ಶಿರಸಿ: ದೇವರಲ್ಲಿ ಪೂರ್ತಿಯಾಗಿ ಮನಸ್ಸಿಡುವುದರಿಂದ ಸಮಸ್ಯೆ ಪರಿಹಾರವಾಗಲಿದೆ ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.ಸ್ವರ್ಣವಲ್ಲೀ ಮಠದಲ್ಲಿ ತಮ್ಮ ೩೪ನೇ ಹಾಗೂ ಕಿರಿಯ ಸ್ವಾಮೀಜಿ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿಯ ಪ್ರಥಮ ಚಾತುರ್ಮಾಸ ವ್ರತಾಚರಣೆಯಲ್ಲಿ ಶ್ರದ್ಧೆಯಿಂದ ಸೇವೆ ಸಲ್ಲಿಸಿದ ಭಂಡಾರಿ ಸಮಾಜದವರ ಸಮಸ್ತ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.ಸಂಸಾರಿಗಳಿಗೆ ಅನೇಕ ಸಮಸ್ಯೆಗಳು ಇರುತ್ತವೆ. ಆ ಸಮಸ್ಯೆಗಳ ಮಧ್ಯದಲ್ಲಿ ದೇವರಲ್ಲಿ ಮನಸ್ಸಿಡುವುದು ಬಹಳ ಮುಖ್ಯ. ಸಂಸಾರದ ಸಮಸ್ಯೆಯಲ್ಲಿದ್ದರೂ ದೇವರಲ್ಲಿ ಮನಸ್ಸಿಡುವವನು ಧೀರ ಎಂದು ರಾಮಕೃಷ್ಣ ಪರಮಹಂಸರು ಹೇಳಿದ್ದರು. ಎಲ್ಲೆಲ್ಲೋ ಓಡಾಡುತ್ತಿರುವ ಮನಸ್ಸನ್ನು ದೇವರ ಧ್ಯಾನದಲ್ಲಿ ಪೂರ್ತಿಯಾಗಿ ತೊಡಗುವ ಹಾಗೆ ಮಾಡಬೇಕು. ಸಂಸಾರ ಎನ್ನುವುದು ಒಂದು ಪ್ರವಾಹ ಇದ್ದ ಹಾಗೆ. ನಮ್ಮನ್ನು ತೇಲಿಸಿಕೊಂಡು ಹೋಗುವಂತಹ ಚಿಂತೆಗಳು ನಮ್ಮನ್ನು ಬಾಧಿಸುತ್ತ ಇರುತ್ತವೆ. ನಮ್ಮ ನಿದ್ರೆ, ಕೆಲಸಗಳಿಗೆ ಭಂಗವನ್ನು ಉಂಟುಮಾಡುತ್ತವೆ. ಈ ಪ್ರವಾಹದಲ್ಲಿ ದುರ್ಬಲ ಮನಸ್ಸಿನ ವ್ಯಕ್ತಿಗಳು ಸಿಲುಕಿಕೊಂಡು ಆಚೆ ಬರಲು ಸಾಧ್ಯವಾಗುವುದಿಲ್ಲ. ಯಾರು ಈ ಸಂಸಾರವೆಂಬ ಪ್ರವಾಹವಾದ ಎದುರು ನಿಂತು ಅದನ್ನು ಎದುರಿಸುತ್ತಾರೋ ಅವರು ಧೀರನೆನಿಸುತ್ತಾರೆ. ದೇವರಲ್ಲಿ ಮನಸ್ಸಿಡುವುದರ ಮೂಲಕ ಆ ಪ್ರಹಾವವನ್ನು ದಾಟಬೇಕು. ಅವನು ಎಲ್ಲಾ ಕಾರ್ಯದಲ್ಲೂ ಜಯಿಸುತ್ತಾನೆ ಎಂದರು.ಮನುಷ್ಯನು ತನ್ನ ಸಮಸ್ಯೆಯಿಂದ ಹೊರಗೆ ಬರುವ ಕಲೆ ಅದುವೇ ದೇವರ ಧ್ಯಾನ. ದೇವರಲ್ಲಿ ಪೂರ್ತಿಯಾಗಿ ಮನಸ್ಸಿಡುವುದೇ ಸಮಸ್ಯೆಯಿಂದ ಹೊರಗೆ ಬರುವ ಉಪಾಯ ಎಂದ ಶ್ರೀಗಳು ಸಮಸ್ಯೆಯಿಂದ, ಚಿಂತೆಯಿಂದ ಹೊರಬರಲು ಇನ್ನು ಒಂದು ಸಣ್ಣ ಉಪಾಯ ಇದೆ ಎಂದು ವಿವರಿಸಿ, ಅದುವೇ ತಮಗೆ ಇಷ್ಟವಾದ ಕಲೆಯನ್ನು ಆರಾಧಿಸುವುದು. ಅನೇಕ ವರ್ಷಗಳಿಂದ ಶ್ರೀಮಠಕ್ಕೆ ಸೇವೆ ಸಲ್ಲಿಸುತ್ತಿರುವ ಭಂಡಾರಿ ಸಮಾಜದವರು ಸಂಗೀತ ಕಲಾ ಆರಾಧಕರು. ಭಕ್ತಿಯಿಂದ ದೇವರಿಗೆ ಸೇವೆ ಸಲ್ಲಿಸುತ್ತಿದ್ದೀರಿ. ನೀವು ಈ ಸೇವೆಯಲ್ಲಿ ತೊಡಗಿದಾಗ ಸಹಜವಾಗಿಯೇ ನೀವು ಸಂಸಾರದ ಚಿಂತೆಯಿಂದ ಹೊರಗೆ ಬರುತ್ತಿರಿ. ನಿಮ್ಮ ಮನಸ್ಸು ಸಂಪೂರ್ಣವಾಗಿ ಸೇವೆಯಲ್ಲಿ ತೊಡಗಿರುತ್ತದೆ ಎಂದರು.