ಮಾದಿಗರ ಸಾಂಸ್ಕೃತಿಕ ಸಂಘದ ಸಂವಾದಕ್ಕೆ ಜಟಾಪಟಿ

KannadaprabhaNewsNetwork | Updated : Mar 11 2024, 01:17 AM IST

ಸಾರಾಂಶ

ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಶ್ರೀಗಳ ನಡೆ ಪ್ರಧಾನವಾಗಿರಿಸಿಕೊಂಡು ಭಾನುವಾರ ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮಕ್ಕೆ ತೀವ್ರ ಆಕ್ಷೇಪ ಕೇಳಿ ಬಂದ ಹಿನ್ನಲೆ ಮುಂದೂಡಿದ ಘಟನೆ ಜರುಗಿದೆ.

ಚಿತ್ರದುರ್ಗ: ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಶ್ರೀಗಳ ನಡೆ ಪ್ರಧಾನವಾಗಿರಿಸಿಕೊಂಡು ಭಾನುವಾರ ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮಕ್ಕೆ ತೀವ್ರ ಆಕ್ಷೇಪ ಕೇಳಿ ಬಂದ ಹಿನ್ನಲೆ ಮುಂದೂಡಿದ ಘಟನೆ ಜರುಗಿದೆ.

ಮಾದಿಗರ ಸಾಂಸ್ಕೃತಿಕ ಸಂಘದ ಹೆಸರಲ್ಲಿ ಪತ್ರಕರ್ತರ ಭವನದ ಮುಂಭಾಗ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಚಿಂತಕ ಸಿ.ಕೆ.ಮಹೇಶ್, ನಿವೃತ್ತ ತಹಸೀಲ್ದಾರ್ ಹಿರೇಹಳ್ಳಿ ಮಲ್ಲಿಕಾರ್ಜನ, ದಸಂಸ ಮುಖಂಡ ಡಿ.ದುರುಗೇಶ್, ಕುಮಾರ ಅವರನ್ನೊಳಗೊಂಡ ತಂಡ ಸಂವಾದ ಏರ್ಪಡಿಸಿತ್ತು.

ಮನು ಸಂಸ್ಕೃತಿ, ಬಿಜೆಪಿ ಆರ್‌ಎಸ್‌ಎಸ್‌ ಜೊತೆ ಕೈ ಜೋಡಿಸಿದ್ದಾರೆ. ಚುನಾವಣೆಗೂ ಸ್ಪರ್ಧಿಸಲು ತುದಿಗಾಲಲ್ಲಿ ನಿಂತಿದ್ದಾರೆಂಬುದು ಸಂವಾದ ಸಂಘಟಕರ ಪ್ರಮುಖ ಆರೋಪ. ಹಾಗೊಂದು ವೇಳೆ ಶ್ರೀಗಳು ರಾಜಕೀಯ ಪ್ರವೇಶಕ್ಕೆ ಮುಂದಾದಲ್ಲಿ ಪೀಠ ತ್ಯಾಗ ಮಾಡಬೇಕೆಂಬುದು ಅವರ ಬೇಡಿಕೆಯಾಗಿತ್ತು.

ಸಂವಾದ ಆಯೋಜನೆ ಬಗ್ಗೆ ಎರಡು ದಿನಗಳ ಹಿಂದೆಯೇ ಸುದ್ದಿಗೋಷ್ಠಿ ನಡೆಸಿ ಸುಳುವು ನೀಡಲಾಗಿತ್ತು. ಭಾನುವಾರ ಬೆಳಗ್ಗೆ ಸಂವಾದಕ್ಕೆ ಒಬ್ಬೊಬ್ಬರಾಗಿ ಆಗಮಿಸುತ್ತಿದ್ದಂತೆ ಅತ್ತ ಐದು ನೂರಕ್ಕೂ ಹೆಚ್ಚು ಮಂದಿ ಮಾದಾರಶ್ರೀ ಬೆಂಬಲಿಗರು ಎಸ್ಪಿ ಕಚೇರಿ ಮುಂಭಾಗ ಜಮಾಯಿಸಿ ಸಂವಾದಕ್ಕೆ ತಡೆ ನೀಡುವಂತೆ ಒತ್ತಾಯಿಸಿದರು. ಮಾದಾರ ಶ್ರೀ ಮೇಲೆ ಅನಾವಶ್ಯವಾಗಿ ಗೂಬೆ ಕೂರಿಸುವ ಕೆಲಸ ಮಾಡಲಾಗುತ್ತಿದೆ. ಸಮುದಾಯದ ಗುರುವಿಗೆ ಕಪ್ಪು ಚುಕ್ಕೆಗೆ ಯತ್ನಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ಕೆಲಹೊತ್ತು ಘೋಷಣೆ ಕೂಗಿದ ಪ್ರತಿಭಟನಾಕಾರರು ನಂತರ ನೇರವಾಗಿ ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲಿರುವ ಪತ್ರಕರ್ತರ ಭವನದ ಕಡೆ ಹೊರಟರು. ಲೋಕೋಪಯೋಗಿ ಕಚೇರಿ ಮುಂಭಾಗವೇ ಪೊಲೀಸರು ಮಾದಾರಶ್ರೀ ಬೆಂಬಲಿಗರ ತಡೆದರು.

ಈ ವೇಳೆ ಪೊಲೀಸರು, ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಪೊಲೀಸರ ತಳ್ಳಿಕೊಂಡೇ ಪತ್ರಕರ್ತರ ಭವನದ ಕಡೆ ಧಾವಿಸಿದ ಪ್ರತಿಭಟನಾಕಾರರ ಜಿಲ್ಲಾಧಿಕಾರಿ ಕಚೇರಿ ಬಳಿ ತಡೆಯಲಾಯಿತು. ಪರಿಸ್ಥಿತಿ ಬಿಗಡಾಯಿಸುವುದ ಅರಿತ ಪೊಲೀಸರು ಸಂವಾದಕ್ಕೆ ಅನುಮತಿ ಪಡೆಯಲಾಗಿಲ್ಲವೆಂಬ ಅಂಶವ ಮುಂದಿಟ್ಟು ಸಂಘಟಕರ ಇಕ್ಕಟ್ಟಿಗೆ ಸಿಲುಕಿಸಿದರು. ಎಎಸ್ಪಿ ಕುಮಾರಸ್ವಾಮಿ, ಡಿವೈಎಸ್ಪಿ ದಿನಕರ್ ಸ್ಥಳದಲ್ಲೇ ಉಪಸ್ಥಿತರಿದ್ದರು. ಈ ವೇಳೆ ಪೊಲೀಸರು , ಸಂವಾದ ಕಾರ್ಯಕ್ರಮ ಆಯೋಜಕರ ನಡುವೆ ವಾಗ್ವಾದ ನಡೆಯಿತು. ಅಂತಿಮವಾಗಿ ಸಂಘಟಕರು ಸಂವಾದ ಮುಂದೂಡುವ ನಿರ್ಣಯ ಕೈಗೊಂಡು ಅಲ್ಲಿಂದ ನಿರ್ಗಮಿಸಿದರು.

Share this article