ಕನ್ನಡಪ್ರಭ ವಾರ್ತೆ ಸಿಂಧನೂರು
ತುರ್ವಿಹಾಳ ಬಳಿ ಎರಡನೇ ಹಂತದ ಕೆರೆ ನಿರ್ಮಾಣಕ್ಕಾಗಿ ಡಿಪಿಆರ್ ತಯಾರಿಸಲಾಗಿದ್ದು, ರಾಜ್ಯ ಸರ್ಕಾರದ ಒಪ್ಪಿಗೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ನಗರಸಭೆ ವಿಶೇಷ ಅನುದಾನ ₹20 ಕೋಟಿ, ನಗರ ಯೋಜನಾ ಪ್ರಾಧಿಕಾರದ ಅನುದಾನ ₹6.5 ಕೋಟಿ ಹಾಗೂ ನಗರಸಭೆ ನಿಧಿ ₹3.5 ಕೋಟಿ ಸೇರಿ ಒಟ್ಟು ₹30 ಕೋಟಿಯಲ್ಲಿ ಕೆರೆ ನಿರ್ಮಾಣ ಮಾಡಲಾಗುವುದು. ಸಿಂಧನೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ಕೆರೆ ನಿರ್ಮಾಣಕ್ಕಾಗಿ ತುರ್ವಿಹಾಳ ಬಳಿ 259 ಎಕರೆ ಭೂಮಿ ಖರೀದಿ ಮಾಡಲಾಗಿತ್ತು ಎಂದರು.
ಈಗಾಗಲೇ 119 ಎಕರೆಯಲ್ಲಿ ಮೊದಲನೇ ಹಂತದ ಕೆರೆ ನಿರ್ಮಿಸಲಾಗಿದ್ದು, 6 ಮೀಟರ್ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಎರಡನೇ ಹಂತದ ಕೆರೆ ನಿರ್ಮಾಣಕ್ಕಾಗಿ ₹30 ಕೋಟಿಯಲ್ಲಿ ಡಿಪಿಆರ್ ತಯಾರಿಸಿದ್ದು, 64 ಎಕರೆಯಲ್ಲಿ 4 ಮೀಟರ್ ನೀರಿನ ಸಂಗ್ರಹವಾಗಲಿದೆ. ₹120 ಕೋಟಿ ಡಿಪಿಆರ್ ತಯಾರಿಸಿದ್ದು, ಒಟ್ಟು 92 ಎಕರೆಯಲ್ಲಿ 12 ಮೀಟರ್ ನೀರಿನ ಸಂಗ್ರಹವಾಗಲಿದೆ. ಮುಂದಿನ 50 ವರ್ಷಗಳವರೆಗೆ ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಆಗಬಾರದೆಂಬ ದೂರದೃಷ್ಠಿಯಿಂದ ಡಿಪಿಆರ್ ತಯಾರಿಸಲಾಗಿದೆ. ರಾಜ್ಯ ಸರ್ಕಾರದ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದರೆ ಆದಷ್ಟು ಶೀಘ್ರ ಕೆರೆ ಕಾಮಗಾರಿ ಆರಂಭಿಸಲಾಗುವುದು ಎಂದರು.ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಮಾತನಾಡಿ, ತುರ್ವಿಹಾಳನಿಂದ ಸಿಂಧನೂರುವರೆಗಿನ 18 ಕಿ.ಮೀ ವ್ಯಾಪ್ತಿಯಲ್ಲಿ ಗುಂಜಳ್ಳಿ ಮತ್ತು ಕೋಲ್ಡ್ ಸ್ಟೋರೆಜ್ ಬಳಿ ರೈಸಿಂಗ್ ಪೈಪ್ ಒಡೆದಿತ್ತು. ಅದರಲ್ಲಿ ಗುಂಜಳ್ಳಿ ಬಳಿ ದುರಸ್ತಿ ಮಾಡಲಾಗಿದೆ. ಕೋಲ್ಡ್ ಸ್ಟೋರೆಜ್ ಬಳಿಯೂ ಶೀಘ್ರ ದುರಸ್ತಿ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಮಾಜಿ ಉಪಾಧ್ಯಕ್ಷ ಮುರ್ತುಜಾ ಹುಸೇನ್ ಸೇರಿದಂತೆ ಸರ್ವ ಸದಸ್ಯರು, ಅಧಿಕಾರಿಗಳು ಇದ್ದರು.