ಆಮ್ಲಜನಕದ ಕೊರತೆ ನೀಗಿಸಲು ಪ್ರಕೃತಿ ಸಂರಕ್ಷಿಸಿ

KannadaprabhaNewsNetwork |  
Published : Jul 07, 2024, 01:25 AM IST
೬ಕೆಎಲ್‌ಆರ್-೯ಕೋಲಾರದ ಹೊರವಲಯದ ಡಿಸಿ ಕಛೇರಿ ಹಿಂಭಾಗದ ಕೆರೆಯಲ್ಲಿ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯಿಂದ ೨೦೨೪ನೇ ಸಾಲಿನ ವನಮಹೋತ್ಸವ ಕಾರ್ಯಕ್ರಮ ಶಾಸಕ ಕೊತ್ತೂರು ಜಿ.ಮಂಜುನಾಥ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಜೀವಿಗಳಿಗೆ ನೀರು ಮತ್ತು ಗಾಳಿ ಅತ್ಯಾವಶ್ಯಕ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಮರಗಿಡಗಳನ್ನು ನಾಶ ಮಾಡುತ್ತಿದ್ದಾನೆ. ಯಾವುದೇ ಕಾರಣಕ್ಕೂ ಪರಿಸರ ನಾಶ ಮಾಡಬಾರದು, ಮುಂದಿನ ಪೀಳಿಗೆಗಾಗಿ ಗಿಡಮರಗಳನ್ನು ಬೆಳೆಸಬೇಕು.

ಕನ್ನಡಪ್ರಭ ವಾರ್ತೆ ಕೋಲಾರಕೊರೋನಾ ಸಂದರ್ಭದಲ್ಲಿ ಆಮ್ಲಜನಕದ ಕೊರತೆಯಿಂದ ಉಂಟಾದ ಪರಿಸ್ಥಿತಿ ನಮಗೆಲ್ಲ ಪಾಠವಾಗಿದೆ. ಪ್ರತಿಯೊಬ್ಬರೂ ಗಿಡ, ಮರಗಳ ಮಹತ್ವವನ್ನು ಅರಿತು ಪೋಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಎಂದು ಶಾಸಕ ಕೊತ್ತೂರು ಜಿ. ಮಂಜುನಾಥ್ ತಿಳಿಸಿದರು.ನಗರದ ಹೊರವಲಯದ ಜಿಲ್ಲಾಧಿಕಾರಿ ಕಚೇರಿ ಹಿಂಭಾಗದ ಕೆರೆಯಲ್ಲಿ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯಿಂದ ೨೦೨೪ನೇ ಸಾಲಿನ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸ್ವಾರ್ಥಕ್ಕಾಗಿ ಅರಣ್ಯ ನಾಶ

ಮನುಷ್ಯ ಸೇರಿದಂತೆ ಪ್ರಾಣಿ ಪಕ್ಷಿಗಳು ಜೀವಿಸಲು ನೀರು ಮತ್ತು ಗಾಳಿ ಅವಶ್ಯಕವಾಗಿದೆ, ಮನುಷ್ಯನು ತನ್ನ ಸ್ವಾರ್ಥಕ್ಕೆ ಮರಗಿಡಗಳನ್ನು ನಾಶ ಮಾಡಲು ಹೊರಟಿದ್ದಾರೆ. ನಾಶ ಮಾಡುವುದು ಸುಲಭ, ಆದರೆ ಬೆಳೆಸುವುದು ಕಷ್ಟ ಯಾವುದೇ ಕಾರಣಕ್ಕೂ ಪರಿಸರ ನಾಶ ಮಾಡಬಾರದು, ಮುಂದಿನ ಪೀಳಿಗೆಗಾಗಿ ಗಿಡಮರಗಳನ್ನು ಬೆಳೆಸಬೇಕಾಗಿದೆ ಎಂದರು. ಪರಿಸರ ನಾಶ ಮಾಡಿದಷ್ಟು ಮನುಷ್ಯನ ಆಯಸ್ಸು ಕಡಿಮೆಯಾಗುತ್ತದೆ. ಅದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು, ಮರಗಿಡಗಳನ್ನು ಕಡಿದರೆ ತಮ್ಮ ಮಕ್ಕಳ ಕೈಕಡಿದಂತೆ. ಸರ್ಕಾರಿ ಜಾಗದಲ್ಲಿ ಮತ್ತು ಶಾಲಾ ಕಾಲೇಜುಗಳ ಕಾಂಪೌಂಡ್‌ಗಳಲ್ಲಿ ಹಣ್ಣಿನ ಗಿಡಗಳನ್ನು ಹಾಕಿದರೆ ತಿನ್ನಲು ಹಣ್ಣುಗಳು ಸಿಗುತ್ತವೆ. ಜೊತೆಗೆ ಆಮ್ಲಜನಕವು ಹೆಚ್ಚಾಗುತ್ತದೆ. ಇದರ ಬಗ್ಗೆ ಅರಣ್ಯ ಮತ್ತು ಶಿಕ್ಷಣ ಇಲಾಖೆ ಮುತುವರ್ಜಿ ವಹಿಸಬೇಕೆಂದರು.ಪರಿಸರ ರಕ್ಷಣೆ ಎಲ್ಲರ ಕರ್ತವ್ಯ

ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಪ್ರತಿ ವರ್ಷ ಜುಲೈ ೧ ರಿಂದ ೭ ರವರೆಗೆ ಒಂದು ವಾರ ವನಮಹೋತ್ಸವ ಕಾರ್ಯಕ್ರಮದ ಹೆಸರಿನಲ್ಲಿ ಗಿಡಗಳನ್ನು ನೆಡುವ ಮೂಲಕ ಸರ್ಕಾರವು ಜವಾಬ್ದಾರಿ ನೀಡಿದೆ. ಜನಸಂಖ್ಯೆ ಹೆಚ್ಚಾದಂತೆ ನಾವು ಪರಿಸರವನ್ನು ನಾಶ ಮಾಡಿಕೊಂಡು ಬಂದಿದ್ದೇವೆ. ಅದರ ದುಷ್ಪರಿಣಾಮ ಕೊರೋನಾ ಸಂದರ್ಭದಲ್ಲಿ ಅನುಭವಿಸಿದ್ದೇವೆ. ಮುಂದೆ ಅಂತಹ ಸನ್ನಿವೇಶ ಬರದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಪರಿಸರ ರಕ್ಷಣೆ ನಮ್ಮ ರಕ್ಷಣೆಯಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ ಎಂದರು.ಅರಣ್ಯ ಪ್ರದೇಶಗಳ ನಾಶ

ಜಿಲ್ಲಾಧಿಕಾರಿ ಅಕ್ರಂ ಪಾಷ ಮಾತನಾಡಿ, ಜನಸಂಖ್ಯೆಗೆ ಅನುಗುಣವಾಗಿ ಒಟ್ಟು ಪ್ರದೇಶದಲ್ಲಿ ಶೇ.೩೩ರಷ್ಟು ಅರಣ್ಯ ಅವಶ್ಯಕತೆ ಇದ್ದು ಜಾಗತಿಕ ಮಟ್ಟದಲ್ಲಿ ಇದು ಶೇ.೧೭ ಅರಣ್ಯ ಮಾತ್ರ ಇದೆ. ನಾವೇ ಮಾಡಿದ ತಪ್ಪಿಗೆ ಅರಣ್ಯ ನಾಶವಾಗಿದೆ. ಪ್ರತಿಯೊಬ್ಬರೂ ಪರಿಸರವನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ನೆಮ್ಮದಿಯಿಂದ ಬದುಕುವ ವಾತಾವರಣವನ್ನು ನಾವೇ ಕೊಡುಗೆಯಾಗಿ ನೀಡಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಗಿಡಮರಗಳನ್ನು ನೆಟ್ಟು ಬೆಳೆಸೋಣ ಎಂದರು.ಉಪ ಅರಣ್ಯ ಸಂರಕ್ಷಾಧಿಕಾರಿ ಏಡುಕೊಂಡಲು ಮಾತನಾಡಿ, ಸರ್ಕಾರವು ಪ್ರತಿ ವರ್ಷವೂ ವನಮಹೋತ್ಸವ ಹೆಸರಿನಲ್ಲಿ ಸಸಿಗಳನ್ನು ನೆಡುವ ಗುರಿಯನ್ನು ನೀಡಿದೆ. ಪ್ರತಿ ಸರ್ಕಾರಿ ಕಚೇರಿ ಶಾಲಾ ಕಾಲೇಜು ಸೇರಿದಂತೆ ಸಾರ್ವಜನಿಕರು ಕೂಡ ಸ್ವಂತ ಜಮೀನಿನಲ್ಲಿ ಗಿಡ ನೆಟ್ಟು ಪೋಷಣೆ ಮಾಡಬಹುದಾಗಿದೆ. ಇದಕ್ಕೆ ಸರ್ಕಾರವು ಸಹಾಯ ಧನ ನೀಡುತ್ತದೆ. ಗಿಡಗಳು ಭೂಮಿಯನ್ನು ರಕ್ಷಣೆ ಮಾಡುವ ಜೊತೆಗೆ ನಮಗೆ ಆಮ್ಲಜನಕ ನೀಡುತ್ತವೆ ಎಂದರು.ಜಿಪಂ ಸಿಇಒ ಪದ್ಮ ಬಸವಂತಪ್ಪ, ಹೆಚ್ಚುವರಿ ಎಸ್ಪಿ ಜಗದೀಶ್, ಉಪ ವಿಭಾಗಾಧಿಕಾರಿ ಡಾ.ಮೈತ್ರಿ, ಸಹಾಯಕ ಅರಣ್ಯಾಧಿಕಾರಿ ಸುಮಂತ್, ವಲಯ ಅರಣ್ಯಾಧಿಕಾರಿಗಳಾದ ಪುಷ್ಪಲತಾ, ಶಶಿಕುಮಾರ್, ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್, ಮುಖಂಡರಾದ ಸೀಸಂದ್ರ ಗೋಪಾಲಗೌಡ, ಮೈಲಾಂಡಹಳ್ಳಿ ಮುರಳಿ, ಛತ್ರಕೋಡಿಹಳ್ಳಿ ಮಂಜುನಾಥ್, ಆಫ್ಸರ್, ವೈ.ಶಿವಕುಮಾರ್ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ