ಕನ್ನಡಪ್ರಭ ವಾರ್ತೆ ವಿಜಯಪುರ
ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ರೈತರು ಪ್ರತಿಭಟನೆಗೆ ಮುಂದಾಗಿದ್ದರು. ಆದರೆ, ನಾನು ಸಿಎಂ ಜೊತೆಗೆ ಮಾತನಾಡಿದ್ದೇನೆ. ರೈತರ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದ ಮೇಲೆ ರೈತರು ತಮ್ಮ ಹೋರಾಟವನ್ನು ಕೈಬಿಟ್ಟಿದ್ದಾರೆ. ಕಬ್ಬಿಗೆ ಎಫ್‌ಆರ್‌ಪಿ ಬೆಲೆ ನಿಗದಿ, ತೂಕದಲ್ಲಿ ಮೋಸ, ತೊಗರಿಗೆ ಬೆಂಬಲ ಬೆಲೆ ವಿಚಾರಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸರಿಪಡಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.ನಗರದ ನೂತನ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನಫೆಡ್ ಖರೀದಿ ಏಜೆನ್ಸಿಯಾಗಿದ್ದು, ದಾಖಲೆಗಳನ್ನು ಸಕಾಲಕ್ಕೆ ಒದಗಿಸದ ಕಾರಣ ಖರೀದಿ ಪ್ರಕ್ರಿಯೆ ವಿಳಂಬವಾಗಿದೆ. ರಾಜ್ಯಾದ್ಯಂತ 400ಕ್ಕೂ ಅಧಿಕ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. ತೊಗರಿ ಬೆಳೆಗಾರರು ಆತಂಕಪಡುವ ಅಗತ್ಯವಿಲ್ಲ. ಇದೇ ಮೊದಲ ಬಾರಿಗೆ ₹8000 ಧಾರಣಿಯಲ್ಲಿ ತೊಗರಿ ಖರೀದಿ ಮಾಡಲಾಗುತ್ತಿದೆ. ಇದುವರೆಗೆ ₹ 5800 ಧಾರಣಿಯಲ್ಲಿ ಖರೀದಿ ಮಾಡಲಾಗುತ್ತಿತ್ತು. ಬೀದರ್ ಜಿಲ್ಲೆಯಿಂದ ಚಿತ್ರದುರ್ಗ ಜಿಲ್ಲೆಯವರೆಗೆ ತೊಗರಿ ಬೆಳೆಯಲಾಗುತ್ತಿದ್ದು, ರೈತರು ಬೆಂಬಲ ಬೆಲೆ ಹೆಚ್ಚಳ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದರು. ರೈತರ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿ ಕ್ವಿಂಟಾಲ್‌ಗೆ ₹ 450 ಹೆಚ್ಚುವರಿ ಕೊಡುವ ನಿರ್ಧಾರ ಕೈಗೊಂಡಿದೆ ಎಂದು ವಿವರಿಸಿದರು.ಜೋಳಕ್ಕೆ ₹3300 ಹಾಗೂ ಮಾಲದಂಡಿ ಜೋಳಕ್ಕೆ ₹3400 ಬೆಂಬಲ ಬೆಲೆ ಘೋಷಣೆ ಮಾಡಲಾಗಿದ್ದು, ಒಟ್ಟು ಐದು ಲಕ್ಷ ಕ್ವಿಂಟಾಲ್ ಜೋಳ ಖರೀದಿ ಮಾಡಲಾಗುವುದು. ಇದುವರೆಗೆ ಕೆಲವೇ ಕೆಲವು ಜಿಲ್ಲೆಗಳ ರೈತರು ಮಾತ್ರ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡುತ್ತಿದ್ದರು. ಈ ಬಾರಿ ಜೋಳ ಬೆಳೆಯುವ ಎಲ್ಲ ಜಿಲ್ಲೆಗಳಿಗೂ ಖರೀದಿ ಪ್ರಮಾಣವನ್ನು ಹಂಚಿಕೆ ಮಾಡಲಾಗುವುದು ಎಂದರು.ಕಬ್ಬಿಗೆ ನಿಧಿ ಸ್ಥಾಪನೆ:
ಅಗ್ನಿ ದುರಂತದಲ್ಲಿ ಸಂಭವಿಸುವ ಕಬ್ಬಿನ ಹಾನಿಗೆ ಪರಿಹಾರ ನೀಡಲು ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಿಂದ ನಿಧಿ ಸ್ಥಾಪಿಸಲಿದ್ದು, ಈ ವರ್ಷದಿಂದಲೇ ₹50 ಲಕ್ಷ ಮೀಸಲಿಡಲಾಗುವುದು ಎಂದು ಘೋಷಣೆ ಮಾಡಿದರು. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ನೀಡುವ ಪರಿಹಾರ ಅತ್ಯಲ್ಪ ಎಂಬ ಕಾರಣಕ್ಕೆ ನಿಜಲಿಂಗಪ್ಪ ಸಂಸ್ಥೆಯಿಂದಲೂ ಪರಿಹಾರ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ರಾಜ್ಯದಲ್ಲಿ ಒಟ್ಟು 80 ಸಕ್ಕರೆ ಕಾರ್ಖಾನೆಗಳಿದ್ದು, ಅವುಗಳಲ್ಲಿ 72 ಕಾರ್ಖಾನೆಗಳಲ್ಲಿ ಹಳೆ ಪದ್ಧತಿಯ ಅನಲಾಗ್ ಯಂತ್ರಗಳ ಬದಲಿಗೆ ಡಿಜಿಟಲ್ ತೂಕದ ಯಂತ್ರಗಳನ್ನು ಹಾಕಲಾಗಿದೆ. ಐದು ಕಾರ್ಖಾನೆಗಳ ಮಾಲೀಕರು ನ್ಯಾಯಾಲಯಕ್ಕೆ ಹೋಗಿರುವುದರಿಂದ ವಿಳಂಭವಾಗಿದೆ. ಇತರ ಕಾರ್ಖಾನೆಗಳಲ್ಲಿ ಡಿಜಿಟಲ್ ತೂಕದ ಯಂತ್ರ ಅಳವಡಿಕೆ ಪ್ರಗತಿಯಲ್ಲಿದೆ. ಎಫ್‌ಆರ್‌ಪಿ ದರ ಹೆಚ್ಚಳ ಮಾಡುವ ದೃಷ್ಟಿಯಿಂದ 2025-26ನೇ ಸಾಲಿಗೆ ಪ್ರತಿ ಟನ್‌ಗೆ ₹ 4440 ನಿಗದಿ ಪಡಿಸುವಂತೆ ರಾಜ್ಯ ಸರ್ಕಾರವೇ ಸ್ವಪ್ರೇರಣೆಯಿಂದ ಸಿಎಸಿಪಿಗೆ ಶಿಫಾರಸ್ಸು ಮಾಡಿದೆ. ಕಬ್ಬಿನ ಬೆಲೆಯನ್ನು ಕೇಂದ್ರ ಸರ್ಕಾರವೇ ನಿಗದಿಪಡಿಸಲಿದ್ದು, ಇದರಲ್ಲಿ ರಾಜ್ಯ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದರು.ತೂಕದಲ್ಲಿ ವಂಚನೆ ಮಾಡುವ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ವಿರುದ್ಧ ಸೂಕ್ತ ದಾಖಲೆಗಳೊಂದಿಗೆ ದೂರು ನೀಡುವ ರೈತರಿಗೆ ಒಂದು ಲಕ್ಷ ನಗದು ಬಹುಮಾನ ನೀಡಲಾಗುವುದು ಎಂದು ಬೆಳಗಾವಿ ಅಧಿವೇಶನದ ವೇಳೆ ಘೋಷಣೆ ಮಾಡಲಾಗಿತ್ತು. ಈ ಬಹುಮಾನದ ಮೊತ್ತವನ್ನು ₹ 2.5 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ದೂರು ನೀಡುವ ಕಬ್ಬು ಬೆಳೆಗಾರರಿಗೆ ಯಾವುದೇ ಸಮಸ್ಯೆಯಾಗದಂತೆ ಸರ್ಕಾರ ಜವಾಬ್ದಾರಿ ತೆಗೆದುಕೊಳ್ಳಲಿದೆ. ಅವರ ಕಬ್ಬನ್ನು ನುರಿಸುವ ಹೊಣೆಯನ್ನೂ ಸರ್ಕಾರ ಹೊರಲಿದೆ.- ಶಿವಾನಂದ ಪಾಟೀಲ,
ಸಚಿವರು.