ಕನ್ನಡಪ್ರಭ ವಾರ್ತೆ ಬೆಂಗಳೂರು
ದೀರ್ಘಾವಧಿಗೆ ಬಿಬಿಎಂಪಿ ಆಸ್ತಿಯನ್ನು ಗುತ್ತಿಗೆ ನೀಡುತ್ತಿದ್ದರಿಂದ ಉಂಟಾಗುತ್ತಿದ್ದ ‘ಆದಾಯ ಖೋತಾ’ ತಡೆಗಟ್ಟಲು ಮುಂದಾಗಿರುವ ರಾಜ್ಯ ಸರ್ಕಾರ, ಬಿಬಿಎಂಪಿ ಆಸ್ತಿ ಮಾರಾಟ, ಗುತ್ತಿಗೆಗೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಆಸ್ತಿ ನಿರ್ವಹಣೆ) ನಿಯಮ 2024 ಕರಡು ಪ್ರಕಟಿಸಿದ್ದು ಆಕ್ಷೇಪಣೆಗಳನ್ನು ಆಹ್ವಾನಿಸಿದೆ.ಕರಡನ್ನು ಶನಿವಾರ ಪ್ರಕಟಿಸಿದ್ದು, ಆಕ್ಷೇಪಣೆಗಳನ್ನು 30 ದಿನದೊಳಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಬೇಕಿದೆ. ಅಧಿಕೃತವಾಗಿ ಪ್ರಕಟಿಸಿದ ಬಳಿಕ ಈ ಹೊಸ ನಿಯಮಗಳು ಬಿಬಿಎಂಪಿ ಕಾಯ್ದೆ 2020ರ 9ನೇ ಅಧ್ಯಾಯದಲ್ಲಿ ಅನ್ವಯವಾಗಲಿವೆ ಎಂದು ತಿಳಿಸಲಾಗಿದೆ.
ಬಿಬಿಎಂಪಿ ಆಸ್ತಿ ನಿರ್ವಹಣಾ ವಿಭಾಗವು ಈ ನಿಯಮಗಳನ್ನು ಜಾರಿಗೊಳಿಸಬೇಕಿದ್ದು, ಮುಖ್ಯ ಆಯುಕ್ತರು ಮೇಲ್ವಿಚಾರಣೆ ವಹಿಸಿಕೊಳ್ಳಬೇಕಿದೆ. ವಲಯ ಮಟ್ಟದಲ್ಲಿ ವಲಯ ಆಯುಕ್ತರು ನಿಯಮಗಳನ್ನು ಜಾರಿಗೊಳಿಸುವ ಹೊಣೆಗಾರಿಕೆ ಹೊಂದಿದ್ದಾರೆ.ಮಾರ್ಗಸೂಚಿ ದರಕ್ಕೆ ಮಾರಾಟಬಿಬಿಎಂಪಿ ಮುಖ್ಯ ಆಯುಕ್ತರು ಆಸ್ತಿ ವಿಭಾಗದ ಮೂಲಕ ಪಾಲಿಕೆಯ ಸ್ಥಿರಾಸ್ತಿಗಳ ಉಸ್ತುವಾರಿ ನೋಡಿಕೊಳ್ಳಬೇಕು. ರಾಜ್ಯ ಅಥವಾ ಕೇದ್ರ ಸರ್ಕಾರ ಹೊರತುಪಡಿಸಿ ಪಾಲಿಕೆಯ ಸ್ಥಿರಾಸ್ತಿಯನ್ನು ಮಾರಾಟ ಮಾಡಲು ಬೇರೆ ಯಾರಿಗೂ ಅವಕಾಶವಿಲ್ಲ. ಕಂದಾಯ ಇಲಾಖೆಯು ಕಾಲಕಾಲಕ್ಕೆ ತಕ್ಕಂತೆ ನಿಗಧಿಪಡಿಸಿದ ಮಾರ್ಗಸೂಚಿ ದರಕ್ಕೆ ಅನುಗುಣವಾಗಿ ಮಾತ್ರ ಸ್ಥಿರಾಸ್ತಿ ಮಾರಾಟವಾಗಬೇಕು. ಆದಾಗ್ಯೂ ರಾಜ್ಯ ಸರ್ಕಾರವು ರಿಯಾಯಿತಿ ಅಥವಾ ವಿನಾಯಿತಿ ನೀಡುವ ಹಕ್ಕನ್ನು ಕಾಯ್ದಿರಿಸಿಕೊಂಡಿದೆ.
ಸ್ಥಿರಾಸ್ತಿಗಳನ್ನು ಗುತ್ತಿಗೆ ನೀಡುವಾಗಲೂ ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕು. ಸ್ಥಾಯಿ ಸಮಿತಿಯ ಅನುಮತಿಯೊಂದಿಗೆ ಮುಖ್ಯ ಆಯುಕ್ತರು ಪಾಲಿಕೆಯ ಸ್ಥಿರಾಸ್ತಿಗಳನ್ನು 5 ವರ್ಷದವರೆಗೂ ಗುತ್ತಿಗೆ ನೀಡಬಹುದು. 15 ವರ್ಷದವರೆಗೂ ಗುತ್ತಿಗೆ ನೀಡಬೇಕೆಂದರೆ ಕೌನ್ಸಿಲ್ ಅನುಮತಿ ಪಡೆಯಬೇಕು. 15 ವರ್ಷದ ಮೇಲ್ಪಟ್ಟು 30 ವರ್ಷದವರೆಗೂ ಗುತ್ತಿಗೆ ನೀಡಬೇಕೆಂದರೆ ಸರ್ಕಾರದ ಅನುಮತಿ ಪಡೆಯಬೇಕಿದೆ. 30 ವರ್ಷಕ್ಕೂ ಮೇಲ್ಪಟ್ಟು ಗುತ್ತಿಗೆ ನೀಡುವಂತಿಲ್ಲ. ನೀಡುವ ಸಂದರ್ಭ ಉಂಟಾದರೆ ಹೊಸದಾಗಿ ಗುತ್ತಿಗೆ ನೀಡಬೇಕು.ಗುತ್ತಿಗೆ ನೀಡುವಾಗ ಸಾರ್ವಜನಿಕ ಹರಾಜು ಅನುಸರಿಸಬೇಕು. ಬಿಬಿಎಂಪಿಗೆ ಆಸ್ತಿಯ ಅವಶ್ಯತೆ ಇದ್ದರೆ ಗುತ್ತಿಗೆ ಅವಧಿಯನ್ನು ನವೀಕರಣ ಮಾಡದೆ ಸ್ವಂತ ಬಳಕೆಗೆ ಮೀಸಲಿಟ್ಟುಕೊಳ್ಳಬಹುದು. ಪರಿಶಿಷ್ಟ ಜಾರಿ ಮತ್ತು ಪಂಗಡದವರಿಗೆ ನಿಯಮಗಳಂತೆ ಮೀಸಲು ನೀಡಬೇಕು ಎಂಬುದ ಸೇರಿದಂತೆ ಹಲವು ನಿಯಮಗಳಿವೆ.