ಕನ್ನಡಪ್ರಭ ವಾರ್ತೆ ಮೈಸೂರು
ವಿದ್ಯಾವರ್ದಕ ಕಾನೂನು ಕಾಲೇಜು ಮಂಗಳವಾರ ಆಯೋಜಿಸಿದ್ದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕಾನೂನೇತರ ಕಾರಣಗಳಿಂದಾಗಿ ವಂಚಿತರಾದ ಈ ದೇಶದ ಜನಕ್ಕೆ ಕಾನೂನಿನಿಂದ ನ್ಯಾಯ ದೊರಕಿಸಿ ಕೊಡುವುದೇ ಕಾನೂನಿನ ಮುಖ್ಯ ಕೆಲಸ. ಕಾನೂನು ಶಿಕ್ಷಣದ ಮುಖ್ಯ ಗುರಿಯೇ ವಂಚಿತರಿಗೆ ಸಾಮಾಜಿಕ ನ್ಯಾಯ ನೀಡುವುದಾಗಿದೆ ಎಂದರು.
ಸಾಮಾಜಿಕ ಅಸಮಾನತೆಗೆ ನಮ್ಮಲ್ಲಿ ನೂರಾರು ಕಾರಣಗಳನ್ನು ಕೊಡಬಹುದು; ಆದರೆ, ಕಾನೂನನ್ನು ಒಂದು ಅಸ್ತ್ರವಾಗಿ, ಒಂದು ಸಾಧನವಾಗಿ ಬಳಸುವ ಮೂಲಕ ಈ ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕಬಹುದಾಗಿದೆ ಎಂದು ಅವರು ಹೇಳಿದರು.ಯಾವುದೇ ಶಿಕ್ಷಣವಾಗಲಿ ಪೇ ಬ್ಯಾಕ್ ಟು ಸೊಸೈಟಿ ಎನ್ನುವ ತತ್ವದ ಮೇಲೆಯೇ ವಿದ್ಯಾರ್ಥಿಗಳನ್ನು ರೂಪಿಸಬೇಕು. ಕಾನೂನು ಶಿಕ್ಷಣವಂತೂ ಬರಿಯ ಹಣ ಮಾಡುವುದಕ್ಕೆ, ಅಧಿಕಾರಶಾಹಿ ಗದ್ದುಗೆ ಏರುವುದಕ್ಕೆ ಮಾತ್ರ ಸೀಮಿತ ಆಗಬಾರದು. ಕಾನೂನು ಶಿಕ್ಷಣ ಬೇರೆ, ಕಾನೂನು ಅರಿವು ಬೇರೆ ಎನ್ನುವುದನ್ನು ನಾವು ಇನ್ನಾದರೂ ಮನಗಾಣಬೇಕಿದೆ. ಕಾನೂನು ಶಿಕ್ಷಣ ಪಡೆದವರೆಲ್ಲ ಕಾನೂನಿನ ಅರಿವು ವಿವೇಚನೆ ಪಡೆದಿರುತ್ತಾರೆ ಎನ್ನುವುದು ತಪ್ಪು ಎಂದು ಅವರು ಕಿವಿಮಾತು ಹೇಳಿದರು.
ಇದೇ ವೇಳೆ ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆಯಾದ ಮೂರು ಮತ್ತು ಐದು ವರ್ಷಗಳ ಕಾನೂನು ಪದವಿಗಳ 21 ವಿದ್ಯಾರ್ಥಿಗಳಿಗೆ ಸನ್ಮಾನಿಸಿ ವಿದ್ಯಾರ್ಥಿವೇತನ ನೀಡಲಾಯಿತು. 5 ವರ್ಷಗಳ ಕಾನೂನು ವ್ಯಾಸಂಗದಲ್ಲಿ ತೋರಿದ ಬಹುಮುಖ ಪ್ರತಿಭೆಯ ಆಧಾರದ ಮೇಲೆ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿ ಸಿ. ಸುಮಂತ್ ಅವರಿಗೆ ವಿದ್ಯಾವರ್ಧಕ ಕಾನೂನು ಕಾಲೇಜಿನ ಶ್ರೇಷ್ಠ ವಿದ್ಯಾರ್ಥಿ ಎಂದು ಗುರುತಿಸಿ ಸನ್ಮಾನಿಸಲಾಯಿತು.