ಹಾಸ್ಟೆಲ್‌, ಶಾಲೆ ಗುಣಮಟ್ಟದ ಆಹಾರ, ಸ್ವಚ್ಛತೆಗೆ ಆದ್ಯತೆ ನೀಡಿ: ಸಂಸದೆ ಡಾ.ಪ್ರಭಾ ತಾಕೀತು

KannadaprabhaNewsNetwork |  
Published : Jul 06, 2024, 12:56 AM IST
(ಡಾ. ಪ್ರಭಾ) | Kannada Prabha

ಸಾರಾಂಶ

ಸರ್ಕಾರಿ ವಸತಿ ನಿಲಯಗಳಲ್ಲಿ ಪೌಷ್ಟಿಕಾಂಶದ ಆಹಾರ ಪೂರೈಸುತ್ತಿಲ್ಲ, ಸ್ವಚ್ಛತೆ ಕಾಪಾಡುತ್ತಿಲ್ಲವೆಂಬ ದೂರುಗಳಿವೆ. ಇನ್ನು ಮುಂದೆ ತಾವು ದಿಢೀರನೇ ಹಾಸ್ಟೆಲ್‌ಗಳಿಗೆ ಭೇಟಿ ನೀಡಲಿದ್ದು, ಲೋಪದೋಷ ಕಂಡು ಬಂದರೆ ಕಠಿಣ ಕ್ರಮ ನಿಶ್ಚಿತ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅಧಿಕಾರಿಗಳು, ಹಾಸ್ಟೆಲ್ ವಾರ್ಡನ್‌ಗಳಿಗೆ ದಾವಣಗೆರೆಯಲ್ಲಿ ಎಚ್ಚರಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ

ಸರ್ಕಾರಿ ವಸತಿ ನಿಲಯಗಳಲ್ಲಿ ಪೌಷ್ಟಿಕಾಂಶದ ಆಹಾರ ಪೂರೈಸುತ್ತಿಲ್ಲ, ಸ್ವಚ್ಛತೆ ಕಾಪಾಡುತ್ತಿಲ್ಲವೆಂಬ ದೂರುಗಳಿವೆ. ಇನ್ನು ಮುಂದೆ ತಾವು ದಿಢೀರನೇ ಹಾಸ್ಟೆಲ್‌ಗಳಿಗೆ ಭೇಟಿ ನೀಡಲಿದ್ದು, ಲೋಪದೋಷ ಕಂಡು ಬಂದರೆ ಕಠಿಣ ಕ್ರಮ ನಿಶ್ಚಿತ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅಧಿಕಾರಿಗಳು, ಹಾಸ್ಟೆಲ್ ವಾರ್ಡನ್‌ಗಳಿಗೆ ಎಚ್ಚರಿಸಿದರು.

ನಗರದ ತಮ್ಮ ಗೃಹ ಕಚೇರಿ "ಶಿವ ಪಾರ್ವತಿ "ಯಲ್ಲಿ ಶುಕ್ರವಾರ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ ಅವರು, ಮೊದಲು ಸರ್ಕಾರಿ ವಿದ್ಯಾರ್ಥಿ ನಿಲಯಗಳ ಅವ್ಯವಸ್ಥೆ ಸರಿಪಡಿಸಿ. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಜೊತೆಗೆ ಸ್ವಚ್ಛತೆಗೆ ಆದ್ಯತೆ ನೀಡಿ ಎಂದರು. "

ಏಕಲವ್ಯ ಸೇರಿದಂತೆ ವಸತಿ ಶಾಲೆಗಳು, ಹಾಸ್ಟೆಲ್‌ಗಳಲ್ಲಿ ಪೌಷ್ಟಿಕ ಆಹಾರ, ನೈರ್ಮಲ್ಯದ ಬಗ್ಗೆ ಪದೇಪದೇ ದೂರು ಬರುತ್ತಿವೆ. ಜಿಲ್ಲೆಯ ಪ್ರತಿ ವಿದ್ಯಾರ್ಥಿ ನಿಲಯದಲ್ಲೂ ಪೌಷ್ಟಿಕಾಂಶ ಮತ್ತು ಗುಣಮಟ್ಟದ ಆಹಾರ ವಿತರಿಸಬೇಕು. ಅಡುಗೆ ಮನೆ, ಪಾತ್ರೆ ಸರಂಜಾಮುಗಳನ್ನು ಸ್ವಚ್ಛವಾಗಿಡಬೇಕು. ಶೌಚಾಲಯ ಸೇರಿದಂತೆ ಇಡೀ ಹಾಸ್ಟೆಲ್ ಸ್ವಚ್ಛವಾಗಿರಬೇಕು ಎಂದರು.

ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ಸೂಕ್ತವಾಗಿ ವಿತರಿಸಬೇಕು. ಸಂಗೀತ ಮತ್ತಿತರೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಲು ಪ್ರೋತ್ಸಾಹಿಸಬೇಕು. ಆ.15ರಂದು ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ವಸತಿ ನಿಲಯಗಳ ವಿದ್ಯಾರ್ಥಿಗಳೂ ಪಾಲ್ಗೊಳ್ಳುವಂತಾಗಬೇಕು ಎಂದರು.

ಎಸ್.ಎಸ್‌. ಕೇರ್ ಟ್ರಸ್ಟ್‌ನಿಂದ ಅನೇಕ ಕಡೆ ಆರೋಗ್ಯ ಶಿಬಿರಗಳನ್ನು ನಡೆಸುತ್ತಿದ್ದು, ವಸತಿ ನಿಲಯಗಳ ವಿದ್ಯಾರ್ಥಿಗಳಿಗೂ ದಂತ ತಪಾಸಣೆ, ಆರೋಗ್ಯ ತಪಾಸಣೆ ಶಿಬಿರ ನಡೆಸಲಾಗುವುದು. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಆಯಾ ಸಮಾಜಗಳ ಬಡವರಿಗೆ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳಿದ್ದು, ಪ್ರತಿಯೊಬ್ಬರಿಗೂ ಅಂತಹ ಸೌಲಭ್ಯಗಳು ತಲುಪುವಂತೆ ಕಾರ್ಯಕ್ರಮ ರೂಪಿಸಿ, ಫಲಾನುಭವಿಗಳಿಗೆ ತಲುಪಿಸುವ ಕೆಲಸವಾಗಬೇಕು. ಭ್ರಷ್ಟಾಚಾರಕ್ಕೆ ಆಸ್ಪದ ನೀಡಬಾರದು ಎಂದು ಸಂಸದೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಗಾಯತ್ರಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಬೇಬಿ ಸುನೀತಾ ಇತರರು ಇದ್ದರು.

- - - -5ಕೆಡಿವಿಜಿ17, 18:

ದಾವಣಗೆರೆಯಲ್ಲಿ ಶುಕ್ರವಾರ ಸಂಸದೆ ಡಾ.ಪ್ರಭಾ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ, ಸಲಹೆ-ಸೂಚನೆಗಳನ್ನು ನೀಡಿದರು.

PREV

Recommended Stories

ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
ಬ್ಯಾಲೆಟ್‌ ಬಳಕೆಗೆ ಸುಗ್ರೀವಾಜ್ಞೆ ಅಗತ್ಯವಿಲ್ಲ : ಸಂಪುಟದಲ್ಲಿ ಚರ್ಚೆ