಆರಾಧನೆಗೆ ಅವಕಾಶ ಕೊಟ್ಟರು ಎಂದರು.
ಮಹದಾಯಿಗೆ ಕೇಂದ್ರ ಅನುಮತಿ ನಿರಾಕರಿಸಿಲ್ಲ: ಸಚಿವ ಜೋಶಿ ಮನವಿಕೇಂದ್ರ ಸರ್ಕಾರ ರೈತರಿಗೆ ಸಾಕಷ್ಟು ಯೋಜನೆ, ನೆರವನ್ನು ನೀಡಿದೆ. ಮುಂದೆಯೂ ರೈತ ಪರ ನಿಲ್ಲಲಿದೆ. ಹಾಗಾಗಿ ದೆಹಲಿಯತ್ತ ಪ್ರತಿಭಟನೆಗೆ ಹೊರಟಿರುವ ರೈತ ಮುಖಂಡರು ಸರ್ಕಾರದೊಂದಿಗೆ ಮಾತುಕತೆಗೆ ಬರಬೇಕು ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಮನವಿ ಮಾಡಿದ್ದಾರೆ.ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ರೈತರ ಬಗ್ಗೆ ಸಹಾನುಭೂತಿ ಹೊಂದಿದೆ. ರೈತರ ಹೊಸ ಬೇಡಿಕೆಯನ್ನು ನಮ್ಮ ಸರ್ಕಾರ ಪರಿಶೀಲನೆ ಮಾಡುತ್ತದೆ. ಇದು ಒಂದೆರೆಡು ದಿನಗಳಲ್ಲಿ ತೀರ್ಮಾನ ಮಾಡಲು ಆಗಲ್ಲ. ಈಗಾಗಲೇ ಪಿಯೂಷ್ ಗೋಯಲ್, ರಾಜ್ಯ ಸಚಿವ ವಿದ್ಯಾನಂದ ಸೇರಿದಂತೆ ಪ್ರಮುಖ ಮಂತ್ರಿಗಳು ರೈತ ಮುಖಂಡರ ಜತೆ ಚರ್ಚೆ ನಡೆಸಿದ್ದಾರೆ ಎಂದು ತಿಳಿಸಿದರು.ಕಲ್ಲು ಹೊಡೆಯುವುದು ರೈತರ ಕೆಲಸವಲ್ಲಕೇಂದ್ರ ಸರ್ಕಾರ ರೈತರ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುತ್ತಿಲ್ಲ. ಅನುಮತಿ ಇಲ್ಲದೆ ಬಂದವರನ್ನು ಪೊಲೀಸರು ತಡೆಯುತ್ತಿದ್ದಾರೆ ಅಷ್ಟೇ ಎಂದ ಅವರು, ಕಲ್ಲು ಹೊಡೆಯುವುದು ರೈತರ ಕೆಲಸವಲ್ಲ. ಅತ್ಯಂತ ಶಾಂತ ರೀತಿಯಿಂದ ವರ್ತಿಸಿ ರೈತರು ಮಾತುಕತೆಗೆ ಬರಬೇಕು ಎಂದು ಮನವಿ ಮಾಡಿದರು.ಮಹದಾಯಿ ವಿಷಯದಲ್ಲಿ ತರಾತುರಿ ಮಾಡುವಂತಿಲ್ಲ. ನಾವು ತರಾತುರಿಯ ಹೆಜ್ಜೆ ಇಟ್ಟರೆ ಒಂದೇ ನಿಮಿಷದಲ್ಲಿ ತಡೆಯಾಜ್ಞೆಯಾಗುವ ಸಾಧ್ಯತೆ ಇದೆ. ಹಾಗಾಗಿ, ಬಹಳ ಸೂಕ್ಷ್ಮ ಮುನ್ನೆಚ್ಚರಿಕೆ ಹೆಜ್ಜೆ ಇಡಬೇಕಿದೆ. ಅದನ್ನು ಮಾಡುತ್ತಿದ್ದೇವೆ ಎಂದರು.ಮಹದಾಯಿ ಯೋಜನೆಯನ್ನು ನಿರಾಕರಿಸಿಲ್ಲ ಅಥವಾ ತಿರಸ್ಕರಿಸಿಲ್ಲ. ಕೇಂದ್ರ ಸರ್ಕಾರದಿಂದ ಸಾಧ್ಯವಾದ ಎಲ್ಲ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಿದೆ. ತನ್ನ ಕೈಯಲ್ಲಿ ಇದ್ದ ಕಡತವನ್ನು ಕ್ಲಿಯರ್ ಮಾಡಿದೆ. ಆದರೆ, ಹುಲಿ ಕಾರಿಡಾರ್ ಮತ್ತು ದಟ್ಟ ಅರಣ್ಯ ಇರುವುದರಿಂದ ಸುಪ್ರೀಂ ಕೋರ್ಟ್ ಸಮರ್ಪಕ ವರದಿ, ಮಾಹಿತಿ ಕೇಳಿದೆ. ಹೀಗಾಗಿ, ಹದ್ದಿನ ಕಣ್ಣಿಟ್ಟು, ಕೂಲಂಕಷ ಪರಿಶೀಲನೆ ನಡೆಸಿ ಮುಂದಿನ ಕ್ರಮಕ್ಕೆ ಮುಂದಾಗುತ್ತಿದ್ದೇವೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.