ಸಂಸ್ಕೃತ ಭಾಷೆಗೆ ಪ್ರಾಮುಖ್ಯತೆ ನೀಡಿ ಆರಾಧಿಸಿರುವುದು ಸರಿಯಲ್ಲ

KannadaprabhaNewsNetwork | Updated : Jul 29 2024, 12:48 AM IST

ಸಾರಾಂಶ

ಪ್ರಾದೇಶಿಕ ಭಾಷೆಗಳಲ್ಲದೆ ಸಂಸ್ಕೃತಿ ಪೋಷಿಸಿದ ಭಾಷೆಗಳನ್ನು ನಿರ್ಲಕ್ಷಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಸಾವಿರಾರು ವರ್ಷಗಳ ಪರಂಪರೆಯಲ್ಲಿ ಒಂದು ಭಾಷೆಗೆ ಪ್ರಾಮುಖ್ಯತೆ ನೀಡಿ, ಕೇವಲ ಸಂಸ್ಕೃತ ಭಾಷೆಯನ್ನು ಆರಾಧನೆ ಮಾಡಿಕೊಂಡು ಬಂದಿರುವುದು ಸರಿಯಲ್ಲ ಎಂದು ವಿಶ್ರಾಂತ ಕುಲಪತಿ ಪ್ರೊ.ಹೀ.ಚಿ. ಬೋರಲಿಂಗಯ್ಯ ತಿಳಿಸಿದರು.

ನಗರದ ರೋಟರಿ ಕೇಂದ್ರದಲ್ಲಿ ಸಂವಹನ ಪ್ರಕಾಶಕರು ಹಾಗೂ ಕನ್ನಡ ಸಾಹಿತ್ಯ ಕಲಾ ಕೂಟ ಸಂಯುಕ್ತವಾಗಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಎಸ್.ಪಿ. ಪದ್ಮಪ್ರಸಾದ್ ಸಂಪಾದಿಸಿರುವ ಹಂಪನಾ ಲೇಖನ ಸಂಚಯ ಪರಾಮರ್ಶನ ಎಂಬ ಕೃತಿಯನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.

ಪ್ರಾದೇಶಿಕ ಭಾಷೆಗಳಲ್ಲದೆ ಸಂಸ್ಕೃತಿ ಪೋಷಿಸಿದ ಭಾಷೆಗಳನ್ನು ನಿರ್ಲಕ್ಷಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಸಂಸ್ಕೃತಿ ಪೋಷಿಸಿದ ಪ್ರಾಕೃತ ಮತ್ತು ಪಾಳಿ ಭಾಷೆಗಳಿಗೆ ಪ್ರಾಮುಖ್ಯತೆ ನೀಡದೆ, ಸ್ಥಳೀಯವಾಗಿ ನಷ್ಟವುಂಟು ಮಾಡಲಾಗಿದೆ. ಇವು ಪ್ರಾಚೀನ ಭಾರತದ ಜ್ಞಾನ ಹಾಗೂ ದೇಶಿ ಪರಂಪರೆ ಅಡಗಿಸಿಕೊಂಡಿದೆ. ಇದನ್ನು ಯಾರೂ ಕಡೆಗಣಿಸಬಾರದು ಎಂದರು.

ಕನ್ನಡ ಸಾಹಿತ್ಯ ಇಷ್ಟು ಸಮೃದ್ಧ ಹಾಗೂ ಪ್ರಾಚೀನ ಪರಂಪರೆ ಕಟ್ಟಿಕೊಡುವ ಕೆಲಸ ಆಗಿರುವುದು ಜೈನ ಕವಿಗಳಿಂದ. ಇವರು ಸಂಸ್ಕೃತಕ್ಕಿಂತ ಭಿನ್ನವಾಗಿ ಕನ್ನಡ ವಿಚಾರ ಧಾರೆಗಳಿಂದ ಬಂದಿದ್ದಾರೆ. ಇದನ್ನು ಒಪ್ಪಿಕೊಳ್ಳುವ ಕೆಲಸ ಆಗಬೇಕಿದೆ ಎಂದು ಅವರು ಹೇಳಿದರು.

ಪ್ರೊ. ಹಂಪನಾ ಸೃಜನಶೀಲತೆ ಇರುವ ಸಾಹಿತಿ. ಬಹುಮುಖಿ ಸಾಧನೆ ಮಾಡಿದ್ದಾರೆ. ಗಂಭೀರವಾಗಿ ಪರಿಗಣಿಸಿ ಸಂಶೋಧನಾತ್ಮಕವಾಗಿ ಬರವಣಿಗೆ ರಚಿಸಿದ್ದಾರೆ. ಅವರ ‘ಪರಾಮರ್ಶನ’ ಕನ್ನಡ ಸಾಹಿತ್ಯದಲ್ಲಿ ಹೊಸ ರೀತಿಯ ಆಲೋಚನೆಗೆ ದಾರಿ ಮಾಡಿಕೊಡುವ ಕೃತಿಯಾಗಿ ಹೊರಹೊಮ್ಮಿದೆ. ಸತ್ಯದ ದರ್ಶನ ಮಾಡಿಸುವ ಕೆಲಸ ಮಾಡುತ್ತಿದೆ. ಇಂದು ಅವರ ಲೇಖನಗಳ ಮೊರೆ ಹೋಗಬೇಕಾದ ಅವಶ್ಯಕತೆ ಎದುರಾಗಿದೆ ಎಂದರು.

ಕೃತಿಯ ಸಂಪಾದಕ ಡಾ.ಎಸ್.ಪಿ. ಪದ್ಮಪ್ರಸಾದ್ ವಾತನಾಡಿ, ‘ಹಂಪನಾ ಅವರ ಪುಸ್ತಕ ರೂಪದಲ್ಲಲ್ಲದೆ ಸೆಮಿನಾರ್, ವಿದ್ವತ್, ಪ್ರಬಂಧ, ಗೋಷ್ಠಿ, ಉಪನ್ಯಾಸ, ಬೆನ್ನುಡಿ– ಮುನ್ನುಡಿ ಹೀಗೆ ಬರೆದ ಅನೇಕ ಲೇಖನಗಳೆಲ್ಲವೂ ಉಪಯುಕ್ತವಾಗಿದೆ. ಅಧ್ಯಯನ, ಪರಾಮರ್ಶನಕ್ಕೆ ಅಗತ್ಯವಾಗಿ ಬೇಕಾಗಿರುತ್ತದೆ. ಆದರೆ, ಇವೆಲ್ಲ ಚದುರಿ ಹೋಗಿದ್ದು, ಸ್ವತಃ ಲೇಖಕರ ಬಳಿಯೇ ಅವುಗಳ ಪ್ರತಿ ಇರಲಿಲ್ಲ. ಅವುಗಳನ್ನು ಸಂಕಲಿಸುವುದು ಮುಂದಿನ ಪೀಳಿಗೆಯ ದೃಷ್ಟಿಯಿಂದ ಪ್ರಯೋಜನಕಾರಿಯಾಗಿದೆ. ಹೀಗಾಗಿ, ಅವುಗಳನ್ನು ಸಂಕಲಿಸಿ, ವರ್ಗೀಕರಿಸಿ ಪುಸ್ತಕ ರೂಪದಲ್ಲಿ ಹೊರತರಲಾಗಿದೆ ಎಂದರು.

ಬಿಡಿಬಿಡಿಯಾಗಿ ಪ್ರಕಟಗೊಂಡ ಬರಹಗಳನ್ನು ಮಾತ್ರ ಇಲ್ಲಿ ಸಂಕಲಿಸಲಾಗಿದೆ. ಹಂಪನಾ ಅವರ ಎಲ್ಲಾ ಬರಹಗಳು ಪರಾಮರ್ಶನ ಯೋಗ್ಯವಾಗಿದ್ದರಿಂದ ಈ ಸಂಪುಟಗಳಿಗೆ ಪರಾಮರ್ಶನ ಎಂದು ಹೆಸರಿಡಲಾಗಿದೆ. ಇದರಲ್ಲಿ 24 ಲೇಖನಗಳು, 3 ಕವಿತೆಗಳಿವೆ, 2 ಭಾಗಗಳಿದ್ದು, ವ್ಯಕ್ತಿ ಚಿತ್ರಣ ಮತ್ತು ಸಂಕೀರ್ಣಗಳಿವೆ. ಜೈನ ಕಾವ್ಯ, ಪ್ರಾಕೃತ ಮತ್ತು ಕನ್ನಡ ಭಾಷೆಗಳ ಸಂಬಂಧವೂ ವಿವರಿಸಲಾಗಿದೆ ಎಂದು ಅವರು ತಿಳಿಸಿದರು.

ಇದೇ ವೇಳೆ ಪ್ರೊ. ಪ್ರೀತಿ ಶುಭಚಂದ್ರ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಸಾಹಿತ್ಯ ಕಲಾಕೂಟ ಅಧ್ಯಕ್ಷ ಎಂ. ಚಂದ್ರಶೇಖರ್, ಕುವೆಂಪು ಭಾಷಾ ಭಾರತಿ ಅಧ್ಯಕ್ಷ ಚನ್ನಪ್ಪ ಕಟ್ಟಿ, ಸಾಹಿತಿ ಪ್ರೊ. ಹಂಪನಾ, ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ, ಪ್ರಕಾಶಕ ಡಿ.ಎನ್. ಲೋಕಪ್ಪ, ಜೀನಹಳ್ಳಿ ಸಿದ್ದಲಿಂಗಪ್ಪ ಇದ್ದರು.

Share this article