ತಾಲೂಕು ಕೃಷಿಕ ಸಮಾಜದ ಆಶ್ರಯದಲ್ಲಿ ಅಡಕೆ, ಕಾಳುಮೆಣಸು, ಶುಂಠಿ ಬೆಳೆಗಳ ಮಾಹಿತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಕೃಷಿ ಮಾಡುವ ರೈತರು ಮೊದಲು ಮಣ್ಣು ಮತ್ತು ನೀರಿನ ಉತ್ತಮ ನಿರ್ವಹಣೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಹಾನಗಲ್ ನ ಪ್ರಗತಿಪರ ಕೃಷಿಕ ಸಚಿನ್ ಸದಾಶಿವಪ್ಪ ಕಬ್ಬೂರ್ ಹೇಳಿದರು.ಶನಿವಾರ ಕೃಷಿ ಇಲಾಖೆ ಆವರಣದಲ್ಲಿ ತಾಲೂಕು ಕೃಷಿಕ ಸಮಾಜ ಮತ್ತು ಕೆರಾನ್ ಎಂಟರ್ ಪ್ರೈಸಸ್ ಆಶ್ರಯದಲ್ಲಿ ನಡೆದ ಅಡಕೆ, ಕಾಳು ಮೆಣಸು ಹಾಗೂ ಶುಂಠಿ ಬೆಳೆಗಳಲ್ಲಿ ಅಂಕಗಣಿತ ಎಂಬ ವಿಷಯದ ಬಗ್ಗೆ ಮಾತನಾಡಿದರು. ಅಡಕೆಗೆ ತಗುಲಿ ರುವ ಹಳದಿ ಎಲೆ ರೋಗ ಬಹಳ ಹಿಂದಿನಿಂದಲೂ ಇದೆ. ಇದಕ್ಕೆ ಟ್ರೈಕೋ ಡರ್ಮ ಮತ್ತು ಸುಡೋಮೊನಸ್ ಬಳಸಿದರೆ ನಿಯಂತ್ರಣಕ್ಕೆ ಬರುತ್ತದೆ. ಅಡಕೆ ಎಲೆ ಚುಕ್ಕಿ ರೋಗಕ್ಕೆ ಬ್ರೋಡೊ ದ್ರಾವಣ ಸಿಂಪಡಿಸಿದರೂ ರೋಗ ಕಡಿಮೆಯಾಗದಿದ್ದರೆ ಪರ್ಯಾಯ ವ್ಯವಸ್ಥೆ ಕಂಡು ಕೊಳ್ಳಬೇಕು. ಮಣ್ಣಿನಲ್ಲಿ ಜಿಂಕ್ ಅಂಶವಿಲ್ಲದಿದ್ದರೆ, ಸೂಕ್ಷ್ಮಾಣು ಅಂಶಗಳ ಕೊರತೆಯಿಂದ ಬೆಳೆಗೆ ರೋಗಗಳು ತಗಲುತ್ತವೆ. ಅಡಕೆ ಗಿಡ ನೆಡುವಾಗ ಗಿಡದಿಂದ ಗಿಡಕ್ಕೆ ಅಂತರ ಕಡಿಮೆಯಾದಾಗ ಬೇರುಗಳ ನಡುವೆ ಸ್ಪರ್ಶ ವಾಗಿ ಬೇರುಗಳ ಬೆಳವಣಿಗೆ ಕುಂಠಿತವಾಗಿ ಇಳುವರಿ ಕಡಿಮೆಯಾಗುತ್ತದೆ. ಹಾಗಾಗಿ ಮಣ್ಣು ಪರೀಕ್ಷೆ ಮಾಡಿಸಿ ಭೂಮಿಯಲ್ಲಿ ಯಾವುದು ಕೊರತೆಯಿದೆಯೋ ಅದನ್ನು ಮಣ್ಣಿಗೆ ನೀಡಬೇಕು ಎಂದರು.
ಬೆಲೆ ಕಡಿಮೆಯಿದೆ ಎಂದು ಸುಣ್ಣವನ್ನು ಭೂಮಿಗೆ ಹೆಚ್ಚು ಹಾಕಬಾರದು. ಉತ್ತಮ ಇಳುವರಿ, ಹೆಚ್ಚು ಆದಾಯ ಬರಬೇಕೆಂದರೆ ಮೊದಲು ಮಣ್ಣಿನ ಪರೀಕ್ಷೆ ಮಾಡಿಸಬೇಕು. ನೀರು ಯತೇಚ್ಛವಾಗಿದೆ ಎಂದ ಮಾತ್ರಕ್ಕೆ ಗಿಡಕ್ಕೆ ಹೆಚ್ಚು ನೀರು ಪೂರೈಸ ಬಾರದು. ಎಷ್ಟೇ ನೀರು ಪೂರೈಸಿದರೂ 3 ಇಂಚಿನ ಆಳದವರೆಗೆ ಮಾತ್ರ ನೀರು ತೆಗೆದುಕೊಳ್ಳುತ್ತದೆ. ಯಾರು ನೀರನ್ನು ಧಾರಾಳವಾಗಿ ಖರ್ಚು ಮಾಡುತ್ತಾರೋ ಅಲ್ಲಿ ಉಳಿತಾಯವೂ ಇಲ್ಲ. ಲೆಕ್ಕವಿಲ್ಲದಿದ್ದರೆ ಅಲ್ಲಿ ರೊಕ್ಕವಿಲ್ಲ. ಮಣ್ಣಿನ ಬಗ್ಗೆ ಆಗಾಗೆ ಮಾಹಿತಿ ಪಡೆದು, ಅಧ್ಯಯನ ಮಾಡಿ ಗೊಬ್ಬರ ಕೊಡಬೇಕು. ದ್ವಿದಳ ಧಾನ್ಯಗಳು, ಎಲ್ಲಾ ರೀತಿಯ ಸೊಪ್ಪಿನ ಗಿಡಗಳು, ವಿವಿಧ ರೀತಿಯ ಹಿಂಡಿಗಳು ಸೆಗಣಿಗೊಬ್ಬರದಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಆಧುನಿಕ ತಂತ್ರಜ್ಞಾನವನ್ನು ಕೃಷಿಯ ಅಭಿವೃದ್ಧಿಗೆ ಪೂರಕವಾಗುವಂತೆ ಬಳಸುವುದನ್ನು ರೈತರು ಕಲಿತುಕೊಳ್ಳ ಬೇಕು ಸಲಹೆ ನೀಡಿದರು.ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ರೋಹಿತ್ ಮಾತನಾಡಿ, ತಾಲೂಕಿನ ವ್ಯಾಪ್ತಿಯಲ್ಲಿ 12 ಸಾವಿರ ಹೆಕ್ಟರ್ ತೋಟಗಾರಿಕಾ ಬೆಳೆಯಿದೆ. ಭತ್ತದ ಕಣಜ ಹೋಗಿ ಅಡಕೆ ಕಣಜವಾಗಿ ಮಾರ್ಪಟ್ಟಿದೆ. ಅಡಕೆಗೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಯಿರುವುದರಿಂದ ಆದಾಯ ಹೆಚ್ಚಿಸಿಕೊಳ್ಳಲು ಅಡಕೆ ಬೆಳೆಯುತ್ತಿದ್ದಾರೆ. ಅಡಕೆಗೆ ಹಳದಿ ಎಲೆರೋಗ, ಎಲೆಚುಕ್ಕಿ ರೋಗ, ಸುಳಿರೋಗ,ನುಸಿಕಾಟದ ರೋಗಬಾಧೆಯೂ ಸಹ ಹೆಚ್ಚಾಗಿದೆ. ರೈತರು ಶಿಫಾರಸು ಮಾಡಿದ ಗೊಬ್ಬರ, ಕೀಟನಾಶಕ ಗಳನ್ನು ಬಳಸುವ ಮೂಲಕ,ಮಣ್ಣಿನ ಪರೀಕ್ಷೆ ಮೂಲಕ ವೈಜ್ಞಾನಿಕ ಬೆಳೆ ಬೆಳೆಯುವತ್ತ ಗಮನಹರಿಸಬೇಕು . ಶೀಘ್ರದಲ್ಲೇ ತೋಟಗಾರಿಕಾ ಇಲಾಖೆಯಿಂದ ರೈತರಿಗೆ ವಿವಿಧ ಬೆಳೆಗಳ ರೋಗಬಾಧೆ ತಡೆಗಟ್ಟುವ ಬಗ್ಗೆ ಮಾಹಿತಿ ಕಾರ್ಯಾಗಾರ ಆಯೋಜಿಸಲಾಗುವುದು ಎಂದರು.
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್.ಅಶೋಕ್ ಕುಮಾರ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ವಹಿಸಿದ್ದರು. ಸಭೆಯಲ್ಲಿ ತಾಲೂಕು ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಬಿ.ಕೆ. ಜಾನಕಿರಾಂ,ಶೃಂಗೇರಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ.ಎನ್.ಗೋಪಾಲ್ ಹೆಗ್ಡೆ, ಜಿಲ್ಲಾ ರೈತ ಸಂಘದ ಮಾಜಿ ಅಧ್ಯಕ್ಷ ವಿನಾಯಕ್ ಮಾಳೂರು ದಿಣ್ಣೆ, ಸಹಾಯಕ ಕೃಷಿ ನಿರ್ದೇಶಕ ಮಹೇಶ್, ಕೆರಾನ್ ಸಂಸ್ಥೆಯ ಪ್ರಸನ್ನ, ಜಿಲ್ಲಾ ಕೃಷಿಕ ಸಮಾಜದ ಕಾರ್ಯದರ್ಶಿ ಪಿ.ಕೆ.ಬಸವರಾಜಪ್ಪ, ಅನ್ನಪೂರ್ಣ ಇದ್ದರು.