ಯುವ ಜನಾಂಗದ ಸಮರ್ಪಕ ಬಳಕೆಯಿಂದ ಸದೃಢ ಭಾರತ ನಿರ್ಮಾಣ

KannadaprabhaNewsNetwork |  
Published : Sep 12, 2024, 01:53 AM IST
43 | Kannada Prabha

ಸಾರಾಂಶ

ಪ್ರಪಂಚದ 4ನೇ ದೊಡ್ಡ ಆರ್ಥಿಕತೆಯಾಗಿ ಭಾರತ ಇಂದು ಹೊರಹೊಮ್ಮಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಯುವ ಜನಾಂಗದ ಸಮರ್ಪಕ ಬಳಕೆಯಿಂದ ಸದೃಢ ಭಾರತ ನಿರ್ಮಾಣ ಸಾಧ್ಯ ಎಂದು ಮೈಸೂರು ವಿವಿ ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಡಾ. ನವಿತಾ ತಿಮ್ಮಯ್ಯ ತಿಳಿಸಿದರು.ನಗರದ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ವತಿಯಿಂದ ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ಪ್ರಪಂಚದ 4ನೇ ದೊಡ್ಡ ಆರ್ಥಿಕತೆಯಾಗಿ ಭಾರತ ಇಂದು ಹೊರಹೊಮ್ಮಿದೆ ಮತ್ತು ಅದರ ಒಟ್ಟು ದೇಶೀಯ ಉತ್ಪನ್ನ 3.41 ಟ್ರಿಲಿಯನ್ ಆಗಿದ್ದು, ಭಾರತದ ಆರ್ಥಿಕ ಬೆಳವಣಿಗೆಗೆ ಇದು ದೊಡ್ಡ ಲಾಭಾಂಶವಾಗಿದೆ ಎಂದರು.ಪ್ರಸ್ತುತ ಭಾರತದಲ್ಲಿ ಯುವ ಪೀಳಿಗೆ ಎದುರಿಸುತ್ತಿರುವ ನಿರುದ್ಯೋಗದ ಸನ್ನಿವೇಶವನ್ನು ತಗ್ಗಿಸಲು ಸೂಕ್ತವಾದ ಶಿಕ್ಷಣ, ತರಬೇತಿ ಮತ್ತು ಸಂಶೋಧನ ಅವಕಾಶಗಳನ್ನು ವಿಸ್ತರಿಸಲು ಹೆಚ್ಚು ಒತ್ತು ಕೊಡಬೇಕು. ಬೆಳೆಯುತ್ತಿರುವ ಜನಸಂಖ್ಯೆಯೊಂದಿಗೆ ಭಾರತ ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು, ಕೃಷಿ ಉತ್ಪಾದನೆ, ಕೈಗಾರಿಕೆ ಅಭಿವೃದ್ಧಿಯನ್ನು ಸೇನಾ ಕ್ಷೇತ್ರದ ಜೊತೆಯಲ್ಲಿ ಬಲಪಡಿಸಬೇಕು. ಹಾಗೆ ಬಡತನ ಮತ್ತು ನಿರುದ್ಯೋಗಗಳನ್ನು ತಗ್ಗಿಸಲು ಎಂಎಸ್ಎಂಇ ಕ್ಷೇತ್ರಗಳನ್ನು ವಿಸ್ತರಿಸಬೇಕು ಮತ್ತು ಅದರ ಪ್ರಯೋಜನಗಳನ್ನು ಯುವ ಜನಾಂಗಕ್ಕೆ ತಲುಪಿಸುವಂತಾಗಬೇಕು ಎಂದು ಅವರು ಹೇಳಿದರು.ಬಲಿಷ್ಠ ಜೀವನ ಮಟ್ಟ, ಆರೋಗ್ಯ, ಶಿಕ್ಷಣ, ತರಬೇತಿ, ಡಿಜಿಟಲ್ ಸರಕು ಸೇವೆಗಳ ವ್ಯಾಪಾರದ ವಿಸ್ತರಣೆ ಇವೆಲ್ಲವೂ ಭಾರತದ ಆರ್ಥಿಕತೆಯ ಸಾಧನಗಳಾಗಬೇಕು. ವಿಶ್ವದಲ್ಲಿ 4ನೇ ದೊಡ್ಡ ಆರ್ಥಿಕತೆಯಾಗಿ ಭಾರತ ಇಂದು ಹೊರಹೊಮ್ಮಿದ್ದು, ಸ್ವದೇಶಿ ಉತ್ಪನ್ನದ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಬಡತನ, ನಿರುದ್ಯೋಗ ಮತ್ತು ಅಸಮಾನತೆಯ ಪ್ರಮಾಣಗಳನ್ನು ತಗ್ಗಿಸುವಲ್ಲಿ ಭಾರತದ ಆರ್ಥಿಕತೆ ದಾಪುಗಾಲು ಇಡುತ್ತಿದೆ ಎಂದರು.ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ಎಂ.ಎನ್. ವೆಂಕಟಲಕ್ಷ್ಮಿ, ಸಹಾಯಕ ಪ್ರಾಧ್ಯಾಪಕರಾದ ಡಾ.ಪಿ.ಜಿ. ಪುಷ್ಪರಾಣಿ, ಎಸ್.ಎಂ. ಚಲುವೇಗೌಡ ಇದ್ದರು. ಆರ್. ಸಿದ್ದಪ್ಪ ಸ್ವಾಗತಿಸಿದರು. ಕೀರ್ತನಾ ವಂದಿಸಿದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌