ಕೇಬಲ್, ವಿದ್ಯುನ್ಮಾನ, ಜಾಲತಾಣದ ಜಾಹೀರಾತಿಗೆ ಪೂರ್ವಾನುಮತಿ ಕಡ್ಡಾಯ-ಡಿಸಿ ರಘನಂದನಮೂರ್ತಿ

KannadaprabhaNewsNetwork |  
Published : Mar 19, 2024, 12:49 AM IST
ಪೋಟೋ ಇದೆ. | Kannada Prabha

ಸಾರಾಂಶ

ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಕೇಬಲ್ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಮಾಡುವ ಚುನಾವಣಾ ಜಾಹೀರಾತುಗಳಿಗೆ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಮುದ್ರಣ ಸಾಮಗ್ರಿಗಳ ಮೇಲೆ ಪ್ರಕಾಶಕರ ಮತ್ತು ಮುದ್ರಕರ ಹೆಸರು, ಮುದ್ರಣ ಸಂಖ್ಯೆಗಳ ನಮೂದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ ಮೂರ್ತಿ ತಿಳಿಸಿದರು.

ಹಾವೇರಿ: ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಕೇಬಲ್ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಮಾಡುವ ಚುನಾವಣಾ ಜಾಹೀರಾತುಗಳಿಗೆ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಮುದ್ರಣ ಸಾಮಗ್ರಿಗಳ ಮೇಲೆ ಪ್ರಕಾಶಕರ ಮತ್ತು ಮುದ್ರಕರ ಹೆಸರು, ಮುದ್ರಣ ಸಂಖ್ಯೆಗಳ ನಮೂದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ ಮೂರ್ತಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಅಂಗವಾಗಿ ಮುದ್ರಣಾಲಯದ ಮಾಲೀಕರು ಹಾಗೂ ಲೋಕಲ್ ಕೇಬಲ್ ಟಿವಿ ಆಪರೇಟರ್‌ಗಳ ಸಭೆ ನಡೆಸಿದ ಅವರು, ಕೇಬಲ್ ಟಿವಿಗಳಲ್ಲಿ ಪ್ರಸಾರ ಮಾಡುವ ಚುನಾವಣಾ ಪ್ರಚಾರದ ಕಂಟೆಂಟಿನ ವಿಡಿಯೋ ಅಥವಾ ಕಿರುಚಿತ್ರ ಪ್ರಸಾರಕ್ಕೆ ಮುನ್ನ ಜಾಹೀರಾತು ಮತ್ತು ವಿಡಿಯೋ ತುಣುಕುಗಳು ಹಾಗೂ ಅದರ ವೆಚ್ಚದ ವಿವರವನ್ನು ನಿಗದಿತ ನಮೂನೆಯೊಂದಿಗೆ ಸಮಿತಿಗೆ ಸಲ್ಲಿಸಿ ಪರಿಶೀಲನೆ ನಡೆಸಿ ಪ್ರಸಾರಕ್ಕೆ ಅನುಮತಿ ನೀಡಿದ ನಂತರವೇ ಪ್ರಕಟಿಸಬೇಕು ಎಂದು ಸೂಚಿಸಿದರು.

ಮುದ್ರಣ: ಚುನಾವಣಾ ಪ್ರಚಾರದ ಕರಪತ್ರಗಳು, ಬ್ಯಾನರ್, ಪೋಸ್ಟರ್‌ಗಳನ್ನು ಮುದ್ರಿಸುವ ಮುನ್ನ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಕಡ್ಡಾಯವಾಗಿ ಮುದ್ರಣಕ್ಕೆ ಆದೇಶ ನೀಡಿದ ರಾಜಕೀಯ ಪಕ್ಷ, ಅಭ್ಯರ್ಥಿ ಅಥವಾ ವ್ಯಕ್ತಿಗಳಿಂದ ಕಡ್ಡಾಯವಾಗಿ ಒಂದು ಘೋಷಣೆಯನ್ನು ದ್ವಿಪ್ರತಿಯಲ್ಲಿ ಪಡೆದುಕೊಳ್ಳಬೇಕು. ಈ ಘೋಷಣೆಗೆ ಇಬ್ಬರ ಸಾಕ್ಷಿದಾರರ ರುಜು ಪಡೆದುಕೊಂಡ ನಂತರ ಮುದ್ರಣಾಲಯದ ಮಾಲೀಕರು ಕರಪತ್ರ, ಬ್ಯಾನರ್ ಒಳಗೊಂಡಂತೆ ಪ್ರಚಾರ ಸಾಮಗ್ರಿಗಳನ್ನು ಮುದ್ರಣ ಮಾಡಬೇಕು. ಮುದ್ರಣ ಸಾಮಗ್ರಿಗಳ ಮೇಲೆ ಕಡ್ಡಾಯವಾಗಿ ಮುದ್ರಕರ ಹೆಸರು(ಪ್ರಿಂಟರ್), ವಿಳಾಸ, ದೂರವಾಣಿ ಸಂಖ್ಯೆ, ಪ್ರಕಾಶಕರ (ಪಬ್ಲಿಷರ್)ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಮುದ್ರಣ ಮಾಡಿದ ಪ್ರತಿಗಳ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಿ ಮುದ್ರಣ ಮಾಡಿದ ಎರಡುದಿನದೊಳಗಾಗಿ ಘೋಷಣಾಪತ್ರ ಮತ್ತು ಮುದ್ರಿಸಿದ ಪ್ರಚಾರ ಸಾಮಗ್ರಿಯ ವಿವರದ ಒಂದು ಪ್ರತಿಯೊಂದಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಕಡ್ಡಾಯವಾಗಿ ಮಾಹಿತಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.

ಯಾವುದೇ ರಾಜಕೀಯ ಪಕ್ಷದವರು, ಅಭ್ಯರ್ಥಿ ಮುದ್ರಿಸಿದ ಪ್ರತಿಗಳ ಸಂಖ್ಯೆ ಸಹ ರಜಿಸ್ಟರ್‌ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಮುದ್ರಿಸಿರುವ ಕರಪತ್ರಗಳು ಮತ್ತು ಬಿತ್ತರಿಸುವ ಜಾಹೀರಾತುಗಳು ಮಾದರಿ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಚುನಾವಣಾ ಪ್ರಚಾರ ಸಾಮಗ್ರಿಗಳ ಮುದ್ರಣ ಚುನಾವಣಾ ಮಾದರಿ ನೀತಿ ಸಂಹಿತೆ ವ್ಯಾಪ್ತಿಗೆ ಒಳಪಡುವುದರಿಂದ ನಿಯಮ ಪಾಲಿಸದ ಕೇಬಲ್ ಆಪರೇಟರ್ ಹಾಗೂ ಮುದ್ರಣ ಮಾಲೀಕರ ಮೇಲೆ ಪ್ರಜಾ ಪ್ರಾತಿನಿಧ್ಯ ಕಾಯ್ದೆ ೧೯೫೧ರ ಸೆಕ್ಷನ್ ೧೨೭ ಎ ಪ್ರಕಾರ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಸುಗಮ ಹಾಗೂ ಪಾರದರ್ಶಕ ಚುನಾವಣೆಗೆ ಮುದ್ರಣ ಹಾಗೂ ಕೇಬಲ್ ವಾಹಿನಿಗಳ ಪ್ರತಿನಿಧಿಗಳ ಸಹಕಾರ ಅಗತ್ಯವಿದ್ದು, ಚುನಾವಣಾ ಪ್ರಚಾರ ಸಾಮಗ್ರಿಗಳ ಮುದ್ರಣ ಹಾಗೂ ಚುನಾವಣಾ ಜಾಹೀರಾತುಗಳ ಪ್ರಸಾರದಲ್ಲಿ ಹೆಚ್ಚಿನ ಮಾಹಿತಿಗಳು ಹಾಗೂ ಅನುಮತಿಗೆ ಬೇಕಾದ ನಮೂನೆಗಳು ಬೇಕಾದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ಶಾಖೆಯನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಲು ಮಾಲೀಕರಿಗೆ ಸಲಹೆ ನೀಡಿದರು.

ಪ್ರಚಾರ ಸಾಮಗ್ರಿಗಳ ಮುದ್ರಣ ಹಾಗೂ ಪ್ರಸಾರ ಕುರಿತಾಗಿ ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಚುನಾವಣಾ ತರಬೇತಿದಾರ ಉಪನ್ಯಾಸಕ ಅರವಿಂದ ಐರಣಿ ಅವರು ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲೆಯ ವಿವಿಧ ಮುದ್ರಣಾಲಯಗಳ ಮಾಲೀಕರು, ಸ್ಥಳೀಯ ಕೇಬಲ್ ಆಪರೇಟರ್ ಹಾಗೂ ಮಾಲೀಕರಿಗೆ ವಿವರಿಸಿದರು.

PREV

Recommended Stories

ದರ್ಶನ್ ಈಗ ವಿಚಾರಣಾಧೀನ ಕೈದಿ 7314
ಧರ್ಮಸ್ಥಳ ಗ್ರಾಮ: ಇಂದು ಮತ್ತೆ ಉತ್ಖನನ?