ಕನ್ನಡಪ್ರಭ ವಾರ್ತೆ ತುಮಕೂರುಮೇಲ್ವರ್ಗಗಳ ಪಿತೂರಿಯಿಂದ ಪ್ರಧಾನಿ ಹುದ್ದೆಯನ್ನು ಬಾಬೂಜಿ ಕೂದಲೆಳೆಯ ಅಂತರದಲ್ಲಿ ಕಳೆದುಕೊಂಡರು. ಆದರೂ ಎದೆಗುಂದದೆ, ಬಡವರು, ಕಾರ್ಮಿಕರ ಪರವಾಗಿ ಅನೇಕ ಕಾಯ್ದೆಗಳನ್ನು ತರುವ ಮೂಲಕ ಇಡೀ ದೇಶಕ್ಕೆ ಬಾಬು ಜಗಜೀವನ್ ರಾಂ ಅಪಾರ ಕೊಡುಗೆ ನೀಡಿದ್ದಾರೆ ಎಂದು ಅಖಿಲ ಭಾರತ ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ತಿಳಿಸಿದ್ದಾರೆ.ನಗರದ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿಯ ಕಚೇರಿಯಲ್ಲಿ ಆಯೋಜಿಸಿದ್ದ ಬಾಬು ಜಗಜೀವನ್ ರಾಂ ಅವರ 117ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಡವರು ಒಂದು ಹೊತ್ತಿನ ತುತ್ತಿಗಾಗಿ ಸರ್ಕಾರದ ಕಡೆಗೆ ಆಸೆಗಣ್ಣಿನಿಂದ ನೋಡುವ ಕಾಲದಲ್ಲಿ, ಕೃಷಿಯಲ್ಲಿ ರಸಾಯನಿಕ ಅಳವಡಿಕೆಯ ಜೊತೆಗೆ, ಹೆಚ್ಚು ಇಳುವರಿ ನೀಡುವ ತಳಿಗಳ ಸಂಶೋಧನೆ ಸೇರಿದಂತೆ ಹಲವಾರು ಅವಿಷ್ಕಾರಗಳ ಮೂಲಕ ಭಾರತದ ಆಹಾರದಲ್ಲಿ ಸ್ವಾವಲಂಬನೆ ಸಾಧಿಸಲು ಹಸಿರು ಕ್ರಾಂತಿಯನ್ನು ಜಾರಿಗೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ. ರೈಲ್ವೆ, ಕೈಗಾರಿಕೆ, ಕಾರ್ಮಿಕ ಸಚಿವರಾಗಿ ಅಂಬೇಡ್ಕರ್ ಅವರ ಆಶಯಗಳನ್ನು ಈಡೇರಿಸಲು ಅವಿರತ ಶ್ರಮಿಸಿದ ಬಾಬೂಜಿ ಅವರ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕಾಗಿದೆ ಎಂದರು.ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾ ಉಪಾಧ್ಯಕ್ಷ ಡಿ.ಕೆ.ಇಂದ್ರಕುಮಾರ್ ಮಾತನಾಡಿ, ಶೋಷಿತ ಸಮುದಾಯಗಳ ಏಳಿಗೆಗೆ ಅಂಬೇಡ್ಕರ್ ಅವರು ಎಳೆದುಕೊಂಡು ಬಂದ ಸಮಾನತೆಯ ರಥವನ್ನು ಮತ್ತಷ್ಟು ಮುಂದಕ್ಕೆ ಎಳೆಯುವ ಮೂಲಕ ಕಾರ್ಮಿಕರು, ರೈತರಿಗೆ ಕನಿಷ್ಠ ಕೂಲಿ ಕಾಯ್ದೆ ಜಾರಿಗೆ ತಂದು ಅನುಕೂಲ ಕಲ್ಪಿಸಿದವರು ಬಾಬು ಜಗಜೀವನ್‌ರಾಂ ಅವರ ಜಯಂತಿಯ ದಿನ ನಾವೆಲ್ಲರೂ ಅವರ ಆಶಯದಂತೆ ಬದುಕಲು ಪ್ರತಿಜ್ಞೆ ಕೈಗೊಳ್ಳಬೇಕೆಂದರು.ಬಾಬು ಜಗಜೀವನ್ ರಾಂ ಅವರ ೧೧೭ನೇ ಜಯಂತ್ಯುತ್ಸವವನ್ನು ಡಾ. ಬಾಬು ಜಗಜೀವನ್ ರಾಮ್ ರವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸುವುದರ ಮೂಲಕ ಸಿಹಿ ಹಂಚಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಒಓಬಿಸಿ ಘಟಕದ ಜಿಲ್ಲಾಧ್ಯಕ್ಷ ರಾದ ಎಸ್.ರಾಮಚಂದ್ರರಾವ್, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಬ್ಬೀರ್‌ಅಹ್ಮದ್, ಸಮಾಜ ಸೇವಕ ನರಸಿಂಹಮೂರ್ತಿ, ಅಲ್ಪಸಂಖ್ಯಾತ ನಗರ ಅಧ್ಯಕ್ಷ ರಫೀಕ್ ಅಹಮದ್, ಪದಾಧಿಕಾರಿಗಳಾದ ರಾಜೀವ್ ಕೆ,ರವಿ ಚಂಗಾವಿ, ಶ್ರೀನಿವಾಸ್‌ರಾವ್, ರಾಮಣ್ಣ, ಗಂಗಾಧರ್ ಜಿ.ಆರ್,ಕೊತ್ತಿಹಳ್ಳಿ ಶಿವಣ್ಣ,ಮಾರುತಿ ಸಿ, ನಾರಾಯಣ್ ಎಸ್, ಸಿದ್ದೇಶ, ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.