- ದೇವರಿಗೆ ಗಡಗಡ ನಡುಗಬಾರದು: ಪ್ರಗತಿಪರ ಚಿಂತಕ ಪ್ರೊ.ನಾಗವಾರ
---------
ಕನ್ನಡಪ್ರಭ ವಾರ್ತೆ ಮೈಸೂರುಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಸವಣ್ಣನ ಕಾಲದ ಅನುಭವ ಮಂಟಪದಂತೆ ಚರ್ಚೆ ಇರಬೇಕೆ ಹೊರತು ದೇವರಿಗೆ ಗಡಗಡ ನಡುಗುವ ಸ್ಥಿತಿ ನಿರ್ಮಾಣವಾಗಬಾರದು ಎಂದು ಪ್ರಗತಿಪರ ಚಿಂತಕ ಪ್ರೊ. ಕಾಳೇಗೌಡ ನಾಗವಾರ ಮಾರ್ಮಿಕವಾಗಿ ಹೇಳಿದರು.
ಕರ್ನಾಟಕದ ನೆಲ ಅತ್ಯಂತ ಸೂಕ್ಷ್ಮವಾದುದು. ಕರ್ನಾಟಕದಲ್ಲಿ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಎಲ್ಲಾ ಬಂದು ಹೋಗಿದ್ದಾರೆ. ಪಂಪ ಮನುಷ್ಯ ಜಾತಿ ತಾನೊಂದೆ ವಲಂ ಎಂಬ ಸಂದೇಶ ನೀಡಿದ್ದಾನೆ. ಕುವೆಂಪು ವಿಶ್ವಮಾನವ ಸಂದೇಶ ನೀಡಿದ್ದಾರೆ. ಇದನ್ನೆಲ್ಲಾ ತಿಳಿದು ಸಮಾಜವಾದಿ ರಾಮಮನೋಹರ ಲೋಹಿಯಾ ಅವರು ತುಂಬಾ ಮೆಚ್ಚಿಕೊಂಡಿದ್ದರು ಎಂದು ಅವರು ಹೇಳಿದರು.
ಗಾಂಧಿ ಮತ್ತು ಅಂಬೇಡ್ಕರ್ ವಿಚಾರಧಾರೆಗಳನ್ನು ತುಲನಾತ್ಮಕವಾಗಿ ನೋಡಬೇಕು.ಪೆರಿಯಾರ್ ಕೂಡ ದೊಡ್ಡ ವ್ಯಕ್ತಿ. ಅಂಬೇಡ್ಕರ್ ಮತ್ತು ಲೋಹಿಯಾ ಅವರನ್ನು ಓದಿಕೊಂಡರೆ ವಿಶ್ವದ ಸಕಲ ಜ್ಞಾನವನ್ನೂ ಓದಿಕೊಂಡಂತೆ ಎಂದು ಅವರು ಹೇಳಿದರು.
ಕೃತಿಗಳನ್ನು ಬಿಡುಗಡೆ ಮಾಡಿದ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಕುಲಪತಿ ಪ್ರೊ.ನಾಗೇಶ್ ವಿ. ಬೆಟ್ಟಕೋಟೆ ಮಾತನಾಡಿ, ಶೈಕ್ಷಣಿಕವಾಗಿ ಪ್ರಬುದ್ಧವಾಗಿರುವ ಡಾ. ಅಮ್ಮಸಂದ್ರ ಸುರೇಶ್ ಅವರಿಗೂ ಜ್ಞಾನದಾಹ ಇನ್ನೂ ತೀರಿಲ್ಲ. ಸಂಗೀತ ವಿವಿಯಲ್ಲಿ ಡಿ.ಲಿಟ್‌ಗೆ ನೋಂದಾಯಿಸಿಕೊಂಡಿದ್ದಾರೆ. ಇನ್ನೂ ಹಲವಾರು ಕೃತಿಗಳ ರಚನೆಯಲ್ಲಿ ನಿರತರಾಗಿದ್ದಾರೆ ಎಂದರು.
ಸಂಗೀತ ವಿವಿಯು ಸುಗಮ ಸಂಗೀತ ಮತ್ತು ಭಾವಗೀತೆಗಳ ಕಲಿಕೆಗೆ ಸಂಬಂಧಿಸಿದಂತೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು, ಶರಣರ ವಿಚಾರಧಾರೆ ಕುರಿತು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜೊತೆ ಒಡಂಬಡಿಕೆ ಮಾಡಿಕೊಳ್ಳುತ್ತಿದೆ ಎಂದು ಅವರು ಹೇಳಿದರು.
ಎಲ್ಲಕ್ಕಿಂತ ಮಾನವೀಯತೆ ಮುಖ್ಯ. ಸಮಸಮಾಜ ಎಂದರೇ ಎಲ್ಲರನ್ನು ಸಮಾನಾಗಿ ಕಾಣುವುದು ಎಂಬುದನ್ನು ಲೇಖಕರು ಅತ್ಯಂತ ಸರಳವಾಗಿ ತಿಳಿಯಪಡಿಸಿದ್ದಾರೆ ಎಂದರು.
ಗಾಂಧಿ ಪುರಾಣ ಹೇಳಿದರೆ ಅಂಬೇಡ್ಕರ್ ವಾಸ್ತವ ಹೇಳುತ್ತಿದ್ದರು. ಇವರಿಬ್ಬಂರ ಬೌದ್ಧಿಕ ಸಂಘರ್ಷವೇ ಅವರವರು ಆರಂಭಿಸಿದ ಪತ್ರಿಕೆಗಳ ಜೀವಾಳವಾಗಿತ್ತು. ಬಸವಣ್ಣನವರ ಕಾಲದಲ್ಲಿ ಕ್ರಾಂತಿ ಯಾಕಾಯಿತು? ಅಂತ್ಯ ಹೇಗಾಯಿತು? ಎಂಬುದನ್ನು ಗಮನಿಸಿದರೆ ಪ್ರಸ್ತುತ ನಡೆಯುತ್ತಿರುವ ಇಕ್ಕುಟ್ಟು- ಬಿಕ್ಕಟ್ಟಿನ ವಿದ್ಯಮಾನಗಳು ಗೊತ್ತಾಗುತ್ತದೆ ಎಂದರು.
ಸಂಶೋಧನಾತ್ಮಕ ಸಾಹಿತ್ಯ, ಜನಮುಖಿ ಚಿಂತನೆಗಳು ಬರಬೇಕು. ಆಗ ಮಾತ್ರ ಸಮಸಮಾಜದ ಆಶಯ ಈಡೇರುತ್ತದೆ ಎಂದು ಅವರು ಹೇಳಿದರು.ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕಸಾಪ ನಗರಾಧ್ಯಕ್ಷ ಕೆ.ಎಸ್. ಶಿವರಾಂ, ಪ್ರಕಾಶಾಕ ಮಾಹಿಮಾ ಶ್ರೀನಿವಾಸ್ ಮುಖ್ಯಅತಿಥಿಗಳಾಗಿದ್ದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಪುರುಷೋತ್ತಮ ಸ್ವಾಗತಿಸಿದರು. ಸಾಲುಂಡಿ ದೊರೆಸ್ವಾಮಿ ನಿರೂಪಿಸಿ, ವಂದಿಸಿದರು. ಹನುಮಂತಯ್ಯ ಪ್ರಾರ್ಥಿಸಿದರು. ಮೈಸೂರು ಅಂಚೆ ವಿಭಾಗದ ಹಿರಿಯ ಅಧೀಕ್ಷಕಿ ಡಾ.ಏಂಜಲ್ ರಾಜ್ ಅವರ ಸಂದೇಶವನ್ನು ವಿಜಯಲಕ್ಷ್ಮಿ ಓದಿದರು.ಜಿಲ್ಲಾ ಕಸಾಪ ಮಾಜಿ ಅದ್ಯಕ್ಷ ಡಾ.ವೈ.ಡಿ. ರಾಜಣ್ಣ, ಪ್ರಧಾನ ಕಾರ್ಯದರ್ಶಿ ಚೀಲೂರು ಚಂದ್ರಶೇಖರ, ಕೋಶಾಧ್ಯಕ್ಷ ಜಿ. ಪ್ರಕಾಶ್, ಸಂಘಟನಾ ಕಾರ್ಯದರ್ಶಿ ಮೈನಾ ಲೋಕೇಶ್, ಪ್ರೊ.ಎನ್. ಮಮತಾ, ಪ್ರೊ.ಜಿ. ಚಂದ್ರಶೇಖರ್, ಅಖಿಲ ಕರ್ನಾಟಕ ಒಕ್ಕಲಿಗರ ಸಂಘಟನೆಯ ಅಧ್ಯಕ್ಷ ಎನ್. ಬೆಟ್ಟೇಗೌಡ, ಡಾ.ಕೃಷ್ಣಮೂರ್ತಿ, ನಾ. ಗಂಗಾಧರಪ್ಪ, ರಾಜಶೇಖರ್. ನಟರಾಜ್, ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ಎಚ್.ಎಸ್. ಪ್ರಕಾಶ್, ಉಪ್ಪಾರ ಸಂಘದ ಅಧ್ಯಕ್ಷ ಯೋಗೀಶ್, ವಿಶ್ವಕರ್ಮ ಸಂಘದ ಅಧ್ಯಕ್ಷ ಮೊಗಣ್ಣಾಚಾರ್, ಇ,ಧನಂಜಯ ಎಲಿಯೂರು. ಆರ್. ಲಕ್ಷ್ಮಣ್, ಡಾ.ಶ್ರೀನಿವಾಸ್ ಮೊದಲಾದವರು ಪಾಲ್ಗೊಂಡಿದ್ದರು.