ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮುದ್ರಣಾಲಯ ಮಾಲೀಕರು ಹಾಗೂ ದೂರಸಂಪರ್ಕ ಸಂಸ್ಥೆಯ ಪ್ರತಿನಿಧಿಗಳೊಂದಿಗಿನ ಮಾದರಿ ಚುನಾವಣಾ ನೀತಿ ಸಂಹಿತೆ ಅನುಷ್ಠಾನ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 1951ರ ಪ್ರಜಾಪ್ರತಿನಿಧಿ ಕಾಯ್ದೆಯಲ್ಲಿ ಸ್ಪಷ್ಟವಾಗಿ ಮುದ್ರಣಾಲಯಗಳ ಕಾರ್ಯವೈಖರಿ ಬಗ್ಗೆ ತಿಳಿಸಲಾಗಿದೆ. ಚುನಾವಣಾ ಪ್ರಚಾರ ಸಾಮಾಗ್ರಿಗಳ ಮುದ್ರಣದ ಕುರಿತು ಅಪೆಂಡಿಕ್ಸ್-ಎ ನಲ್ಲಿ ಡಿಕ್ಲರೇಷನ್ ಮಾಡಿ, ಮಾಹಿತಿಯನ್ನು ನೀಡುವುದು ಕಡ್ಡಾಯವಾಗಿದ್ದು, ಎಲ್ಲ ಮುದ್ರಕರು ತಪ್ಪದೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದರು.
ಪ್ರತಿ ಕರಪತ್ರ, ಭಿತ್ತಿ ಪತ್ರದಲ್ಲಿ ಮುದ್ರಕರ ಹೆಸರು, ಮುದ್ರಣಾಲಯದ ಹೆಸರು ವಿಳಾಸ, ಮುದ್ರಿತ ಪ್ರತಿಗಳ ಸಂಖ್ಯೆ ವಿವರವನ್ನು ನಮೂದಿಸುವುದು ಕಡ್ಡಾಯ. ಮುದ್ರಣಾಲಯದ ಮಾಲೀಕರು ಕಡಿಮೆ ದರ ನಮೂದಿಸುವುದು, ವೆಚ್ಚ ಕಡಿಮೆ ತೋರಿಸುವುದು, ಹೆಚ್ಚು ಪ್ರತಿಗಳನ್ನು ಮುದ್ರಿಸಿ, ಕಡಿಮೆ ಸಂಖ್ಯೆಯನ್ನು ನಮೂದಿಸುವುದು ಅಪರಾಧವಾಗುತ್ತದೆ. ಈಗಾಗಲೇ ಚುನಾವಣಾ ಆಯೋಗಕ್ಕೆ ವಿವಿಧ ಮುದ್ರಣ ಸಾಮಾಗ್ರಿಗಳ ಮುದ್ರಣಕ್ಕೆ ತಗಲುವ ವೆಚ್ಚದ ಪಟ್ಟಿಯನ್ನು ಸಲ್ಲಿಸಲಾಗಿದೆ. ಅಲ್ಲದೆ ನಿಯಮಗಳ ಬಗ್ಗೆ ರಾಜಕೀಯ ಪಕ್ಷಗಳೊಂದಿಗೆ ಸಭೆ ನಡೆಸಿ, ಅರಿವು ಮೂಡಿಸಲಾಗಿದೆ. ಹೀಗಾಗಿ ಯಾವುದೇ ರೀತಿಯ ಅವ್ಯವಹಾರಗಳಿಗೆ ಅವಕಾಶವಿಲ್ಲ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.ಜಿಲ್ಲಾ ಮಾಸ್ಟರ್ ತರಬೇತುದಾರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಮಾತನಾಡಿ, ಮುದ್ರಣ ಮಾಡುವ ಸಂದರ್ಭದಲ್ಲಿ ಪ್ರಕಾಶಕರು ಯಾವುದೇ ಅಭ್ಯರ್ಥಿ, ರಾಜಕೀಯ ಪಕ್ಷ ಹಾಗೂ ಸಂಸ್ಥೆಗೆ ಸಂಬಂಧಪಟ್ಟಂತೆ ಮುದ್ರಣಾ ಸಾಮಗ್ರಿಯನ್ನು ಮುದ್ರಣ ಮಾಡುವುದಕ್ಕಿಂತ ಮುಂಚಿತವಾಗಿ ಅಪೆಂಡಿಕ್ಸ್-ಎ ಡಿಕ್ಲರೇಷನ್ ಅನ್ನು ಕಡ್ಡಾಯವಾಗಿ ಕೊಡಬೇಕು. ಯಾವುದೇ ಕಾರಣಕ್ಕೂ ಪ್ರಭಾವ, ಒತ್ತಡಕ್ಕೆ ಮಣಿದು ಅನಧಿಕೃತ ಮುದ್ರಣ ಕಾರ್ಯಕ್ಕೆ ಯಾರೂ ಕೂಡ ಮುಂದಾಗಬಾರದು ಎಂದು ಹೇಳಿದರು.
ಚುನಾವಣಾ ತರಬೇತಿ ನಿರ್ವಹಣಾ ಕೋಶದ ನೋಡಲ್ ಅಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಕಮ್ಯೂನಿಕೇಷನ್ ಪ್ಲಾನ್ ಜಿಲ್ಲಾ ನೋಡಲ್ ಅಧಿಕಾರಿ ಹಾಗೂ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಬಸವನಗೌಡ ಪಾಟೀಲ್ ಸಭೆಯಲ್ಲಿ ಉಪಸ್ಥಿತರಿದ್ದರು.