ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಹಿಂದೆ ಬಡವರ ಆಹಾರವಾಗಿದ್ದ ಸಜ್ಜೆ, ಜೋಳ, ನವಣೆ ಪದಾರ್ಥಗಳು ಇಂದು ಸಿರಿವಂತರ ಆಹಾರವಾಗುತ್ತಿವೆ. ಪ್ರಾಚೀನ ಕಾಲದ ಆಹಾರ ಪದ್ಧತಿ ಮತ್ತೆ ಮರುಕಳುಹಿಸುತ್ತಿದೆ ಎಂದು ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ ಹೇಳಿದರು.ಜಿಲ್ಲಾಡಳಿತ, ಜಿಪಂ, ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆ, ಧಾರವಾಡ ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕೃಷಿ ತಂತ್ರಜ್ಞಾನ ಸಹಯೋಗದಲ್ಲಿ ಆಹಾರ ಮತ್ತು ಪೌಷ್ಟಿಕ ಭದ್ರತೆ ಯೋಜನೆಯಡಿ ಹಮ್ಮಿಕೊಂಡ ಜಿಲ್ಲಾಮಟ್ಟದ ಸಿರಿಧಾನ್ಯ ಹಾಗೂ ಸಾವಯವ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆಧುನಿಕತೆಯ ಭರಾಟೆಯಲ್ಲಿ ಪ್ರತಿಯೊಬ್ಬರ ಜೀವನ ಶೈಲಿ ಜೊತೆಗೆ ಆಹಾರ ಪದ್ಧತಿಗಳು ಬದಲಾಗುತ್ತಿದೆ ಎಂದರು.ವರ್ಷದಿಂದ ವರ್ಷಕ್ಕೆ ಬದಲಾಗುತ್ತಿರುವ ಆಹಾರ ಪದ್ಧತಿಯಿಂದ ಅದಕ್ಕೆ ಅನುಗುಣವಾಗಿ ರೋಗಗಳ ಸಂಖ್ಯೆಯೂ ಹೆಚ್ಚಾಗುತ್ತಿವೆ. ಕೆಲವೊಂದು ರೋಗಗಳು ವಿಜ್ಞಾನಿ ಹಾಗೂ ವೈದ್ಯರಿಗೂ ತಿಳಿಯದಂತಾಗಿರುವುದು ವಿಪರ್ಯಾಸ. ಹಿಂದೆ ನಿಯಮಿತವಾದ ಆಹಾರ ಕಲಬೆರಕೆ ರಹಿತ ಆಹಾರ, ಬೆವರು ಸುರಿಸಿ ಶ್ರಮಪಡುತ್ತಿದ್ದರಿಂದಾಗಿ ಉತ್ತಮ ಆರೋಗ್ಯದೊಂದಿಗೆ ದೀರ್ಘಾಯುಷಿ ಆಗತ್ತಿದ್ದರು. ಆದರೆ ಇಂದು ಬಣ್ಣ ಹಾಗೂ ನಾಲಿಗೆ ರುಚಿಗಾಗಿ, ಪೌಷ್ಟಿಕಾಂಶಗಳಿಲ್ಲದ ಆಹಾರ ತಿಂದು ಅಲ್ಪಾಯುಷಿಗಳಾಗುತ್ತಿದ್ದಾರೆ. ಆದ್ದರಿಂದ ಸಿರಿಧಾನ್ಯಗಳ ಬಳಕೆ ಪ್ರಚಲಿತವಾಗುತ್ತಿದೆ ಎಂದು ವಿವರಿಸಿದರು.
ಸಿರಿಧಾನ್ಯ ಉತ್ಪನ್ನಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಹಾಗೂ ಬಿಟಿಡಿಎ ಅಧ್ಯಕ್ಷ ಎಚ್.ವೈ.ಮೇಟಿ, ಜಿಲ್ಲೆಯ ಬಾದಾಮಿ, ಹುನಗುಂದ ಹಾಗೂ ಬಾಗಲಕೋಟೆಗಳಲ್ಲಿ ಸಿರಿಧಾನ್ಯಗಳನ್ನು ಅಧಿಕ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಮುಂದೆ ಇವುಗಳಿಗೆ ಉತ್ತೇಜನ ನೀಡಿ ಹೆಚ್ಚು ಉತ್ಪನ್ನ ಬರುವಂತೆ ಮಾಡುವುದು ಅವಶ್ಯಕವಾಗಿದೆ. ಮಳೆ ಆಶ್ರಿತ ಸಿರಿಧಾನ್ಯವಾಗಿದ್ದರಿಂದ ಹೆಚ್ಚಿನ ನೀರಿನ ಅವಶ್ಯಕತೆ ಇರುವುದಿಲ್ಲ. ಕೃಷಿಗೆ ಹೆಚ್ಚಿನ ಖರ್ಚು ಇಲ್ಲ. ಆದ್ದರಿಂದ ಕಬ್ಬು ಸೇರಿದಂತೆ ಕೇವಲ ವಾಣಿಜ್ಯ ಬೆಳೆಗಳನ್ನು ಬೆಳೆಯದೇ ಉತ್ತಮ ಜೀವನಕ್ಕಾಗಿ ಬದುಕಲು ಅವಶ್ಯವಾಗಿರುವ ಪೌಷ್ಟಿಕಾಂಶಗಳನ್ನು ಹೆಚ್ಚು ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯಬೇಕು ಎಂದು ಸಲಹೆ ನೀಡಿದರು.ಜನಪದ ಆಶುಕವಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತ ಸಿದ್ದಪ್ಪ ಬಿದರಿ ಮಾತನಾಡಿ, ನಮ್ಮ ದೇಶ ಕೃಷಿ ಪ್ರಧಾನವಾಗಿದ್ದು, ಇಂದಿನ ಯುವಕರು ಕೃಷಿಯತ್ತ ಒಲವು ತೋರಬೇಕಿರುವುದು ಅವಶ್ಯವಾಗಿದೆ. ಅಕ್ಷರ ಜ್ಞಾನದ ಜೊತೆಗೆ ಸಾಮಾನ್ಯ ಜ್ಞಾನ ಅವಶ್ಯವಾಗಿದೆ. ಮಕ್ಕಳಿಗೆ ಶಿಕ್ಷಣದ ಜೊತೆ ಕೃಷಿ ಚಟುವಟಿಕೆಗಳ ಬಗ್ಗೆ ಪೋಷಕರು ಆಸಕ್ತಿ ಮೂಡಿಸಬೇಕು. ಗುರು-ಹಿರಿಯರ ಬಗ್ಗೆ ಗೌರವ ಕೊಡುವ ನೈತಿಕತೆ ಪಾಠಗಳು ಇಂದು ಅವಶ್ಯವಾಗಿವೆ ಎಂದರು.
ಪರಿಣಿತ ತಜ್ಞರಾದ ಡಾ.ಚಂದ್ರಶೇಖರ ಬಿರಾದಾರ ಖುಷ್ಕಿ ಬೆಳೆಗಳಲ್ಲಿ ಸಿರಿಧಾನ್ಯಗಳ ಮಹತ್ವ ತಿಳಿಸಿಕೊಟ್ಟರು. ಸಿರಿಧಾನ್ಯಗಳ ಬಳಕೆ ಕುರಿತು ಡಾ.ಕಾಶಿಬಾಯಿ ಖ್ಯಾದಗಿ, ಸಾವಯವ ಕೃಷಿ ಸಿರಿಧಾನ್ಯ ಬೆಳೆಗಳ ಪೋಷಕಾಂಶಗಳ ಮಹತ್ವ ಕುರಿತು ಡಾ.ಭುವನೇಶ್ವರಿ ಹೇಳಿದರು. ಪ್ರಾರಂಭದಲ್ಲಿ ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಶಶಿಧರ ಕುರೇರ, ಕೃಷಿ ಇಲಾಖೆಯ ಉಪನಿರ್ದೇಶಕ ಎಲ್.ಐ.ರೂಢಗಿ, ಕೆ.ಎನ್.ಅಗಸನಾಳ, ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಆರ್.ಎ.ನಂದಗಾವಿ, ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.-------------ವಿವಿಧ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ
ಕಳೆದ 2023-24ನೇ ಸಾಲಿನ ಆತ್ಮ ಯೋಜನೆಯಡಿ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಹಾಗೂ ಕೃಷಿ ಮಹಿಳಾ ಪ್ರಶಸ್ತಿಗೆ ಆಯ್ಕೆದವರನ್ನು ಸನ್ಮಾನಿಸಲಾಯಿತು. ಪ್ರೇಮಾ ಉರ್ಪ ಲಕ್ಷ್ಮೀ ಬೋರಡ್ಡಿ, ಬಸಪ್ಪ ಗೋಠೆ, ಪರಮಾನಂದ ಹಳ್ಳಿ, ಶರಣವ್ವ ಮೆಟ್ಟಿನ (ತೋಟಗಾರಿಕೆ), ಸಂದೀಪಗೌಡ ಪಾಟೀಲ, ಮಹಾದೇವ ಮಾಲಗಾಂವಿ (ಸಾವಯವ ಕೃಷಿ ಪದ್ಧತಿ), ಗುರನಗೌಡ ಪಾಟೀಲ (ರೇಷ್ಮೆ), ಕಾಶಿಬಾಯಿ ಬಿಲಕೇರಿ, ಶೈಲಜಾ ಬ್ಯಾಕೋಡ, ಶ್ರೀಶೈಲ ಟಕ್ಕಳಕಿ (ಸಮಗ್ರ ಕೃಷಿ ಪದ್ದತಿ).ಜಿಲ್ಲಾಮಟ್ಟದ ಹಿಂಗಾರು ಜೋಳ ಪ್ರಶಸ್ತಿ ಪುರುಷರ ವಿಭಾಗದಲ್ಲಿ ವೇಮಣ್ಣ ಬೆಣ್ಣೂರ (ಪ್ರಥಮ), ಬಸಯ್ಯ ಆಲೂರ (ದ್ವಿತೀಯ) ಹಾಗೂ ರಜತಕುಮಾರ ಸರನಾಯಕ (ತೃತೀಯ). ಮಹಿಳೆಯರ ವಿಭಾಗದಲ್ಲಿ ಮಲ್ಲವ್ವ ಕಿರಸೂರ (ಪ್ರಥಮ), ಪಾರ್ವತೆವ್ವ ಕೆಂಗಲ್ (ದ್ವಿತೀಯ) ಹಾಗೂ ತಾಯಕ್ಕ ರುದ್ರಘಂಟಿ (ತೃತಿಯ) ಸ್ಥಾನ ಪಡೆದವರನ್ನು ಸನ್ಮಾನಿಸಲಾಯಿತು.
ಪಾಕ ಸ್ಪರ್ಧೆಯಲ್ಲಿ ಸಿಹಿ ಖಾದ್ಯ ವಿಭಾಗದಲ್ಲಿ ಜಯಶ್ರೀ ತೆಗ್ಗಿ (ಪ್ರಥಮ), ಶೃತಿ ಕೋಲಾರ (ದ್ವಿತೀಯ), ಮಹಾದೇವಿ ಶಟ್ಟರ (ತೃತೀಯ), ಖಾರ ಖಾದ್ಯ ವಿಭಾಗದಲ್ಲಿ ಗೀತಾ ಎಲ್.ಎನ್. (ಪ್ರಥಮ), ಶೋಭಾ ಹೂಗಾರ (ದ್ವಿತೀಯ), ಆಶಾರಾಣಿ ಹಿರೇಮಠ, ಸುಪ್ರಿಯಾ ಕಡಪಟ್ಟಿ (ತೃತೀಯ) ಸ್ಥಾನ ಪಡೆದರೆ, ಮರೆತುಹೋದ ಖಾದ್ಯ ವಿಭಾಗದಲ್ಲಿ ಶೋಭಾ ಬೀಳೂರ (ಪ್ರಥಮ), ಸುಮಿತ್ರಾ ಶೆಂಡಗಿ (ದ್ವಿತೀಯ). ಸರೋಜಿನಿ ನಾಯ್ಕರ (ತೃತೀಯ) ಸ್ಥಾನ ಪಡೆದುಕೊಂಡರು.