ಕನ್ನಡಪ್ರಭ ವಾರ್ತೆ ಮಂಡ್ಯ
ಈ ಬಾರಿ ಉತ್ತಮ ಭತ್ತದ ಫಸಲು ಬಂದಿದ್ದು, ಕಟಾವು ಮಾಡಿದ ಭತ್ತ ಖರೀದಿ ಹಾಗೂ ಬೆಳೆ ವಿಮೆ ಬಗ್ಗೆ ತಾಲೂಕಿನ ಎಲ್ಲಾ ರೈತರಿಗೂ ತಿಳಿಸಲು ಅಗತ್ಯ ಪ್ರಚಾರ ಕೈಗೊಳ್ಳಬೇಕು ಎಂದು ಶಾಸಕ ಪಿ.ರವಿಕುಮಾರ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ಮಂಡ್ಯ ತಾಲೂಕು ಪಂಚಾಯ್ತಿಯ 2024-25ನೇ ಸಾಲಿನ ನವೆಂಬರ್ 2024ರ ಅಂತ್ಯದವರೆಗಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳ ಕಾರ್ಯಕ್ರಮವು ಸೇರಿದಂತೆ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೃಷಿ ಇಲಾಖೆಗೆ ಸಂಬಂಧಿಸಿದಂತೆ ರೈತರಿಗೆ ಯಾವುದೇ ಕೊರತೆ ಉಂಟಾಗದಂತೆ ಬಿತ್ತನೆ ಭತ್ತ ಆಯಾ ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಣೆ ಮಾಡಬೇಕು. ಮಳೆ ಬರುತ್ತಿರುವ ಹಿನ್ನೆಲೆ ರೈತರಿಗೆ ಅಗತ್ಯ ಸಲಹೆ ಹಾಗೂ ಬೆಳೆ ವಿಮೆಯ ಬಗ್ಗೆ ಮಾಹಿತಿ ನೀಡಬೇಕು ಎಂದರು.ಇದುವರೆಗೂ ತಾಲೂಕಿನಲ್ಲಿ 3,850 ರೈತರು ಬೆಳೆ ವಿಮೆ ಮಾಡಿಸಿಕೊಂಡಿದ್ದಾರೆ. ಕೃಷಿಯಲ್ಲಿ ರೈತರಿಗೆ ಸಿಗುವ ಎಲ್ಲಾ ಸೌಲಭ್ಯಗಳು ಸೂಕ್ತ ರೀತಿಯಲ್ಲಿ ಅವರಿಗೆ ದೊರೆಯಬೇಕು. ತಾಲೂಕಿನಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆ ನದಿ, ಕಾಲುವೆಗಳಿಗೆ ಹರಿಸಲಾಗುತ್ತಿರುವ ನೀರನ್ನು ಕಾವೇರಿ ನೀರಾವರಿ ನಿಗಮದವರು ತಾತ್ಕಾಲಿಕವಾಗಿ ನಿಲ್ಲಿಸಬೇಕು ಎಂದರು.
ಆಹಾರ ಸರಬರಾಜು ಮತ್ತು ಗ್ರಾಹಕ ನಾಗರೀಕ ಇಲಾಖೆಗೆ ಸಂಬಂಧಿಸಿದಂತೆ ಹೊಸದಾಗಿ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬ ಅರ್ಹರಿಗೂ ರೇಷನ್ ಕಾರ್ಡ್ ವಿತರಣೆ ಮಾಡಿ ಎಂದು ತಹಶೀಲ್ದಾರ್‌ಗೆ ತಿಳಿಸಿದರು.ತಾಲೂಕಿನ ಪ್ರತಿಯೊಂದು ನ್ಯಾಯಬೆಲೆ ಅಂಗಡಿಗಳಲ್ಲಿ ಇರುವ ತಾಂತ್ರಿಕ ಸಮಸ್ಯೆ ಪರಿಹರಿಸಬೇಕು. ಮುದಗಂದೂರು ಗ್ರಾಮದಲ್ಲಿ ನ್ಯಾಯ ಬೆಲೆ ಅಂಗಡಿಯಿದ್ದು, ಸುತ್ತಮುತ್ತಲಿನ ಗ್ರಾಮಗಳಿಂದ ಪಡಿತರ ಪಡೆಯಲು ಸಾರ್ವಜನಿಕರು 5,6 ಕಿಲೋ ಮೀಟರ್ ದೂರದಿಂದ ಬರುತ್ತಿದ್ದು, ಸದರಿ ಗ್ರಾಮದ ಸುತ್ತಮುತ್ತಲು ಬೇರೆ ಯಾವುದೇ ನ್ಯಾಯ ಬೆಲೆ ಅಂಗಡಿ ಇಲ್ಲ. ಮುದಗಂದೂರಿನ ಅಕ್ಕಪಕ್ಕದ ಗ್ರಾಮದಲ್ಲಿ ಉಪ ಕೇಂದ್ರ ತೆರೆಯಬೇಕು ಎಂದರು.
ತಾಲೂಕಿನ ಕೆಲವೊಂದು ಗ್ರಾಮಗಳಲ್ಲಿ ಸಾರಿಗೆ ಬಸ್ ಸಂಚರಿಸುತ್ತಿಲ್ಲ. ಈ ಗ್ರಾಮಗಳಿಗೆ ಬಸ್ ಒದಗಿಸುವ ಬಗ್ಗೆ ಈಗಾಗಲೇ ಪಟ್ಟಿ ನೀಡಲಾಗಿದೆ. ಆದಷ್ಟು ಬೇಗ ಬಸ್ ಸೌಲಭ್ಯ ಕಲ್ಪಿಸಿ ಎಂದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳು ಎಲ್ಲಾ ಫಲಾನುಭವಿಗಳಿಗೆ ತಲುಪುತ್ತಿದೆ ಎಂಬ ಬಗ್ಗೆ ಮಾಹಿತಿ ಪಡೆದರು.
ತಾಲೂಕಿನಲ್ಲಿ ಹೊಸ ಅಂಗನವಾಡಿ ನಿರ್ಮಾಣ ಮಾಡಲಾಗಿದೆ. ಶೀಘ್ರದಲ್ಲೆ ಅಂಗನವಾಡಿಗಳ ಉದ್ಘಾಟನೆ ಮಾಡಲಾಗುವುದು. ರಿಪೇರಿಗೆ ಬಂದಿರುವ ಅಂಗನವಾಡಿಗಳನ್ನು ಕೂಡಲೇ ದುರಸ್ತಿಗೊಳಿಸಿ ಎಂದರು.ಡೆಂಘೀ ಪ್ರಕರಣವನ್ನು ತಡೆಗಟ್ಟಲು ಜಾಥಾ, ಅರಿವು ಕಾರ್ಯಕ್ರಮಗಳು ಹಾಗೂ ಬೇವಿನ ಎಣ್ಣೆ ವಿತರಿಸಲಾಗಿದೆ. ಆಶಾ ಕಾರ್ಯಕರ್ತೆಯರು ಪ್ರತಿ ಮನೆ ಮನೆಗೆ ತೆರಳಿ ಸೊಳ್ಳೆಗಳ ಉತ್ಪತ್ತಿಗೆ ಕಾರಣ ಹಾಗೂ ಅವುಗಳನ್ನು ತಡೆಗಟ್ಟಲು ಅನುಸರಿಸಬೇಕಾದ ಸುರಕ್ಷಿತ ಕ್ರಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಲಾಗಿದೆ. ನವೆಂಬರ್ ಅಂತ್ಯಕ್ಕೆ ಕೇವಲ 5 ಪ್ರಕರಣಗಳಿವೆ ಎಂದು ವೈದ್ಯರು ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯ ಪುಸ್ತಕಗಳನ್ನು ಸಕಾಲದಲ್ಲಿ ನೀಡುತ್ತಿದ್ದು, ಯಾವುದೇ ತೊಂದರೆಯಿಲ್ಲ. ಕೆಲವು ಶಾಲೆಗಳಲ್ಲಿ ಕೊಠಡಿ ಅವಶ್ಯಕವಿದೆ. ಹೊಸ ಕೊಠಡಿ ನಿರ್ಮಿಸಲಾಗುವುದು. ಮಳೆಯಿಂದ ಸೋರುತ್ತಿರುವ ಶಾಲೆಗಳ ಮಾಹಿತಿ ಪಡೆದು ಕೂಡಲೇ ಅವುಗಳ ದುರಸ್ತಿಯಾಗಬೇಕು. ಶಾಲೆಯಲ್ಲಿ ಸೂಕ್ತ ಶೌಚಾಲಯ, ಅತಿಥಿ ಶಿಕ್ಷಕರಿಗೆ ಸರಿಯಾದ ಸಮಯಕ್ಕೆ ವೇತನ ನೀಡಬೇಕು ಎಂದರು.ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫಲಿತಾಂಶ ಕಡಿಮೆ ಬಂದಿದ್ದು, ಈ ಬಾರಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸುವ ಮೂಲಕ ಉತ್ತಮ ಫಲಿತಾಂಶ ಬರಬೇಕು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ವ್ಯಾಪ್ತಿಯ ಹಾಸ್ಟೆಲ್‌ಗಳ ವಿದ್ಯಾರ್ಥಿಗಳಿಗೆ ಮೆನು ಪ್ರಕಾರ ಉತ್ತಮ ಗುಣಮಟ್ಟದ ಊಟ, ಬಿಸಿ ನೀರು ಕೊಡುವುದು, ಯಾವುದೇ ಕುಂದು ಕೊರತೆಗಳಿದ್ದಲ್ಲಿ ನನ್ನ ಗಮನಕ್ಕೆ ತನ್ನಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಶಾಸಕ ಕೆ.ವಿವೇಕಾನಂದ, ತಾಪಂ ಇಒ ವೀಣಾ, ತಹಸೀಲ್ದಾರ್ ಶಿವಕುಮಾರ್ ಬಿರಾದಾರ್, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್ ಕೆ ರುದ್ರಪ್ಪ ಸೇರಿದಂತೆ ಹಲವರು ಇದ್ದರು.