ಧಾರವಾಡ:
ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಮಾನಸಿಕ ಕಾಯಿಲೆಗಳಿದ್ದರೆ ಮನೋವೈದ್ಯರ ಬಳಿ ಚರ್ಚಿಸಿ, ಸಂದೇಹ ಪರಿಹರಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ದೊಡ್ಡಮನಿ ಸಲಹೆ ನೀಡಿದರು.ನಗರದ ಡಿಮ್ಹಾನ್ಸ್ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಸಿಜೋಫ್ರೆನಿಯಾ ದಿನಾಚರಣೆ ಅಂಗವಾಗಿ ಆಯೋಜಿಸಿದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿದ ಅವರು, ಕೆಲಸದ ಒತ್ತಡ, ಕೌಟುಂಬಿಕ ಒತ್ತಡ, ಆರ್ಥಿಕ ಒತ್ತಡ ಸೇರಿದಂತೆ ಇತ್ತೀಚೆಗೆ ಹೆಚ್ಚಿನವರಿಗೆ ಮಾನಸಿಕ ಕಾಯಿಲೆ ಬರುತ್ತಿವೆ. ಈ ಪೈಕಿ ಸಿಜೋಫ್ರೇನಿಯಾ ಎಂಬ ಮಾನಸಿಕ ಕಾಯಿಲೆಗೆ ಚಿಕಿತ್ಸೆ ಕೊಡಿಸಲು ವಿಳಂಬ ಮಾಡಬಾರದು. ಮನೋವೈದ್ಯರ ಮಾರ್ಗದರ್ಶವನ್ನು ಸಕಾಲಕ್ಕೆ ಪಡೆದುಕೊಂಡು, ಬೇಕಾದ ರೋಗಿಗಳಿಗೆ ಮನೋವೈದ್ಯರಿಂದ ಚಿಕಿತ್ಸೆ ಕೊಡಿಸಬೇಕು ಎಂದರು.
ಬೆಳಗಾವಿ ಮತ್ತು ಕಲಬುರ್ಗಿ ಮಾನಸಿಕ ಆರೋಗ್ಯ ವಿಮರ್ಶಾ ಮಂಡಳಿ ಅಧ್ಯಕ್ಷರಾದ ಡಿ.ಆರ್. ರೇಣಕೆ ಮಾತನಾಡಿ, ಸಿಜೋಫ್ರೆನಿಯಾ ಒಂದು ಮಾನಸಿಕ ಕಾಯಿಲೆ. ಇದು 300 ಜನರಲ್ಲಿ ಒಬ್ಬರಿಗೆ ಕಂಡು ಬರುತ್ತದೆ. ಈ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಗುಣಮುಖರಾಗುವುದು ಅತೀ ವಿರಳ. ಇದು ಮಧ್ಯ ವಯಸ್ಕರರಲ್ಲಿ ಹೆಚ್ಚು ಕಾಣುತ್ತದೆ. ಆಸೆ, ಆಕಾಂಕ್ಷೆಗಳು, ಪೋಷಕರು ಮಕ್ಕಳ ಮೇಲೆ ಅತಿಯಾದ ಒತ್ತಡ ಹಾಕುವುದು, ಕುಟುಂಬ, ಶಿಕ್ಷಣ, ಉದ್ಯೋಗ ಮುಂತಾದವುಗಳು ಮಾನಸಿಕ ಸ್ವಾಸ್ಥ್ಯ ಇಲ್ಲದೇ ಇರುವುದು, ಚಿಂತೆ ಮಾಡುವ ಮೂಲಕ ವ್ಯಕ್ತಿಯು ಈ ಕಾಯಿಲೆಗೆ ತುತ್ತಾಗುತ್ತಾನೆ. ಸಿಜೋಫ್ರೆನಿಯಾ ಕಾಯಿಲೆಯಿಂದ ಯಾವ ರೀತಿಯಲ್ಲಿ ಹೊರ ಬರುವುದು ಎಂಬುದನ್ನು ಕುಟುಂಬ ಮತ್ತು ಸಮಾಜವು ಒಂದು ವ್ಯವಸ್ಥಿತ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕು ಎಂದು ಹೇಳಿದರು.ನಿವೃತ್ತ ಪ್ರಾಂಶುಪಾಲ ಡಾ. ಎಸ್.ಎನ್. ಹೆಗಡೆ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಡಿಮ್ಹಾನ್ಸ್ ನಿರ್ದೇಶಕ ಡಾ. ಅರುಣಕುಮಾರ ಮಾತನಾಡಿ, ಕೆಲವು ಸಂಭಾವನೀಯ ವಿಷಯಗಳು ಮತ್ತು ಅಂಶಗಳು ಸಿಜೋಫ್ರೆನಿಯಾ ಕಾಯಿಲೆಗೆ ಸೇರಿವೆ. ಮುಂದಿನ ದಿನಮಾನಗಳಲ್ಲಿ ಈ ಕಾಯಿಲೆ ಹೆಚ್ಚಿನ ಸ್ಥಿತಿಯಲ್ಲಿ ಕಂಡುಬರಬಹುದು. ಭಾರತದಲ್ಲಿ ಈ ರೋಗದ ಅಂಕಿ-ಅಂಶದ ಬಗ್ಗೆ ಬೆಂಗಳೂರಿನ ನಿಮಾನ್ಸ್ ಸಂಸ್ಥೆಯಲ್ಲಿ ಮಾಡಿರುವ ಸಂಶೋಧನೆಯ ಬಗ್ಗೆ ಅವರು ತಿಳಿಸಿದರು. ಈ ಕಾಯಿಲೆಗೆ ಕಾರಣ, ಲಕ್ಷಣ ಹಾಗೂ ಅದಕ್ಕೆ ಚಿಕತ್ಸೆಯ ಸೌಲಭ್ಯಗಳ ಬಗ್ಗೆ ವಿವರಿಸಿದರು. ಇದೇ ವೇಳೆ ವಿಶ್ವ ಸಿಜೋಫ್ರೇನಿಯಾ ಅಂಗವಾಗಿ ಸಿದ್ಧಪಡಿಸಿದ್ದ ಭಿತ್ತಿಪತ್ರ ಅನಾವರಣಗೊಳಿಸಿದರು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಶ ಚಿತ್ತರಗಿ, ಜಿಲ್ಲಾ ಸಮೀಕ್ಷಣಾ ಅಧಿಕಾರಿ ಡಾ. ಪರಶುರಾಮ ಕೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಮಂಜುನಾಥ, ಡಾ. ರವೀಂದ್ರ ಬೊವೇರ, ಡಾ. ತನುಜಾ ಕೆ.ಎನ್., ವಕೀಲರ ಸಂಘ ಅಧ್ಯಕ್ಷ ಅಶೋಕ ಏಣಗಿ, ಬಿ.ಆರ್. ಪಾತ್ರೋಶ, ಮನೋವೈದ್ಯ ಡಾ. ಆದಿತ್ಯ ಪಾಂಡುರಂಗಿ, ಡಾ. ಸ್ವಪ್ನ ಪಾಂಡುರಗಿ, ಡಾ. ರಂಗನಾಥ, ಡಾ. ಮಂಜುನಾಥ ಭಜಂತ್ರಿ ಇದ್ದರು.