ಸುವರ್ಣಸೌಧ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಮಗೆ 150 ಕೋಟಿ ರು. ಆಮಿಷವೊಡ್ಡಿದ್ದಾರೆ ಎಂದು ಬಿಜೆಪಿಯ ಅನ್ವರ್ ಮಾಣಿಪ್ಪಾಡಿ ಆರೋಪಕ್ಕೆ ಸಂಬಂಧಿಸಿ ಸಚಿವ ಪ್ರಿಯಾಂಕ್ ಖರ್ಗೆ ಅವರು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಸೋಮವಾರ ಮಧ್ಯಾಹ್ನ ವಿಧಾನಸಭೆಯಲ್ಲಿನ ಚರ್ಚೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ವಿಜಯೇಂದ್ರ ಅವರು ನಾವು ಹಿಟ್ ಆ್ಯಂಡ್ ರನ್ ಮಾಡುತ್ತಿದ್ದೇವೆ ಎಂದಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಅವರು ಬಿಜೆಪಿ ವಕ್ತಾರರೂ ಹೌದು. ಅವರೇ ವಿಜಯೇಂದ್ರ ವಿರುದ್ಧ ಹಣದ ಆಮಿಷವೊಡ್ಡಿರುವ ಬಗ್ಗೆ ಮಾತನಾಡಿದ್ದಾರೆ.
ಬಿ.ಎಸ್.ಯಡಿಯೂರಪ್ಪ ವಿರುದ್ಧ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿರುವುದಾಗಿಯೂ ಹೇಳಿದ್ದರು ಎಂಬ ಮಾಣಿಪ್ಪಾಡಿ ಅವರ ವಿಡಿಯೋ ಹೇಳಿಕೆ ಹಾಗೂ ಪತ್ರಿಕಾ ಹೇಳಿಕೆಗಳನ್ನು ಬಿಡುಗಡೆಗೊಳಿಸಿದರು.
ನಾನಲ್ಲ ಆರೋಪ ಮಾಡಿದ್ದು: ಬಿಜೆಪಿ ರಾಜ್ಯಾಧ್ಯಕ್ಷರೇ, ಆರೋಪ ಮಾಡಿದ್ದು ನಾನಲ್ಲ. ನಿಮ್ಮ ಪಕ್ಷದ ವಕ್ತಾರರು. ನೀವು ನೇಮಕ ಮಾಡಿದ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಅವರು. ಅವರ ಹೇಳಿಕೆಯ ವಿಡಿಯೋಗಳು ಪ್ರತಿಷ್ಠಿತ ಚಾನೆಲ್‌ಗಳಲ್ಲಿ ಪ್ರಸಾರವಾಗಿದೆ. ಈ ವಿಡಿಯೋದಲ್ಲಿ ಬಹಳ ಸ್ಪಷ್ಟವಾಗಿ 2.5 ಲಕ್ಷ ಕೋಟಿ ರು. ಹಗರಣವಾಗಿದೆ ಎಂದು ಮಾಣಿಪ್ಪಾಡಿ ಹೇಳಿದ್ದಾರೆ.
ಬಿಜೆಪಿಯವರೇ ಸಹಕಾರ ನೀಡುತ್ತಿಲ್ಲ. ವಿಜಯೇಂದ್ರ ಅವರು ಬಂದು ಹೊಂದಾಣಿಕೆ ಮಾಡಿಕೊಳ್ಳಿ ಒಂದು ಸಂಖ್ಯೆ ಹೇಳಿ ಅದನ್ನು ತಲುಪಿಸುತ್ತೇವೆ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.
ಬೈದಾಗ ಗನ್ ಮ್ಯಾನ್ ಜೊತೆ ಓಡಿಹೋಗಿದ್ದನ್ನೂ ಹೇಳಿದ್ದಾರೆ. ಆದರೂ ಅವರ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.4.5 ಲಕ್ಷಕ್ಕೂ ಅಧಿಕ ಕೋಟಿ ರು. ಭ್ರಷ್ಟಾಚಾರ ವಕ್ಫ್ ಆಸ್ತಿಯಲ್ಲಿ ಆಗಿದೆ ಎಂದು ಸಾಕ್ಷಿ ಸಮೇತ ಆರೋಪ ಮಾಡಿದ್ದರೂ ಮೂರೂ ಮುಖ್ಯಮಂತ್ರಿಗಳೂ ಕ್ರಮ ಕೈಗೊಂಡಿಲ್ಲ. ಇದರಲ್ಲಿ ಯಡಿಯೂರಪ್ಪ ಅವರ ಪಾತ್ರವೂ ಇರುವ ಬಗ್ಗೆ ಪತ್ರ ಬರೆದಿರುವುದಾಗಿ ಅನ್ವರ್ ಮಾಣಿಪ್ಪಾಡಿ ಅವರೇ ತಿಳಿಸಿದ್ದಾರೆ.
ವಿಜಯೇಂದ್ರ ಸೇರಿ ಕೆಲ ಬಿಜೆಪಿ ನಾಯಕರು ಈ ಪ್ರಕರಣವನ್ನು ಮುಚ್ಚಿ ಹಾಕುವುದಕ್ಕೆ ಆಮಿಷವೊಡ್ಡಿದ್ದಾರೆ ಎಂದಿದ್ದಾರೆ. ಪ್ರಧಾನಿಗಳಿಗೆ ಪತ್ರ ಹೋದರೂ ಯಾಕೆ ಸಿಬಿಐ ತನಿಖೆ ನಡೆಸಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.