ಉಪ ಕಸುಬುಗಳತ್ತ ಮುಖ ಮಾಡುತ್ತಿರುವ ರೈತರು: ಮತ್ಸ್ಯ ಕೃಷಿ ಉಪಕಸುಬಿನಿಂದ ಲಾಭ ಭರಪೂರ

KannadaprabhaNewsNetwork |  
Published : Dec 07, 2024, 12:33 AM ISTUpdated : Dec 07, 2024, 11:55 AM IST
ಬರದ ನಾಡಲ್ಲಿ ಭರಪುರ ಮೀನುಕೃಷಿ | Kannada Prabha

ಸಾರಾಂಶ

 ಬರದ ನಾಡು ಎನಿಸಿಕೊಂಡಿರುವ ವಿಜಯಪುರ ಜಿಲ್ಲೆಯಲ್ಲಿ ಮುಖ್ಯಕೃಷಿಯನ್ನು ನಂಬಿಕೊಂಡ ರೈತರು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ, ಅನೇಕ ರೈತರು ಉಪ ಕಸುಬುಗಳತ್ತ ಮುಖ ಮಾಡುತ್ತಿದ್ದಾರೆ.  

ಶಶಿಕಾಂತ ಮೆಂಡೆಗಾರ

 ವಿಜಯಪುರ : ಬರದ ನಾಡು ಎನಿಸಿಕೊಂಡಿರುವ ವಿಜಯಪುರ ಜಿಲ್ಲೆಯಲ್ಲಿ ಮುಖ್ಯಕೃಷಿಯನ್ನು ನಂಬಿಕೊಂಡ ರೈತರು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ, ಅನೇಕ ರೈತರು ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ, ಹೈನುಗಾರಿಕೆ, ಮೀನು ಸಾಕಾಣಿಯಂತಹ ಉಪ ಕಸುಬುಗಳತ್ತ ಮುಖ ಮಾಡುತ್ತಿದ್ದಾರೆ. ಅದರಂತೆ ಜಿಲ್ಲಾದ್ಯಂತ ಮತ್ಸ್ಯಕೃಷಿ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಮೀನು ಸಾಕಾಣಿಕೆದಾರರು ಈ ಬಾರಿ ಭರಪೂರ ಲಾಭ ಮಾಡಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಹೆಚ್ಚಾದ ಉಪಕಸಬು

ಮೂಲ ಕೃಷಿಯನ್ನು ನಂಬಿಕೊಂಡವರು ಕಷ್ಟದಲ್ಲಿದ್ದಾರೆ. ಉದ್ಯೋಗಕ್ಕಾಗಿ ಕಾಯುತ್ತಿರುವವರು ನಿರುದ್ಯೋಗಿಗಳಾಗಿದ್ದಾರೆ. ಇಂತಹ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಮೀನುಗಾರಿಕೆ ಇಲಾಖೆ ಸಾಕಷ್ಟು ಯೋಜನೆಗಳನ್ನು ರೂಪಿಸಿ, ಅನುಷ್ಠಾನಕ್ಕೆ ತಂದಿದೆ. ಇದರ ಪರಿಣಾಮ ಜಿಲ್ಲೆಯಲ್ಲಿನ 7,219 ಹೆಕ್ಟೇರ್ ಜಲ ವಿಸ್ತೀರ್ಣವುಳ್ಳ 160 ದೊಡ್ಡ ಕೆರೆಗಳು, 81 ಗ್ರಾಮ ಪಂಚಾಯತಿ ಕೆರೆಗಳು ಹಾಗೂ ಹಲವು ಸಣ್ಣ ಹೊಂಡಗಳು, 142 ಕಿ.ಮೀ ಉದ್ದದ ವ್ಯಾಪ್ತಿಯಲ್ಲಿ ಕೃಷ್ಣ, ಭೀಮಾ ಮತ್ತು ಡೋಣಿ ನದಿಗಳಲ್ಲಿ ಮೀನುಕೃಷಿ ಮಾಡಲಾಗುತ್ತಿದೆ. ಮುಖ್ಯವಾಗಿ ಆಲಮಟ್ಟಿ ಹಾಗೂ ಬಸವಸಾಗರ ಜಲಾಶಯಗಳು ಜಿಲ್ಲೆಯ ಮೀನುಗಾರಿಕೆ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ್ದರಿಂದ 2023-24ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 33,83,500 ಮೆ.ಟನ್ ಮೀನು ಉತ್ಪಾದನೆಯಾಗಿದೆ.

ಈಗಾಗಲೇ ಜಿಲ್ಲೆಯಲ್ಲಿ 24 ಮೀನುಗಾರಿಕೆ ಸಹಕಾರ ಸಂಘಗಳು ಕಾರ್ಯನಿರತವಾಗಿದ್ದು, 6,358 ಮೀನುಗಾರರು ತಮ್ಮ ವೃತ್ತಿಯ ಮೇಲೆ ಅವಲಂಬಿತರಾಗಿದ್ದಾರೆ. ಪ್ರತಿ ವರ್ಷ ಶೇ.10 ರಷ್ಟು ಮೀನು ಉತ್ಪಾದನೆ ಹೆಚ್ಚಳದ ಗುರಿ ಇದ್ದು, ಕಳೆದ ವರ್ಷ ಜಿಲ್ಲೆಯ ಆಲಮಟ್ಟಿ ಬಸವಸಾಗರ ಜಲಾಶಯಗಳು ತುಂಬಿದ ಕಾರಣ ಮೀನು ಉತ್ಪಾದನೆ ಗಣನೀಯವಾಗಿ ಏರಿಕೆಯಾಗಿದೆ.

ಸಾಲ ಸೌಲಭ್ಯ ಸಲೀಸು

ಜಿಲ್ಲೆಯಲ್ಲಿ ಕಿಸಾನ್ ಕ್ರೆಡಿಟ್‌ ಕಾರ್ಡ್‌ನಡಿ 61 ಮೀನುಗಾರರಿಗೆ, ಮಹಿಳಾ ಮೀನುಗಾರರಿಗೆ, ಮೀನು ಕೃಷಿಕರಿಗೆ ಬ್ಯಾಂಕುಗಳ ಮೂಲಕ ಸಾಲ ವಿತರಿಸಲಾಗಿದೆ. ವಿವಿಧ ಯೋಜನೆಗಳಲ್ಲಿ ಒಳನಾಡು ಮೀನುಗಾರರಿಗೆ ಜಿಲ್ಲೆಯ 245 ಜನ ಫಲಾನುಭವಿಗಳಿಗೆ ಸಲಕರಣೆ ಕಿಟ್ ವಿತರಿಸಲಾಗಿದೆ. 71 ವೃತ್ತಿಪರ ಮೀನುಗಾರರಿಗೆ ಸೈಕಲ್, ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ನಾಲ್ಕು ಚಕ್ರ ವಾಹನ ಖರೀದಿಗೆ ಸಹಾಯಧನ ವಿತರಿಸಲಾಗಿದೆ. ಜಿಲ್ಲಾ ಪಂಚಾಯತಿಯ ಒಳನಾಡು ಮೀನುಗಾರಿಕೆ ಅಭಿವೃದ್ಧಿ 264 ಜನ ವೃತ್ತಿಪರ ಮೀನುಗಾರರಿಗೆ ಸಹಾಯಧನ ವಿತರಿಸಲಾಗಿದೆ. 1,700 ಜನ ರೈತರಿಗೆ ತಲಾ ₹ 500 ರಂತೆ ಮೀನುಮರಿ ವಿತರಿಸಲಾಗಿದೆ.

ಅನುಷ್ಠಾನಗೊಂಡ ಯೋಜನೆಗಳು

ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ಸಹಾಯ, ಮೀನು ಮಾರುಕಟ್ಟೆಗಳ ನಿರ್ಮಾಣ ಮತ್ತು ಮೀನು ಮಾರಾಟಕ್ಕೆ ಸಹಾಯ, ವಸ್ತು ಪ್ರದರ್ಶನ ಮತ್ತು ತರಬೇತಿ, ಮೀನುಗಾರಿಕೆ ಮೀನು ಹಿಡಿಯುವ ಸಲಕರಣೆಗಳ ಕಿಟ್ ಪೂರೈಸುವದು. ಮೀನು ಮರಿಗಳ ಖರೀದಿಗಾಗಿ ಶೇ.50ರಷ್ಟು ಸಹಾಯಧನ, ಮತ್ಸ್ಯಾಶ್ರಯ ಯೋಜನೆಗಳಲ್ಲಿ ಸಹಾಯ ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿ ಮೀನುಗಾರಿಕೆ ಇಲಾಖೆಯ ವ್ಯಾಪ್ತಿಯ ಕೆರೆಗಳಿಗೆ ಮೀಸಲಾತಿ ಬಗ್ಗೆ ಸಭೆ ಜರುಗಿಸಿದ್ದು, ಕೂಡಲೇ ಸರ್ಕಾರದ ನಿಯಮಗಳಂತೆ ಕೆರೆಗಳನ್ನು ವಿಲೇವಾರಿ ಮಾಡಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗಿದ್ದು, ಹೆಚ್ಚಿನ ಮೀನು ಉತ್ಪಾದನೆಗೆ ಒಳ್ಳೆಯ ಅವಕಾಶ ಇದೆ. ಈ ಮೂಲಕ ಮೀನುಗಾರಿಕೆ ವಲಯದಿಂದ ಉದ್ಯೋಗ, ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆ ಒದಗಿಸುವ ಕೆಲಸ ಆಗಲಿದೆ.

ರಿಷಿ ಆನಂದ, ಜಿಲ್ಲಾ ಪಂಚಾಯತಿ ಸಿಇಒ

ಈ ವರ್ಷ ಮಳೆ ಉತ್ತಮವಾಗಿದ್ದು, ನಿಗದಿತ ಸಮಯದಲ್ಲಿ ಮೀನು ಕೃಷಿಕರಿಗೆ ಮೀನುಗಳನ್ನು ಕೆರೆಗಳಲ್ಲಿ ದಾಸ್ತಾನು ಮಾಡಿಲಾಗಿದೆ. ಮೀನಿನ ಉತ್ಪಾದನೆ ಹೆಚ್ಚಾಗುವ ನಿರೀಕ್ಷೆಗಳಿವೆ. ಇಲಾಖೆಯು ಮೀನುಗಾರರ ಅಭಿವೃದ್ಧಿಗಾಗಿ ಮಹತ್ವದ ಪಾತ್ರವಹಿಸುತ್ತಿದೆ. ಮೀನುಶಿಕಾರಿ ಹೆಚ್ಚಿಸಿಕೊಳ್ಳಲು ಅನುಕೂಲ ಕಲ್ಪಿಸಲಾಗುತ್ತಿದ್ದು, ಹಿಡುವಳಿ ಮಾಡಿದ ಮೀನಿಗೆ ಯೋಗ್ಯ ಬೆಲೆ ದೊರಕಿಸಲು ಒಂದು ಮೀನು ಉತ್ಪಾದಕರ ಸಂಸ್ಥೆ ಸ್ಥಾಪಿಸಿಲಾಗಿದೆ. ಶೀಘ್ರದಲ್ಲಿ ಅದು ಕಾರ್ಯಗತವಾಗಲಿದೆ.

ಎಂ.ಎಚ್.ಬಾಂಗಿ, ಮೀನುಗಾರಿಕೆ ಇಲಾಖೆ ಉಪನಿರ್ದೇಶಕರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...