ಗಜೇಂದ್ರಗಡ: ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗಾಗಿ ಪುರಸಭೆ ಸದಸ್ಯರು ಹಾಗೂ ಸಾರ್ವಜನಿಕರು ನೀಡಿರುವ ಸಲಹೆ, ಸೂಚನೆಗಳನ್ನು ಸ್ವೀಕರಿಸಿದ್ದು, ಸಕಾಲದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸುವುದರ ಜತೆಗೆ ಮೂಲಸೌಲಭ್ಯಗಳನ್ನು ಒದಗಿಸಲು ಬಜೆಟ್‌ನಲ್ಲಿ ಆದ್ಯತೆ ನೀಡಲಾಗುವುದು ಎಂದು ಪುರಸಭೆ ಸ್ಥಾಯಿ ಸಮಿತಿ ಚೇರ್ಮನ್ ಕನಕಪ್ಪ ಅರಳಿಗಿಡದ ಹೇಳಿದರು.ಸ್ಥಳೀಯ ಪುರಸಭೆ ಸಭಾ ಭವನದಲ್ಲಿ ಸೋಮವಾರ ನಡೆದ ೨೦೨೪-೨೫ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಪಟ್ಟಣದ ಅಭಿವೃದ್ಧಿ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಬಜೆಟ್ ಪೂರ್ವಭಾವಿ ಸಭೆ ಸಹಾಯಕವಾಗಿದ್ದು, ಪುರಸಭೆ ಸದಸ್ಯರು ಹಾಗೂ ಸಾರ್ವಜನಿಕರು ತಮ್ಮ ಸಲಹೆ, ಸೂಚನೆಗಳನ್ನು ನೀಡಬೇಕು ಎಂದು ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ತಿಳಿಸಿದರು.ಬಳಿಕ ಆರಂಭವಾದ ಸಭೆಯಲ್ಲಿ ಪಟ್ಟಣದಲ್ಲಿನ ಮಹಿಳಾ ಸುಲಭ ಶೌಚಾಲಯಗಳ ನಿರ್ವಹಣೆ ಇಲ್ಲದ ಪರಿಣಾಮ ಬಯಲುಮುಕ್ತ ಶೌಚ ಸರ್ಕಾರದ ಆಶಯಕ್ಕೆ ವಿರುದ್ಧವಾದ ಪರಸ್ಥಿತಿ ಪಟ್ಟಣದಲ್ಲಿದೆ. ಹೀಗಾಗಿ ಶೌಚಾಲಯಗಳನ್ನು ದುಸ್ಥಿತಿಯಲ್ಲಿಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅನುದಾನ ಮೀಸಲಿಡಿ ಎಂದು ಪುರಸಭೆ ರಾಜು ಸಾಂಗ್ಲೀಕರ ಸಲಹೆ ನೀಡುತ್ತಲೆ ಸದಸ್ಯರಾದ ಲೀಲಾ ಸವಣೂರು, ಮುದಿಯಪ್ಪ ಮುಧೋಳ ಹಾಗೂ ವೆಂಕಟೇಶ ಮುದಗಲ್ ಧ್ವನಿಗೂಡಿಸಿದರು. ನಂತರ ಸದಸ್ಯ ಶಿವರಾಜ ಘೋರ್ಪಡೆ ಮಾತನಾಡಿ, ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಇಂದು ಇಲ್ಲದಂತಾಗಿವೆ. ಹೀಗಾಗಿ ನೀರಿನ ಘಟಕಗಳ ನಿರ್ವಹಣೆ ಜತೆಗೆ ಪ್ರತ್ಯೇಕ ಕೊಳವೆ ಬಾವಿಗಳನ್ನು ಕಾಯ್ದಿರಿಸಬೇಕು. ಇಲ್ಲದಿದ್ದರೆ ಘಟಕಗಳ ನಿರ್ಮಾಣಕ್ಕೆ ಮಾಡಿದ ಹಣ ವ್ಯರ್ಥವಾಗುತ್ತದೆ. ಪಟ್ಟಣದಲ್ಲಿನ ಉದ್ಯಾನವನದ ನಿರ್ವಹಣೆ, ಹೊಸ ಆಟಿಕೆ ಸಾಮಾಗ್ರಿ ಖರೀದಿ ಮತ್ತು ನೀರಿನ ಸೌಲಭ್ಯಕ್ಕೆ ಬಜೆಟ್‌ನಲ್ಲಿ ಹಣ ಮೀಸಲಿಡಿ ಎಂದರು.
ಪುರಸಭೆಯಿಂದ ನಿವೇಶನ ಪಡೆದು ರಾಮಾಪೂರ ಗ್ರಾಮ ಬಳಿ ಮನೆಗಳನ್ನು ನಿರ್ಮಿಸಿಕೊಳ್ಳುವ ಜನರಿಗೆ ನೀರಿನ ಸಮಸ್ಯೆ ಆಗುತ್ತಿದೆ. ಹೀಗಾಗಿ ಅಲ್ಲಿ ಕೊಳವೆಬಾವಿ ಕೊರೆಯಿಸುವುದರ ಜತೆಗೆ ಪಟ್ಟಣದ ೪ ದಿಕ್ಕುಗಳಲ್ಲಿ ಸ್ವಾಗತ ನಾಮಫಲಕಗಳನ್ನು ನಿರ್ಮಿಸಿ ಎಂದ ಪುರಸಭೆ ಸದಸ್ಯ ಸುಭಾಸ ಮ್ಯಾಗೇರಿ ಅವರು, ಉಪನೋಂದಣಾಧಿಕಾರಿ ಕಚೇರಿಯಿಂದ ಪುರಸಭೆಗೆ ಬರಬೇಕಾದ ಲಕ್ಷಾಂತರ ಸೆಸ್ ಹಣ ಬಿದ್ದಿದೆ. ಒಂದು ಸಣ್ಣ ಕೆಲಸ ಹೇಳಿದರೆ ಅಧಿಕಾರಿಗಳು ಹಣ ಇಲ್ಲ ಎನ್ನುತ್ತೀರಿ. ಅಲ್ಲಿ ಬಿದ್ದಿರುವ ಹಣವನ್ನು ತರುವ ಕೆಲಸಕ್ಕೆ ಮೊದಲು ಮುಂದಾಗಿ ಎಂದು ಸಲಹೆ ನೀಡಿದರು.ಪುರಸಭೆ ಆವರಣದಲ್ಲಿನ ವಿಶೇಷ ತಹಸೀಲ್ದಾರ್ ಕಚೇರಿಯ ಸುತ್ತಮುತ್ತ ಗಬ್ಬೆದ್ದು ನಾರುತ್ತಿದೆ. ಅದನ್ನು ವಶಕ್ಕೆ ಪಡೆಯುವುದರ ಜತೆಗೆ ಅಲ್ಲೊಂದು ಕಚೇರಿಯನ್ನು ಆರಂಭಿಸಲು ಮುಂದಾಗಬೇಕು. ಪಟ್ಟಣದಲ್ಲಿ ಸ್ವಿಮಿಂಗ್ ಪೂಲ್ ನಿರ್ಮಾಣ, ಕ್ರೀಡಾಂಗಣ ನಿರ್ಮಾಣ, ತರಕಾರಿ ಮಾರುಕಟ್ಟೆ ನಿರ್ಮಾಣ, ಜೋಡು ರಸ್ತೆಯಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ ಶೌಚಾಲಯ ನಿರ್ಮಾಣ, ಪತ್ರಿಕಾ ಭವನ ನಿರ್ಮಿಸಲು ಒಂದು ಸಿಎ ಸೈಟ್‌ನಲ್ಲಿ ನಿವೇಶನವನ್ನು ಕಾಯ್ದಿರಿಸಿ, ಸೋಲಾರ್ ಬೀದಿ ದೀಪಗಳ ಅಳವಡಿಕೆ ಸೇರಿ ಅನೇಕ ಸಲಹೆ ಸೂಚನೆಗಳನ್ನು ಸದಸ್ಯರು ಹಾಗೂ ಸಾರ್ವಜನಿಕರು ನೀಡಿದರು.
ಅಭಿವೃದ್ಧಿ ಕುಂಠಿತ: ಕಳೆದ ಕೆಲ ತಿಂಗಳಿನಿಂದ ಪಟ್ಟಣದ ಪುರಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎನ್ನುವ ದೂರುಗಳಿದ್ದವು. ಪುರಸಭೆ ಸ್ಥಾಯಿ ಸಮಿತಿ ಚೇರ್ಮನ್ ನೇತೃತ್ವದಲ್ಲಿ ನಡೆದ ೨೦೨೪-೨೫ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಆಡಳಿತಾಧಿಕಾರಿಯ ಅನುಪಸ್ಥಿತಿ ಹಾಗೂ ೨೩ ಸದಸ್ಯರ ಪೈಕಿ ೧೧ಕ್ಕೂ ಅಧಿಕ ಸದಸ್ಯರು ಮತ್ತು ಇಬ್ಬರು ಸಾರ್ವಜನಿಕರು ಮಾತ್ರ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಪುರಸಭೆ ಸದಸ್ಯರಾದ ದೀಪಾ ಗೌಡರ, ದ್ರಾಕ್ಷಾಯಿಣಿ ಚೊಳಿನ, ಲಕ್ಷ್ಮೀ ಮುಧೋಳ, ವಿಜಯಾ ಮಳಗಿ, ಶರಣಪ್ಪ ಉಪ್ಪಿನಬೆಟಗೇರಿ, ಯು.ಆರ್. ಚನ್ನಮ್ಮನವರ ಹಾಗೂ ಶ್ರೀಧರ ಬಿದರಳ್ಳಿ, ಗುಲಾಂನಬಿಆಜಾದ ಹುನಗುಂದ ಅಧಿಕಾರಿಗಳಾದ ಮಲ್ಲಿಕಾರ್ಜುನಯ್ಯ, ಸಿ.ಡಿ. ದೊಡ್ಡಮನಿ, ಶಿವಕುಮಾರ ಇಲಾಳ, ಜಿ.ಎಸ್. ಪಟ್ಟಣಶೆಟ್ಟಿ, ರಿಯಾಜ ಒಂಟಿ, ಎಸ್.ಜಿ. ಕಡೇತೋಟದ, ಜಿ.ಎನ್. ಕಾಳೆ, ಪಿ.ಎನ್. ದೊಡ್ಡಮನಿ ಸೇರಿ ಇತರರು ಇದ್ದರು.