ಬೆಂಗಳೂರು : ಚುನಾವಣಾ ಪ್ರಮಾಣ ಪತ್ರದಲ್ಲಿ ಅಭ್ಯರ್ಥಿಗಳು ಸುಳ್ಳು ಮಾಹಿತಿ ನೀಡಿದ ಮತ್ತು ಮಾಹಿತಿ ಮರೆಮಾಚಿದ ಪ್ರಕರಣಗಳಲ್ಲಿ ದೂರು ದಾಖಲಿಸುವ ಹಕ್ಕು ಚುನಾವಣಾ ಆಯೋಗ ಮಾತ್ರ ಹೊಂದಿರುತ್ತದೆ ಹೊರತು ಖಾಸಗಿ ವ್ಯಕ್ತಿಗಳು ಕ್ರಿಮಿನಲ್ ಪ್ರಕರಣ ದಾಖಲಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಕಳೆದ ವಿಧಾನಸಭೆ ಚುನಾವಣೆ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಸುಳ್ಳು ಮಾಹಿತಿ ಮತ್ತು ನಾಮಪತ್ರದಲ್ಲಿನ ಕೆಲ ಕಾಲಂಗಳನ್ನು ಭರ್ತಿ ಮಾಡದ ಆರೋಪದ ಮೇಲೆ ಖಾಸಗಿ ವ್ಯಕ್ತಿಗಳು ತಮ್ಮ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸುವಂತೆ ಕೋರಿ ಮಹದೇವಪುರ ಕ್ಷೇತ್ರದ ಶಾಸಕಿ ಮಂಜುಳಾ ಲಿಂಬಾವಳಿ ಮತ್ತು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಶೈಲೇಂದ್ರ ಬೆಲ್ದಾಳೆ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಅರ್ಜಿದಾರರ ವಿರುದ್ಧ ಪ್ರಕರಣಗಳನ್ನು ರದ್ದುಪಡಿಸಿತು.
ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 125ಎ ಅಡಿಯಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿನ ಸುಳ್ಳು ಮಾಹಿತಿ ಇದ್ದರೆ ಅಥವಾ ಮಾಹಿತಿ ಮರೆಮಾಚಿದ್ದರೆ, ಚುನಾವಣಾ ಆಯೋಗ ಮಾತ್ರ ದೂರು ದಾಖಲಿಸಬೇಕಾಗುತ್ತದೆ. ಆದರೆ, ಕ್ರಿಮಿನಲ್ ದೂರು ದಾಖಲಿಸುವ ಹಕ್ಕು ಖಾಸಗಿ ವ್ಯಕ್ತಿಗಳಿಗೆ ಇರುವುದಿಲ್ಲ. ಬದಲಾಗಿ ಚುನಾವಣಾ ಅರ್ಜಿ ದಾಖಲಿಸಬಹುದಷ್ಟೇ ಎಂದು ಪೀಠ ಸ್ಪಷ್ಟಪಡಿಸಿದೆ.
ನಂತರ ಅರ್ಜಿದಾರರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ (ನಗರದ 42ನೇ ಎಸಿಎಂಎಂ ಕೋರ್ಟ್) ವಿಚಾರಣೆಯನ್ನು ರದ್ದುಪಡಿಸಿದ ಪೀಠ, ಪ್ರಕರಣದ ದೂರುದಾರರಾಗಿರುವ ಖಾಸಗಿ ವ್ಯಕ್ತಿಗಳು ಕಾನೂನಿನಲ್ಲಿ ಲಭ್ಯವಿರುವ ಪರಿಹಾರ ಪಡೆಯಲು ಮುಕ್ತರಾಗಿದ್ದಾರೆ ಎಂದು ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ವಿವರ:
ಮಂಜುಳಾ ಲಿಂಬಾವಳಿ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ತಾವು ಪಾಲುದಾರರಾಗಿರುವ ಸಂಸ್ಥೆಯ ಆಸ್ತಿ ಕುರಿತ ಮಾಹಿತಿ ಮರೆ ಮಾಚಿದ್ದಾರೆ. ಜತೆಗೆ, ತಮ್ಮ ಅವಲಂಬಿತರ ವಿವರ ಕೊಡಬೇಕಾದ ಕಾಲಂ ಅನ್ನು ಖಾಲಿ ಬಿಟ್ಟಿದ್ದಾರೆ. ಹಾಗಾಗಿ, ಅವರ ವಿರುದ್ಧ ಜನಪ್ರತಿನಿಧಿಗಳ ಕಾಯ್ದೆಯಡಿ ಕ್ರಮ ಜರುಗಿಸಬೇಕು ಎಂದು ಕೋರಿ ನಲ್ಲೂರಳ್ಳಿ ನಾಗೇಶ್ ಎಂಬುವರು 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಖಾಸಗಿ ಕ್ರಿಮಿನಲ್ ದೂರು ದಾಖಲಿಸಿದ್ದರು.
ಅದೇ ರೀತಿ ಶಾಸಕ ಡಾ.ಶೈಲೇಂದ್ರ ಬೆಳ್ದಾಳೆ ಅವರ ತಮ್ಮ ಗ್ರಾಮದ ಕುರಿತು ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ರಾಜಕುಮಾರ್ ಮಡ್ಕಿ ಖಾಸಗಿ ದೂರು ದಾಖಲಿಸಿದ್ದರು. 42ನೇ ಎಸಿಎಂಎಂ ನ್ಯಾಯಾಲಯ ದೂರನ್ನು ವಿಚಾರಣೆಗೆ ಪರಿಗಣಿಸಿತ್ತು. ಇದರಿಂದ ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಇಬ್ಬರು ಈ ಶಾಸಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಮಂಜುಳಾ ಲಿಂಬಾವಳಿ ಪರ ವಕೀಲರು, ಅರ್ಜಿದಾರರ ಮಕ್ಕಳು ತಮ್ಮದೇ ಆದ ವ್ಯಾಪಾರ-ವಹಿವಾಟು ನಡೆಸುತ್ತಾ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದಾರೆ. ಹಾಗಾಗಿ, ಮಕ್ಕಳು ಅರ್ಜಿದಾರರ ಮೇಲೆ ಅವಲಂಬಿತರಲ್ಲ. ಅರ್ಜಿದಾರರು ಪಾಲುದಾರರಾಗಿರುವ ಸಂಸ್ಥೆ ಕಾರ್ಪೋರೇಟ್ ಸಂಸ್ಥೆಯಾಗಿದೆ. ಅದರ ಮಾಲೀಕರು ಮಂಜುಳಾ ಅವರಲ್ಲ. ಆದ್ದರಿಂದ ಸುಳ್ಳು ಮಾಹಿತಿ ನೀಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ವಾದಿಸಿದ್ದರು.
ಶಾಸಕ ಬೆಲ್ದಾಳೆ ಪರ ವಕೀಲರು, ಅರ್ಜಿದಾರರು 2013, 2018 ಮತ್ತು 2023ರ ವಿಧಾನಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ಆ ಮೂರು ಚುನಾವಣೆ ಸಮಯದಲ್ಲಿ ಅರ್ಜಿದಾರರು ಚಿತ್ತಾವಾಡಿ ಗ್ರಾಮದ ವಿಳಾಸ ಹೊಂದಿದ್ದಾರೆ. ಆದರೆ, ಪ್ರಮಾಣ ಪತ್ರದಲ್ಲಿ ಮಾತ್ರ ತಮ್ಮದು ಚಿತ್ತ ಗ್ರಾಮವೆಂದು ಸುಳ್ಳು ಮಾಹಿತಿ ನೀಡಿದ್ದಾರೆ ಎಂಬುದಾಗಿ ದೂರುದಾರರು ಆರೋಪಿಸಿದ್ದಾರೆ. ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ್ದರೆ, ಆ ಕುರಿತು ದೂರು ದಾಖಲಿಸುವ ಹಕ್ಕು ಖಾಸಗಿ ವ್ಯಕ್ತಿ ಹೊಂದಿರುವುದಿಲ್ಲ. ಚುನಾವಣಾ ಆಯೋಗವು ದೂರು ದಾಖಲಿಸಬಹುದು ಎಂದು ನ್ಯಾಯಪೀಠದ ಗಮನಕ್ಕೆ ತಂದಿದ್ದರು.