ಕನ್ನಡಪ್ರಭ ವಾರ್ತೆ ಮಡಿಕೇರಿ
ಬೆಂಗಳೂರು ವಕೀಲರ ಸಂಘದ ವತಿಯಿಂದ ಕರ್ನಾಟಕ ಉಚ್ಛನ್ಯಾಯಾಲಯದ ವಿಭಾಗ ಹಾಲ್‌ನಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪೊನ್ನಣ್ಣ, ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಬರಲು ಪ್ರಮುಖವಾಗಿ ಕಾನೂನು ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಕಾರಣ. ಅವರ ಆಸಕ್ತಿಯಿಂದ ಈ ಕಾಯ್ದೆ ಜಾರಿಗೆ ಬರಲು ಸಾಧ್ಯವಾಗಿದೆ. ಅವರಿಗೆ ನನ್ನ ನಿಮ್ಮೆಲ್ಲರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದಂತೆ ವಕೀಲರ ಕಾಯ್ದೆ ಜಾರಿಗೆ ಬರಲು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಗೃಹ ಸಚಿವರಾದ ಜಿ.ಪರಮೇಶ್ವರ ಅವರ ಆಸಕ್ತಿಯಿಂದ ಈ ಕಾಯ್ದೆ ಜಾರಿಗೆ ಬಂದಿದೆ ಎಂದು ಹೇಳಿದರು.ವಕೀಲರ ಒಗ್ಗಟ್ಟಿನಿಂದಾಗಿ ಪಕ್ಷಾತೀತವಾಗಿ, ಜಾತ್ಯಾತೀತವಾಗಿ, ಪಕ್ಷಭೇದ ಮರೆತು ಒಗ್ಗಟ್ಟಿನಿಂದಾಗಿ ಗ್ರಾಮೀಣ ಭಾಗದ ವಕೀಲರಿಗೆ ರಕ್ಷಣಾ ಕಾಯ್ದೆ ಉಪಯುಕ್ತವಾಗಲಿದೆ. ಕಾನೂನನ್ನು ಜಾರಿಗೆ ತಂದವರು ನಾವು. ನಮ್ಮ ಮೇಲಿರುವ ಜವಾಬ್ದಾರಿ ಮರೆಯಬಾರದು. ಕಾನೂನನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇದನ್ನು ದುರ್ಬಳಕೆ ಮಾಡಿಕೊಳ್ಳಬಾರದು. ನಾವು ವಕೀಲರೆಂದರೆ ಸಮಾಜದಲ್ಲಿ ಜನರು ಒಳ್ಳೆಯ ಅಭಿಪ್ರಾಯವನ್ನು ಮೂಡಿಸಬೇಕಾದರೆ ನಮ್ಮ ನಡವಳಿಕೆಯು ಅತ್ಯಂತ ಸೂಕ್ಷ್ಮತೆ ಮತ್ತು ಜವಾಬ್ದಾರಿಯಿಂದ ಕೂಡಿರಬೇಕು ಎಂದರು.
ಅಡ್ವಕೇಟ್ ಕೆ. ಶಶಿಕಿರಣ್ ಶೆಟ್ಟಿ, ವಿವೇಕ್ ಸುಬ್ಬರೆಡ್ಡಿ, ಪ್ರಧಾನ ಕಾರ್ಯದರ್ಶಿಗಳಾದ ಟಿ.ಜಿ. ರವಿ, ಉಚ್ಚನ್ಯಾಯಾಲಯ ವಿಭಾಗದ ಉಪಾಧ್ಯಕ್ಷ ಎ.ಎಸ್.ಹರೀಶ್, ಜಂಟಿ ಕಾರ್ಯದರ್ಶಿ ಚಾಮರಾಜ ಎಂ. ಮತ್ತಿತರು ಇದ್ದರು.ವಿ.ಬಿ.ಕುಟೆನೋ ಸಭಾಂಗಣ ಉದ್ಘಾಟನೆ: ಪ್ರೀತಿ ವಿಶ್ವಾಸದಿಂದ ಉತ್ತಮವಾದ ಸಂಸ್ಥೆಯನ್ನು ಕಟ್ಟಬಹುದು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.
ಬೆಂಗಳೂರು ವಿಶ್ವವಿದ್ಯಾನಿಲಯದ ಕಾಲೇಜಿನಲ್ಲಿ ಶನಿವಾರ ಪ್ರೊಫೆಸರ್ ವಿ ಬಿ ಕುಟೇನೋ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಸಂಸ್ಥೆಯ ಏಳಿಗೆಗೆ ಪ್ರೊ. ಕುಟಿನೋ ಅವರ ಕೊಡುಗೆ ಅಪಾರವಾಗಿದೆ. ಸರ್ಕಾರದ ಸಂಸ್ಥೆಯಾದರೂ ಇಷ್ಟೊಂದು ದೊಡ್ಡ ಮಟ್ಟಿಗೆ ಬೆಳವಣಿಗೆಯಾಗಲು ಅವರ ಕೊಡುಗೆ ಅಪಾರವಾಗಿದೆ. ಈ ಸಂಸ್ಥೆಯ ಏಳಿಗೆ ಇನ್ನಷ್ಟು ಮಕ್ಕಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನಾವೆಲ್ಲರೂ, ನಮ್ಮ ನಮ್ಮ ಜಾಗದಲ್ಲಿದ್ದು ಸಹಕರಿಸಿ ಕೆಲಸ ಮಾಡಬೇಕು ಎಂದು ಹೇಳಿದರು.ನಾನು ಲಾ-ಕಾಲೇಜಿನಿಂದ ಬಂದರೂ ಆ ಕಾಲೇಜಿನ ಮೇಲೆ ವಿಶೇಷವಾದ ಪ್ರೀತಿ ವಿಶ್ವಾಸ ಇದ್ದೇ ಇರುತ್ತದೆ. ಯಾವುದೇ ಕೆಲಸದಲ್ಲಿ ಇರಬಹುದು ವಿದ್ಯಾರ್ಥಿಯಾಗಿರಬಹುದು. ಪ್ರೀತಿ, ವಿಶ್ವಾಸವೇ ಆ ಸಂಸ್ಥೆಯನ್ನು ಇಷ್ಟೊಂದು ದೊಡ್ಡದಾಗಿ ಬೆಳೆಸಲು ಸಾಧ್ಯವಾಗುತ್ತದೆ. ಇದನ್ನು ಉಳಿಸಿಕೊಳ್ಳುವುದು ಹಾಗೂ ನಮ್ಮ ನಿರಂತರ ಬಾಂಧವ್ಯವನ್ನು ಬೆಳೆಸಿಕೊಂಡು ಈ ಸಂಸ್ಥೆಯನ್ನು ಇನ್ನಷ್ಟು ದೊಡ್ಡದಾಗಿ ಬೆಳೆಸಲು ಶ್ರಮಿಸಿದರೆ ಪ್ರೊ. ಕುಟಿನೋ ಅವರಿಗೆ ಗುರುದಕ್ಷಿಣೆ ನೀಡಿದಂತಾಗುತ್ತದೆ ಎಂದು ಭಾವಿಸುತ್ತೇನೆ ಎಂದರು.ಕಾರ್ಯಕ್ರಮದಲ್ಲಿ ಎ.ಎಸ್. ಪೊನ್ನಣ್ಣ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ದೆಹಲಿ ಹೈಕೋರ್ಟ್ ನ್ಯಾಯಾಧೀಶರಾದ ಪ್ರತಿಭಾ ಎಂ ಸಿಂಗ್, ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಕೃಷ್ಣ ಎಸ್ ದೀಕ್ಷಿತ್, ಎಸ್ ಆರ್ ಕೃಷ್ಣಕುಮಾರ್, ರಂಗಸ್ವಾಮಿ ನಟರಾಜ್ ಹಾಗೂ ಸಿಕ್ಕಿಂನ ಅಡ್ವಕೇಟ್ ಜನರಲ್ ಬಸವಪ್ರಭು ಎಸ್ ಪಾಟೀಲ್ ಹಾಗೂ ಇತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.