ಕನ್ನಡ ಪರ ಹೋರಾಟಗಾರರ ಆದರ್ಶ ಮಾದರಿಯಾಗಲಿ: ಲೋಕೇಶ್ ಸಾಗರ್

KannadaprabhaNewsNetwork | Published : Nov 26, 2023 1:15 AM

ಸಾರಾಂಶ

ಸೋಮವಾರಪೇಟೆ ಸೃಷ್ಟಿಯ ಚಿಗುರು ಕವಿಬಳಗ, ವಿದ್ಯಾ ನರ್ಸಿಂಗ್ ತರಬೇತಿ ವತಿಯಿಂದ ಮಾನಸಹಾಲ್‌ನಲ್ಲಿ ಕರ್ನಾಟಕ ಸುವರ್ಣ ಸಂಭ್ರಮ-೨೦೨೩ ಪ್ರಯುಕ್ತ ಶನಿವಾರ ಸಂಜೆ ಆಯೋಜಿಸಿದ್ದ ಗೀತಗಾಯನ ಮತ್ತು ಕವಿಗೋಷ್ಠಿಯಲ್ಲಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಕರ್ನಾಟಕ ಏಕೀಕರಣಕ್ಕಾಗಿ ಸುದೀರ್ಘ ಹೋರಾಟ ಮಾಡಿದ ಕನ್ನಡ ಸಾಹಿತಿಗಳು, ಕನ್ನಡಪರ ಹೋರಾಟಗಾರರು ಮತ್ತು ಪತ್ರಕರ್ತರನ್ನು ನೆನೆಸಿಕೊಂಡು ಅವರ ಆದರ್ಶಗಳನ್ನು ಕನ್ನಡ ಮನಸ್ಸು ಮೈಗೂಡಿಸಿಕೊಳ್ಳಬೇಕು ಎಂದು ಕನ್ನಡ ಸಿರಿ ಬಳಗದ ಜಿಲ್ಲಾಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಅಭಿಪ್ರಾಯಿಸಿದರು.

ಸೋಮವಾರಪೇಟೆ ಸೃಷ್ಟಿಯ ಚಿಗುರು ಕವಿಬಳಗ, ವಿದ್ಯಾ ನರ್ಸಿಂಗ್ ತರಬೇತಿ ವತಿಯಿಂದ ಮಾನಸಹಾಲ್‌ನಲ್ಲಿ ಕರ್ನಾಟಕ ಸುವರ್ಣ ಸಂಭ್ರಮ-೨೦೨೩ ಪ್ರಯುಕ್ತ ಶನಿವಾರ ಸಂಜೆ ಆಯೋಜಿಸಿದ್ದ ಗೀತಗಾಯನ ಮತ್ತು ಕವಿಗೋಷ್ಠಿಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇವತ್ತು ಕನ್ನಡ ನಮಗೆ ಅನ್ನಕೊಡುತ್ತಿರುವ ಭಾಷೆಯಾಗಿದೆ. ಕನ್ನಡ ಭಾಷಿಕರನ್ನು ಒಗ್ಗೂಡಿಸಿ ಕನ್ನಡ ನಾಡಿಗಾಗಿ ಸುದೀರ್ಘ ಹೋರಾಟ ನಡೆದಿದೆ. ಇದರಲ್ಲಿ ಅನೇಕರು ಪ್ರಾಣತ್ಯಾಗವನ್ನು ಮಾಡಿದ್ದಾರೆ. ಕನ್ನಡನಾಡು, ಭಾಷೆಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಕನ್ನಡಿಗರ ಮೇಲಿದೆ ಎಂದು ಹೇಳಿದರು.

೧೯೫೦ರಲ್ಲಿ ಭಾರತವು ಗಣರಾಜ್ಯವಾಯಿತು. ನಂತರ ನಿರ್ದಿಷ್ಟ ಪ್ರದೇಶದಲ್ಲಿ ಮಾತನಾಡುವ ಭಾಷೆಯ ಆಧಾರದ ಮೇಲೆ ದೇಶದಲ್ಲಿ ವಿವಿಧ ಪ್ರಾಂತ್ಯಗಳು ರಚನೆಯಾದವು. ಇದು ಮೈಸೂರು ರಾಜ್ಯಕ್ಕೆ ಜನ್ಮ ನೀಡಿತು. ೧೯೭೩ ನ.೧ರಂದು ಕರ್ನಾಟಕ ಎಂದು ನಾಮಕರಣ ಮಾಡಲಾಯಿತು. ಅಂದಿನ ಮುಖ್ಯಮಂತ್ರಿ ದೇವರಾಜು ಅರಸು ಅವರ ಗಟ್ಟಿ ನಿರ್ಧಾರ ತೆಗೆದುಕೊಂಡರು. ಕರ್ನಾಟಕ ಏಕೀಕರಣದ ಹೋರಾಟದಲ್ಲಿ ಸಾಹಿತಿಗಳಾದ ಕುವೆಂಪು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಕೆ.ಶಿವರಾಮ್ ಕಾರಂತ್, ಎ.ಎನ್.ಕೃಷ್ಣರಾವ್, ಬಿ.ಎಂಶ್ರೀಕಂಠಯ್ಯ ಪ್ರಮುಖ ಪಾತ್ರ ವಹಿಸಿದ್ದಾರೆ. ರಾಜ್ಯೋತ್ಸವ ದಿನವನ್ನು ಕನ್ನಡ ಹಬ್ಬವೆಂದೇ ನಾವೆಲ್ಲರೂ ಅಚರಿಸುತ್ತಿದ್ದೇವೆ. ಕನ್ನಡ ಮಾತನಾಡುವ ಮೂಲಕ ಕನ್ನಡವನ್ನು ಬೆಳೆಸೋಣ ಎಂದು ಹೇಳಿದರು.

ಕುಶಾಲನಗರ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಡಿ.ರಂಗಸ್ವಾಮಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕನ್ನಡ ಮನಸ್ಸುಗಳು ಹೆಚ್ಚಿದ್ದಾರೆ. ಕನ್ನಡ ಮಾತನಾಡುವ ಮೂಲಕ ಭಾಷೆಯನ್ನು ಉಳಿಸಿ ಬೆಳಸುವ ಕೆಲಸ ತೆರೆಮರೆಯಲ್ಲೇ ಮಾಡುತ್ತಿದ್ದಾರೆ. ಕನ್ನಡ ಕಾರ್ಯಕ್ರಮಗಳನ್ನು ಗ್ರಾಮೀಣ ಭಾಗದಲ್ಲಿ ಅಯೋಜಿಸುವ ಮೂಲಕ ಸಾಹಿತ್ಯ ಕೃಷಿಯನ್ನು ಮಾಡಬೇಕಿದೆ ಎಂದು ಹೇಳಿದರು.

ವಿದ್ಯಾರ್ಥಿ ಜೀವನದಿಂದಲೇ ಕನ್ನಡ ಸಾಹಿತ್ಯ, ಪರಂಪರೆಯ ಬಗ್ಗೆ ಓದಿ ತಿಳಿದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣ ವೇದಿಕೆಯ ತಾಲ್ಲೂಕು ಅಧ್ಯಕ್ಷ ಕೆ.ಎನ್.ದೀಪಕ್, ಕವಯತ್ರಿ ಬಿ.ಪಿ.ಸುಮತಿ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕವಿಬಳಗದ ಅಧ್ಯಕ್ಷ ನ.ಲ.ವಿಜಯ, ನರ್ಸಿಂಗ್ ತರಬೇತಿ ಕೇಂದ್ರದ ಪ್ರಾಂಶುಪಾಲ ಟಿ.ಎಚ್.ಆಲೀಮಾ, ವ್ಯವಸ್ಥಾಪಕ ಕೆ.ಇ.ಸುಲೈಮಾನ್, ಕ.ಸಾ.ಪ. ಮಾಜಿ ಅಧ್ಯಕ್ಷ ಎಚ್.ಜೆ.ಜವರಪ್ಪ ಇದ್ದರು. ಪ್ರಾರಂಭದಲ್ಲಿ ಭುವನೇಶ್ವರಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಕವಿಬಳಗ ಪಾರಿವಾಳಗಳನ್ನು ಹಾರಿಬಿಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕವಯತ್ರಿ ಎಲ್.ಎಂ. ಪ್ರೇಮ ಸ್ವಾಗತಿಸಿದರು. ವಸಂತಿ ರವೀಂದ ವಂದಿಸಿದರು. ಆಶಾಪುಟ್ಟರಾಜು, ಗೀತಾಂಜಲಿ ಮಹೇಶ್ ನಿರೂಪಿಸಿದರು.

Share this article