ದಲಿತ ಸಂಘಟನೆಗಳ ಸಂಕೋಡನಹಳ್ಳಿ ಮಂಜುನಾಥ್ ಒತ್ತಾಯಅರಸೀಕೆರೆ: ತಾಲೂಕಿನ ಬಾಣಾವರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಕಾರ್ಯಕ್ರಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಫೋಟೋ ಹಾಗೂ ಸಂವಿಧಾನ ಪೀಠಿಕೆಯನ್ನಿಡದೇ ಸಂವಿಧಾನಕ್ಕೆ ಅವಮಾನಿಸಿರುವ ಪಿಡಿಒ ಹಾಗೂ ಕಾರ್ಯದರ್ಶಿಯ ವಿರುದ್ಧ ಕ್ರಮಕೈಗೊಂಡು ಕೆಲಸದಿಂದ ವಜಾಗೊಳಿಸಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ದಲಿತಪರ ಸಂಘಟನೆಗಳ ಒಕ್ಕೂಟದ ಮುಖ್ಯಸ್ಥ ಸಂಕೋಡನಹಳ್ಳಿ ಮಂಜುನಾಥ್ ಎಚ್ಚರಿಸಿದರು.
ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಸಂತೋಷ್‌ಕುಮಾರ್‌ಗೆ ಮನವಿ ಸಲ್ಲಿಸಿ ಮಾತನಾಡಿ, ತಾಲೂಕಿನಲ್ಲಿ ನಡೆಯುತ್ತಿರುವ ಸಂವಿಧಾನ ಜಾಗೃತಿ ಕಾರ್ಯಕ್ರಮವು ಬಾಣಾವರ ಗ್ರಾಮದಲ್ಲಿ ನಡೆದ ಸಂದರ್ಭದಲ್ಲಿ ಸಂವಿಧಾನ ಜಾಗೃತಿ ರಥಕ್ಕೆ ಸ್ವಾಗತವನ್ನು ಸರಿಯಾಗಿ ಕೋರಿಲ್ಲ, ಕಾರ್ಯಕ್ರಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಫೋಟೋ ಹಾಗೂ ಸಂವಿಧಾನ ಪೀಠಿಕೆಯನ್ನಿಡದೇ ಕಾರ್ಯಕ್ರಮಕ್ಕೆ ಮುಂದಾದ ಪಿಡಿಒ ಕುಮಾರಸ್ವಾಮಿ ಹಾಗೂ ಕಾರ್ಯದರ್ಶಿ ಶ್ರೀಕಾಂತ್‌ರನ್ನು ದಲಿತ ಮುಖಂಡರು ಪ್ರಶ್ನಿಸಿದಾಗ ದೌರ್ಜನ್ಯವೆಸಗಿದ್ದಲ್ಲದೇ ಅಸಭ್ಯ ರೀತಿಯಿಂದ ನಡೆದುಕೊಂಡಿರುವುದನ್ನು ದಲಿತಪರ ಸಂಘಟನೆಗಳ ಒಕ್ಕೂಟ ಖಂಡಿಸುತ್ತದೆ ಎಂದು ಹೇಳಿದರು.ಅಧಿಕಾರಿಯನ್ನು ಕೂಡಲೇ ವಜಾಗೊಳಿಸಬೇಕು. ಇಲ್ಲದಿದ್ದರೇ ಫೆ.೨೪ ರಂದು ಬಾಣಾವರ ಗ್ರಾಮಕ್ಕೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಪ್ಪು ಬಾವುಟ ಪ್ರದರ್ಶಿಸಬೇಕಾಗುತ್ತದೆ ಎಂದರು.
ಬಾಣಾವರ ವೆಂಕಟೇಶ್ ಮಾತನಾಡಿ, ಇವರಿಗೆ ದೇಶದ ಕಾನೂನಿಗೆ ಗೌರವವನ್ನು ನೀಡುವ ಬದಲು ಉಡಾಫೆ ವರ್ತನೆಯನ್ನು ತೋರಿರುತ್ತಾರೆ. ಈ ಹಿಂದೆಯೂ ಸಹ ಪಿಡಿಒ ಭಾರತ ಕಾನೂನಿಗೆ ಅಗೌರವವನ್ನು ತೋರಿ ಚುನಾವಣೆಯ ಸಂದರ್ಭದಲ್ಲಿ ಅಮಾನತುಗೊಂಡಿದ್ದರು. ಆದ್ದರಿಂದ ಇವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಒಕ್ಕೂಟ ಇವರ ವಿರುದ್ಧ ಹೋರಾಟವನ್ನು ನಡೆಸುತ್ತದೆ ಎಂದರು.ಈ ಸಂದರ್ಭದಲ್ಲಿ ಮಂಜುನಾಥ್, ವೆಂಕಟೇಶ್, ಮಲ್ಲಿದೇವಿಹಳ್ಳಿ ಮಂಜುನಾಥ್, ಆನಂದ್, ಜಯಕುಮಾರ್, ಮಾಡಾಳು ಮೂಡ್ಲಪ್ಪ, ಅಣ್ಣಾದೊರೈ, ಬಾಲಮುರುಗನ್, ಜಾಜೂರು ಸ್ವಾಮಿ, ದೇವರಾಜ್, ಶೇಖರ್, ಸಿದ್ದಪ್ಪ, ರೇಣುಕಪ್ಪ ಉಪಸ್ಥಿತರಿದ್ದರು.ಬಾಣಾವರ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಕಾರ್ಯದರ್ಶಿಯವರನ್ನು ಕೆಲಸದಿಂದ ವಜಾಗೊಳಿಸುವಂತೆ ಒತ್ತಾಯಿಸಿ ದಲಿತಪರ ಸಂಘಟನೆಗಳ ಒಕ್ಕೂಟ ಬಾಣಾವರದಲ್ಲಿ ಪ್ರತಿಭಟನೆ ನಡೆಸಿತು.