ಶಿವಾನಂದ ಅಂಗಡಿಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಧಾರವಾಡ ಜಿಲ್ಲೆಯ ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ಕೈಗಾರಿಕಾ ವಲಯಗಳಲ್ಲಿ ಆಸ್ತಿ ತೆರಿಗೆ ಕಟ್ಟುವಂತೆ ಸಂಬಂಧಪಟ್ಟ ಕೈಗಾರಿಕೆಗಳಿಗೆ ನೋಟಿಸ್ ನೀಡುತ್ತಿದ್ದು, ಉದ್ಯಮಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ಮೈಕ್ರೋ ಹಾಗೂ ಸಣ್ಣ ಕೈಗಾರಿಕೆ ಹಾಗೂ ಮಧ್ಯಮ ಕೈಗಾರಿಕೆಗಳು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ), ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ (ಕೆಎಸ್‌ಎಸ್‌ಐಡಿಸಿ) ವ್ಯಾಪ್ತಿಯಲ್ಲಿವೆ. ಉದ್ಯಮಿಗಳು ಇವರಿಗೆ ಸೇವಾ ಶುಲ್ಕವನ್ನು ಕಟ್ಟುತ್ತಾರೆ. ತಾರಿಹಾಳ ಹಾಗೂ ಗೋಕುಲ ಪ್ರದೇಶ 120 ಎಕರೆ ಮೊದಲ ಹಂತ, ಎರಡನೇ ಹಂತದ ಹೆಸರಿನಲ್ಲಿ ವಿಸ್ತರಣೆಯಾಗಿದ್ದು, 70 ಎಕರೆ ಪ್ರದೇಶ ಮಾತ್ರ 1988ರಲ್ಲಿ ಮಹಾನಗರ ಪಾಲಿಕೆಗೆ ಹಸ್ತಾಂತರವಾಗಿದೆ. 50 ಎಕರೆ ಪ್ರದೇಶ ಹಾಗೂ ತಾರಿಹಾಳದ 312 ಎಕರೆ ಪ್ರದೇಶ ಕೆಐಎಡಿಬಿ ಹಾಗೂ ಕೆಎಸ್‌ಎಸ್‌ಐಡಿಸಿ ವ್ಯಾಪ್ತಿಯಲ್ಲೇ ಇವೆ. ಆದರೂ ನೀವು ಪಾಲಿಕೆ ವ್ಯಾಪ್ತಿಯಲ್ಲಿರುವುದರಿಂದ ಇ-ಆಸ್ತಿ ಪಡೆಯಲು ಆಸ್ತಿ ತೆರಿಗೆ ಕಟ್ಟಲೇಬೇಕು ಎಂದು ಉದ್ಯಮಿಗಳಿಗೆ ದುಂಬಾಲು ಬಿದ್ದಿದೆ.
ದಶಕಗಳಿಂದ ಆಸ್ತಿ ತೆರಿಗೆ ವ್ಯಾಜ್ಯ ಮುಂದುವರಿದುಕೊಂಡು ಬಂದಿದ್ದು, ಪಾಲಿಕೆ ನೋಟಿಸ್ ಮೇಲೆ ನೋಟಿಸ್ ನೀಡುತ್ತಿದೆ. ಗುಂಟೆವಾರು ಲೆಕ್ಕದಲ್ಲಿ ಕೈಗಾರಿಕೆ ವಲಯದಲ್ಲಿ ಕೈಗಾರಿಕ ಶೆಡ್‌ಗಳಿದ್ದು, ಅದರ ವಿಸ್ತಾರ ಹಾಗೂ ಆಕಾರದ ಮೇಲೆ ಆಸ್ತಿ ತೆರಿಗೆ ಆಕರಣೆಯಾಗುತ್ತದೆ. ಖಾಲಿ ನಿವೇಶನಕ್ಕೂ ತೆರಿಗೆ ಆಕರಿಸಲಾಗುತ್ತದೆ. ಒಬ್ಬೊಬ್ಬ ಉದ್ಯಮಿಯೇ 10ರಿಂದ 17 ಲಕ್ಷ ರು.ವರೆಗೂ ಆಸ್ತಿ ತೆರಿಗೆ ಕಟ್ಟುವ ಬಾಕಿ ಇವೆ. ಪಾಲಿಕೆಗೆ ಕೈಗಾರಿಕೆ ವಲಯ ಹಸ್ತಾಂತರವಾಗದೇ ಆಸ್ತಿ ತೆರಿಗೆ ಕಟ್ಟುವುದಾದರೂ ಹೇಗೆ? ಎಂದು ಪ್ರಶ್ನಿಸುತ್ತಾರೆ ಉದ್ಯಮಿಗಳು.ಗೋಕುಲ, ತಾರಿಹಾಳ ಪ್ರದೇಶದಲ್ಲಿ ಕೆಎಸ್ಎಸ್‌ಐಡಿಸಿ, ಕೆಐಎಡಿಬಿಯವರು ಮೂಲಭೂತ ಸೌಕರ್ಯ ಕಲ್ಪಿಸುತ್ತಿಲ್ಲ. ಇತ್ತ ಮಹಾನಗರ ಪಾಲಿಕೆಯವರು ಕಸ ಎತ್ತಲೂ ಸಹ ಮುಂದಾಗುತ್ತಿಲ್ಲ. ಬೀದಿ ದೀಪಗಳು ಇಲ್ಲ. ವಿದೇಶಕ್ಕೆ ರಫ್ತು ಮಾಡುವ ಕೈಗಾರಿಕೆಗಳು ಇಲ್ಲಿವೆ. ಅಲ್ಲಿಯ ಅತಿಥಿಗಳು ಕೈಗಾರಿಕೆ ವಲಯ ವೀಕ್ಷಣೆಗೆ ಬಂದರೆ ಏನಾಗಬೇಡ, ಯಾರು ಅವಮಾನ ಅನುಭವಿಸುವವರು ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಉದ್ಯಮಿಗಳು.
ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದವರು ತೆರಿಗೆ ವ್ಯಾಜ್ಯವನ್ನು ಬಗೆಹರಿಸುವಂತೆ ಜಿಲ್ಲಾಧಿಕಾರಿ, ಪೌರಾಯುಕ್ತರು, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ, ಸಣ್ಣ ಕೈಗಾರಿಕೆಗಳ ಸಚಿವ ಶರಣಬಸಪ್ಪ ದರ್ಶಾನಾಪುರ ಸೇರಿದಂತೆ ಹಲವರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೂ ಸಮಸ್ಯೆ ಬಗೆಹರಿದಿಲ್ಲ. ಮೂಲ ಸೌಕರ್ಯ ಕಲ್ಪಿಸುವಂತೆ ಕೋರಿದರೂ ಪಾಲಿಕೆ ಮೂಲ ಸೌಕರ್ಯ ಕಲ್ಪಿಸುತ್ತಿಲ್ಲ ಹೀಗಿದ್ದಾಗ ಹೇಗೆ ತೆರಿಗೆ ಕಟ್ಟಬೇಕು ಎನ್ನುತ್ತಾರೆ ಉದ್ಯಮಿಗಳು.ಇ-ಸ್ವತ್ತು ತೊಂದರೆ:ಎರಡೆರಡು ಕಡೆ ಹೇಗೆ ತೆರಿಗೆ ಕಟ್ಟಬೇಕು ಎಂದು ಕೈಗಾರಿಕೋದ್ಯಮಿಗಳು ಆತಂಕದಲ್ಲಿರುವುದಾಗಲಿ 6 ವರ್ಷದ ಆಸ್ತಿ ತೆರಿಗೆ ಕಟ್ಟಿದವರಿಗೆ ನಾವು ಇ-ಸ್ವತ್ತು ನೀಡುತ್ತೇವೆ ಎಂದು ಪಾಲಿಕೆ ಆಫರ್ ನೀಡುತ್ತಿದೆ. ಕೈಗಾರಿಕೆ ಸ್ವತ್ತು ಯಾರ ಹೆಸರಿನಲ್ಲಿದೆ ಎಂಬುದಕ್ಕೆ ಇ-ಸ್ವತ್ತು ಪ್ರಮುಖ ಆಧಾರವಾಗಿದ್ದು, ಇದು ಇಲ್ಲದೇ ಬ್ಯಾಂಕ್ ಸೇರಿದಂತೆ ಯಾವುದೇ ಹಣಕಾಸು ಸಂಸ್ಥೆಗಳು ಕೈಗಾರಿಕೋದ್ಯಮಿಗಳಿಗೆ ಸಾಲ ನೀಡಲು ಮುಂದೆ ಬರುತ್ತಿಲ್ಲ. ಹೀಗಾಗಿ ಇ-ಸ್ವತ್ತು ಪಡೆಯುವ ಅನಿವಾರ್ಯತೆ ಕೈಗಾರಿಕೋದ್ಯಮಿಗಳಿಗೆ ಅನಿವಾರ್ಯವಾಗಿದೆ.
ಕೆಎಸ್‌ಎಸ್‌ಐಡಿಸಿಯವರಿಗೆ ನಾವು ಪ್ರತಿವರ್ಷ ಸೇವಾ ಶುಲ್ಕ ಕಟ್ಟುತ್ತೇವೆ. ಮಹಾನಗರ ಪಾಲಿಕೆಯವರು ಸಹ ಆಸ್ತಿ ತೆರಿಗೆ ಕಟ್ಟುವಂತೆ ನೋಟಿಸ್ ನೀಡುತ್ತಿದ್ದು, ಎರಡು ಕಡೆಯವರು ಕೈಗಾರಿಕೆ ವಲಯದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುತ್ತಿಲ್ಲ. ಎರಡೆರಡು ಕಡೆ ತೆರಿಗೆ ಕಟ್ಟಿ ಉದ್ಯಮ ಉಳಿಸಿಕೊಳ್ಳುವುದಾದರೂ ಹೇಗೆ? ಎಂದು ಹುಬ್ಬಳ್ಳಿಯ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಉಪಾಧ್ಯಕ್ಷ ಅಶೋಕ ಕುನ್ನೂರ ಹೇಳಿದರು.ನಮ್ಮ ಕಾಯ್ದೆಯಲ್ಲಿ 6 ವರ್ಷದ ಆಸ್ತಿ ತೆರಿಗೆ ಕಟ್ಟಿಸಿಕೊಂಡು ಇ-ಆಸ್ತಿ ನೀಡಲು ಅವಕಾಶವಿದೆ. ಅದರಂತೆ ನಾವು ಗೋಕುಲ ಹಾಗೂ ತಾರಿಹಾಳ ಕೈಗಾರಿಕೆ ಪ್ರದೇಶದಲ್ಲಿ ಏಜೆನ್ಸಿ ಸೇರಿ ಯಾವುದೇ ಇರಲಿ 6 ವರ್ಷದ ತೆರಿಗೆ ಕಟ್ಟಿದವರಿಗೆ ಇ-ಆಸ್ತಿ ನೀಡುತ್ತಿದ್ದೇವೆ. ಅಂಥ ಕಡೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುತ್ತೇವೆ ಎಂದು ಹುಬ್ಬಳ್ಳಿ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಗಾಳಿ ಹೇಳಿದರು.