ಮದ್ದೂರು ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ: ಶಾಸಕ ಕೆ.ಎಂ.ಉದಯ್

KannadaprabhaNewsNetwork |  
Published : Jan 31, 2024, 02:17 AM IST
30ಕೆಎಂಎನ್ ಡಿ20ಮದ್ದೂರು ಪುರಸಭೆ ವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಎಂ. ಉದಯ್ ಚಾಲನೆ ನೀಡಿದರು. | Kannada Prabha

ಸಾರಾಂಶ

ಮದ್ದೂರು ಪಟ್ಟಣ ಒಳಗೊಂಡಂತೆ ಚಾಮನಹಳ್ಳಿ, ಸೋಮನಹಳ್ಳಿ ಗೊರವನಹಳ್ಳಿ ಹಾಗೂ ಗೆಜ್ಜಲಗೆರೆ ಗ್ರಾಪಂಗಳನ್ನು ಮದ್ದೂರು ಪುರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡುವ ಮೂಲಕ ನಗರಸಭೆಯಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಪೌರಾಡಳಿತ ನಿರ್ದೇಶಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.

ಪಟ್ಟಣದ ಪುರಸಭೆ ವ್ಯಾಪ್ತಿಯ ಸಿದ್ದಾರ್ಥ ನಗರ, ಚನ್ನೇಗೌಡ ಬಡಾವಣೆ ಹಾಗೂ ಕಾವೇರಿ ನಗರದಲ್ಲಿ ಅಮೃತನಗರ ಯೋಜನೆ ಅಡಿ ಬಿಡುಗಡೆಯಾಗಿರುವ 1.85 ಲಕ್ಷ ರು. ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಪಟ್ಟಣ ಒಳಗೊಂಡಂತೆ ಚಾಮನಹಳ್ಳಿ, ಸೋಮನಹಳ್ಳಿ ಗೊರವನಹಳ್ಳಿ ಹಾಗೂ ಗೆಜ್ಜಲಗೆರೆ ಗ್ರಾಪಂಗಳನ್ನು ಮದ್ದೂರು ಪುರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡುವ ಮೂಲಕ ನಗರಸಭೆಯಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಪೌರಾಡಳಿತ ನಿರ್ದೇಶಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ತಾವು ಸಲ್ಲಿಸಿರುವ ಪ್ರಸ್ತಾವನೆ ಸಂಬಂಧ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ್ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಪೌರಾಡಳಿತ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ ಎಂದರು.

ಮುಂದಿನ ಒಂದು ವರ್ಷದಲ್ಲಿ ಪಟ್ಟಣಕ್ಕೆ ಹೈಟೆಕ್ ಸ್ಪರ್ಶ ನೀಡುವುದು ನನ್ನ ಪರಮ ಗುರಿ. ಈ ಸಂಬಂಧ ಸರ್ಕಾರದಿಂದ ಹಂತ ಹಂತವಾಗಿ ಅನುದಾನ ಬಿಡುಗಡೆಯಾಗುತ್ತಿರುವುದರಿಂದ ಆದ್ಯತೆ ಮೇರೆಗೆ ಬಡಾವಣೆಗಳ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಪಟ್ಟಣ ವ್ಯಾಪ್ತಿಯಲ್ಲಿ ಅಳವಡಿಸಿರುವ ವಿವಿಧ ರಾಜಕೀಯ ಪಕ್ಷಗಳ ನಾಯಕರ ಬ್ಯಾನರ್ ಗಳನ್ನು ಪುರಸಭೆ ಅಧಿಕಾರಿಗಳು ತೆರವು ಮಾಡುತ್ತಿರುವ ಬಗ್ಗೆ ನನ್ನ ಹಸ್ತಕ್ಷೇಪವಿಲ್ಲ. ಕೆಲವು ಪುಡಿ ರಾಜಕಾರಣಿಗಳು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಇದು ಸರಿಯಲ್ಲ ಎಂದರು.

ಹೆದ್ದಾರಿಗಳಲ್ಲಿ ಮತ್ತು ಪಟ್ಟಣ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಫ್ಲೆಕ್ಸ್ ಗಳನ್ನು ಅಳವಡಿಸುವ ಮೂಲಕ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳು ಪಕ್ಷಾತೀತವಾಗಿ ಫ್ಲೆಕ್ಸ್ ಮತ್ತು ಕಟೌಟ್ ತೆರವುಗೊಳಿಸುತ್ತಿದ್ದಾರೆ ಇದರಲ್ಲಿ ನನ್ನ ಪಾತ್ರವಿಲ್ಲ ಎಂದು ಶಾಸಕ ತಿಳಿಸಿದರು.

ಈ ವೇಳೆ ಪುರಸಭಾ ಸದಸ್ಯರಾದ ಎಂ.ಬಿ.ಸಚಿನ್, ಸಿದ್ದರಾಜು, ಕಮಲಾನಾಥ, ಮನೋಜ, ಮಾಜಿ ಅಧ್ಯಕ್ಷ ಮನ್ಸೂರ್ ಖಾನ್, ಮಾಜಿ ಉಪಾಧ್ಯಕ್ಷ ಇಮ್ತಿಯಾಜ್ ಉಲ್ಲಾ ಖಾನ್, ಅಸ್ಲಾಂ, ಶಬಾನ, ಯಶ್ವಂತ, ಯತೀಶ್, ಪುರಸಭೆ ಮುಖ್ಯ ಅಧಿಕಾರಿ ಕರಿಬಸವಯ್ಯ ಮತ್ತಿತರರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ