ಕನ್ನಡಪ್ರಭ ವಾರ್ತೆ ತುಮಕೂರು
ಮೂಢನಂಬಿಕೆ ಹೆಸರಿನಲ್ಲಿ ಗರ್ಭಿಣಿ, ಬಾಣಂತಿಯರು ಹಾಗೂ ಋತುಮತಿಯಾದ ಹೆಣ್ಣು ಮಕ್ಕಳನ್ನು ಮನೆಯಿಂದ ಹೊರಗೆ ಇರಿಸುವ ಮೂಲಕ ಹೆಣ್ಣು ಮಕ್ಕಳ ಮೇಲೆ ಶೋಷಣೆ ನಡೆಸಲಾಗುತ್ತಿದ್ದು, ಅವರ ಮಾನವ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಇಂತಹ ಅನಿಷ್ಠ ಪದ್ಧತಿಗಳು ಕಂಡು ಬಂದ ತಕ್ಷಣ ಪೊಲೀಸರು ಕಾರ್ಯಪ್ರವೃತ್ತರಾಗಿ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಜಸ್ಟಿಸ್ ಎಲ್.ನಾರಾಯಣಸ್ವಾಮಿ ಸೂಚಿಸಿದರು.ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ವತಿಯಿಂದ ನಗರದ ಬಾಲ ಭವನದಲ್ಲಿ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಂವಾದ ಮತ್ತು ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾನವ ಹಕ್ಕುಗಳ ಸಂರಕ್ಷಣೆಯನ್ನು ಅಧಿಕಾರಿಗಳು ತಳಮಟ್ಟದಿಂದಲೇ ಮಾಡಬೇಕು. ಮೂಢನಂಬಿಕೆಯ ಆಚರಣೆ ಪ್ರಕರಣಗಳು ಕಂಡು ಬಂದ ತಕ್ಷಣ ಗ್ರಾಪಂಯ ಗ್ರಾಮಲೆಕ್ಕಿಗ, ಪಿಡಿಒ, ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆಯರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಪೊಲೀಸರು ತಕ್ಷಣ ಪ್ರಕರಣ ದಾಖಲಿಸಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಹೀಗಾದಲ್ಲಿ ಮಾತ್ರ ಇಂತಹ ಅನಿಷ್ಠ ಪದ್ಧತಿಗಳು ಕೊನೆಗಾಣಲಿವೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.ಎಲ್ಲಿಯವರೆಗೆ ಪೋಷಕರ ವಿರುದ್ಧ ಕಾನೂನು ಕ್ರಮ ಆಗುವುದಿಲ್ಲವೋ ಅಲ್ಲಿಯವರೆಗೆ ಇಂತಹ ಮೂಢನಂಬಿಕೆ ಆಚರಣೆಗೆ ಕೊನೆ ಇರುವುದಿಲ್ಲ. ಪೊಲೀಸರು ಎಫ್‌ಐಆರ್ ದಾಖಲಿಸದಿದ್ದಲ್ಲಿ ಸಂಬಂಧಪಟ್ಟ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಶಿಕ್ಷಣ ಇಲಾಖೆಗಳು ಮಕ್ಕಳಿಗೆ ಅನಿಷ್ಠ ಪದ್ಧತಿ ಆಚರಣೆ ಬಗ್ಗೆ ಜಾಗೃತಿ ಮೂಡಿಸಿ, ಇಂತಹ ಪ್ರಕರಣ ಕಂಡು ಬಂದಲ್ಲಿ ತಕ್ಷಣ ಶಿಕ್ಷಕರಿಗೆ ಮಾಹಿತಿ ನೀಡುವ ಬಗ್ಗೆ ತಿಳಿ ಹೇಳಬೇಕು ಎಂದರು.ಸರ್ಕಾರಿ ನೌಕರರೆಲ್ಲರೂ ಸಹ ದೌರ್ಜನ್ಯಕ್ಕೊಳಗಾಗುವ ಹೆಣ್ಣು ಮಕ್ಕಳ ರಕ್ಷಣೆಗಾರರಾಗಬೇಕು. ಇಂತಹ ಪ್ರಕರಣ ಮರುಕಳಿಸಿದಲ್ಲಿ ಕೇಂದ್ರ ನಾಗರಿಕ ಸೇವೆ ಅಧಿಕಾರಿಗಳ ವಿರುದ್ಧ ಸೆಕ್ಷನ್ ೩೦೨, ೩೦೪ರಡಿ ಪ್ರಕರಣ ದಾಖಲಿಸಿ, ಕೇಂದ್ರ ಸರ್ಕಾರಕ್ಕೆ ಕ್ರಮಕ್ಕೆ ಆಗ್ರಹಿಸಿ ಆಯೋಗದಿಂದ ಪತ್ರ ಬರೆಯಲಾಗುವುದು ಎಂದರು.
ನಂತರ ಮಾತನಾಡಿದ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಜಸ್ಟಿಸ್ ಟಿ. ಶಾಮ್‌ಭಟ್, ಇದುವರೆಗೂ ಇತ್ಯರ್ಥವಾಗದೇ ಇರುವ ದೂರುಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ಪರಿಹರಿಸುವುದು ಮತ್ತು ಕೆಲವು ಅನಿಷ್ಠ ಪದ್ದತಿಗಳನ್ನು ಹೋಗಲಾಡಿಸಲು ಜಿಲ್ಲಾಡಳಿತಕ್ಕೆ ಶಕ್ತಿ ತುಂಬುವ ಕೆಲಸವೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ದೂರುದಾರರಿಗೆ ಸರಿಯಾಗಿ ಸ್ಪಂದಿಸಿ ಅವರಿಗೆ ನ್ಯಾಯ ದೊರಕಿಸುವಲ್ಲಿ ಅಧಿಕಾರಿಗಳು ಶ್ರಮಿಸಬೇಕು ಎಂದರು.ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಜಸ್ಟಿಸ್ ಎಸ್.ಕೆ. ವಂಟಿಗೋಡಿ ಮಾತನಾಡಿ, ಭೂ ದಾಖಲಾತಿಗಳಿಗಾಗಿ ಸಾರ್ವಜನಿಕರನ್ನು ವಿನಾಃ ಕಾರಣ ಸರ್ಕಾರಿ ಕಚೇರಿಗಳಿಗೆ ಅಲೆದಾಡಿಸುವುದೂ ಸಹ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಸರ್ಕಾರಿ ಅಧಿಕಾರಿ/ನೌಕರರು ಕಚೇರಿಗೆ ಬರುವ ಸಾರ್ವಜನಿಕರನ್ನು ಸಹಾನುಭೂತಿಯಿಂದ ಮಾತನಾಡಿಸಬೇಕು ಎಂದರು.
ಪೊಲೀಸ್ ಮತ್ತು ಕಂದಾಯ ಇಲಾಖೆಗೆ ಸಂಬಂಧಿಸಿದ ದೂರುಗಳು ಹೆಚ್ಚಾಗಿ ಬರುತ್ತಿದ್ದು. ಸಂಬಂಧಪಟ್ಟ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿ ವರದಿಗಳನ್ನು ಸಲ್ಲಿಸಬೇಕು. ಸಾಧ್ಯವಾದಷ್ಟು ಪ್ರಕರಣಗಳನ್ನು ಸ್ಥಳದಲ್ಲೇ ಪರಿಹರಿಸಲು ಪ್ರಯತ್ನಿಸಬೇಕು. ತಡ ಮಾಡಿದಷ್ಟು ಹೆಚ್ಚು ಮಾನವ ಹಕ್ಕುಗಳನ್ನು ಕಸಿದುಕೊಂಡ ಹಾಗೆಯೇ ಎಂದರು.ಆಯೋಗದ ಉಪ ಕಾರ್ಯದರ್ಶಿ ದಿನೇಶ್ ಸಂಪತ್ ರಾಜ್ ಮಾತನಾಡಿ, ಶೋಷಣೆ ರಹಿತ ಸಮಾಜ, ನಾಗರಿಕರಿಗೆ ಮುಕ್ತ ಅವಕಾಶ, ಗೌರವ ಸಿಗಬೇಕೆನ್ನುವುದು ಪ್ರಜಾಪ್ರಭುತ್ವದ ಆಶಯವಾಗಿದೆ. ಹಕ್ಕುಗಳು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಾಗರಿಕ ಸೇವೆ ಸಲ್ಲಿಸುವ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಅಪರ ಜಿಲ್ಲಾಧಿಕಾರಿ ಶಿವಾನಂದ್ ಕರಾಳೆ, ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ, ಉಪಸ್ಥಿತರಿದ್ದರು.ಅಸ್ಪೃಶ್ಯತೆ ಕಂಡುಬಂದಲ್ಲಿ ಕಠಿಣ ಕ್ರಮಆಯೋಗದಲ್ಲಿ ದೂರು ದಾಖಲಿಸಿರುವ ದೂರುದಾರರಿಗೆ ಅನುಕೂಲ ಮಾಡಿಕೊಡಲು ಪ್ರತಿ ಜಿಲ್ಲೆಯಲ್ಲೂ ಸಹ ಈ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ದೂರುದಾರರೊಂದಿಗೆ ನೇರವಾಗಿ ಚರ್ಚಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸಿ, ಅವುಗಳನ್ನು ಪರಿಹರಿಸುವುದೇ ಆಯೋಗದ ಉದ್ದೇಶವಾಗಿದೆ. ಭಾರತ ಸಂವಿಧಾನ ಜಾರಿಯಾಗಿ ಇಷ್ಟು ವರ್ಷಗಳ ನಂತರವೂ ಆನೇಕ ಭಾಗಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದು ಅಧಿಕಾರಿಗಳ ವಿಫಲತೆಯನ್ನು ತೋರಿಸುತ್ತದೆ. ಅನಾಗರಿಕತೆಯ ಪರಮಾವಧಿಯೇ ಅಸ್ಪೃಶ್ಯತೆ.ಅಸ್ಪೃಶ್ಯತೆ ಪ್ರಕರಣಗಳು ಎಲ್ಲೇ ಕಂಡುಬಂದರೂ ಅಂತ ಕೃತ್ಯಗಳನ್ನು ನಡೆಸುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಕೈಗೊಳ್ಳದಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಮಾನವ ಹಕ್ಕುಗಳ ಆಯೋಗವು ಸ್ವತಃ ಪ್ರಕರಣವನ್ನು ದಾಖಲಿಸುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.