ಮಾನವ ಹಕ್ಕುಗಳ ರಕ್ಷಣೆ ಸಂವಿಧಾನದ ಮೂಲ ಆಶಯ: ಸಚಿವ ಎಚ್ಕೆಪಿ

KannadaprabhaNewsNetwork |  
Published : Jul 22, 2025, 12:15 AM IST
ಪೋಟೋ ಇದೆ. | Kannada Prabha

ಸಾರಾಂಶ

ಮಾನವ ಹಕ್ಕುಗಳ ಸಂರಕ್ಷಣೆ ಎಂಬುದು ಅತ್ಯಂತ ಗಂಭೀರವಾದ ಚಿಂತನೆಯಾಗಿದ್ದು, ಇದು ನಮ್ಮ ಸಂವಿಧಾನದ ಮೂಲ ಆಶಯವಾಗಿದೆ. ಇದನ್ನು ಸಾಧಿಸಿದಾಗ ಮಾತ್ರ ಪ್ರಜಾಪ್ರಭುತ್ವದ ಆಶಯಗಳು ನಿಜವಾಗುತ್ತವೆ ಎಂದು ಎಂದು ಕಾನೂನು, ಪ್ರವಾಸೋದ್ಯಮ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದ್ದಾರೆ.

ಗದಗ: ಮಾನವ ಹಕ್ಕುಗಳ ಸಂರಕ್ಷಣೆ ಎಂಬುದು ಅತ್ಯಂತ ಗಂಭೀರವಾದ ಚಿಂತನೆಯಾಗಿದ್ದು, ಇದು ನಮ್ಮ ಸಂವಿಧಾನದ ಮೂಲ ಆಶಯವಾಗಿದೆ. ಇದನ್ನು ಸಾಧಿಸಿದಾಗ ಮಾತ್ರ ಪ್ರಜಾಪ್ರಭುತ್ವದ ಆಶಯಗಳು ನಿಜವಾಗುತ್ತವೆ ಎಂದು ಕಾನೂನು, ಪ್ರವಾಸೋದ್ಯಮ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದ್ದಾರೆ.

ಸೋಮವಾರ ಇಲ್ಲಿನ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ "ಕವಲು ದಾರಿಯಲ್ಲಿ ಮಾನವ ಹಕ್ಕುಗಳು ಭಾರತ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳು " ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ನಾಗರಿಕ ಸಮಾಜ ನಿರ್ಮಾಣದಲ್ಲಿ ಮಾನವ ಹಕ್ಕುಗಳು ಅತ್ಯಂತ ಮುಖ್ಯ ಪಾತ್ರ ವಹಿಸುತ್ತವೆ. ಹಾಗಾಗಿ ಮಾನವ ಹಕ್ಕುಗಳ ಕುರಿತಂತೆ 1993ರಲ್ಲಿ ಕಾನೂನು ರಚಿಸಲಾಯಿತು. ಆದರೆ, ಅದನ್ನು ಹಿಂದಿನ ಸರ್ಕಾರಗಳು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತಂದಿರಲಿಲ್ಲ, ನಮ್ಮ ಸರ್ಕಾರ ಆ ಕಾನೂನನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಮೊದಲು ಮಾನವ ಹಕ್ಕುಗಳ ವಿಚಾರಣಾ ಕೋರ್ಟ್ ಅನ್ನು ಸ್ಥಾಪಿಸಲಾಗಿದೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಮಾನವ ಹಕ್ಕುಗಳ ರಕ್ಷಣೆಯಲ್ಲಿ ದೇಶದಲ್ಲಿಯೇ ಒಂದು ದೊಡ್ಡ ಮತ್ತು ದಿಟ್ಟ ಕ್ರಮವಾಗಿದೆ ಎಂದು ಸಮರ್ಥಿಸಿಕೊಂಡರು.

ನಮ್ಮ ಸರ್ಕಾರದ ಈ ಮಹತ್ವದ ಸಾಧನೆಯ ಮೂಲಕ ಮಾನವ ಹಕ್ಕುಗಳನ್ನು ಗೌರವಿಸಿ, ಉಳಿಸಲಾಗಿದೆ. ಇದು ಜನರ ಜೀವನ ಮಟ್ಟ ಸುಧಾರಣೆಗೆ ವೇದಿಕೆಯಾಗಿದೆ ಎಂದರು.ಗ್ಯಾರಂಟಿಗಳೂ ಹಕ್ಕು: ರಾಜ್ಯದಲ್ಲಿ ಜಾರಿಯಲ್ಲಿರುವ ಐದು ಗ್ಯಾರಂಟಿ ಯೋಜನೆಗಳನ್ನು ಮಾನವ ಹಕ್ಕುಗಳನ್ನಾಗಿ ಪರಿಗಣಿಸಲು ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ. ಈ ಕುರಿತು ಮುಖ್ಯಮಂತ್ರಿಗಳು ಕೂಡಾ ಆಸಕ್ತಿಯನ್ನು ಹೊಂದಿದ್ದಾರೆ ಎಂದು ಸಚಿವ ಎಚ್.ಕೆ.ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ಡಿಜಿಟಲ್ ಯುಗದ ಸವಾಲುಗಳು ಮತ್ತು ಭವಿಷ್ಯದ ದೃಷ್ಟಿಯಿಂದ ಡಿಜಿಟಲ್ ಹಕ್ಕುಗಳು ಮತ್ತು ಕೃತಕ ಬುದ್ಧಿಮತ್ತೆ ಮೂಲಕ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಗಳ ಬಗ್ಗೆಯೂ ಚರ್ಚೆಯಾಗಬೇಕಿದೆ. ವಿದೇಶಗಳಲ್ಲಿ 5 ನೇ ಮತ್ತು 6ನೇ ಜನರೇಶನ್ ಮಾನವ ಹಕ್ಕುಗಳ ಬಗ್ಗೆ ಚರ್ಚೆಯಾಗುತ್ತಿದ್ದರೆ, ನಾವು ಇಂದಿಗೂ 1ನೇ ಮತ್ತು 2ನೇ ಜನರೇಶನ್ ಮಾನವ ಹಕ್ಕುಗಳ ಕುರಿತು ಈಗ ಮಾತನಾಡುತ್ತಿದ್ದೇವೆ ಎಂದು ಸಚಿವ ಎಚ್.ಕೆ.ಪಾಟೀಲ ವಿಷಾದಿಸಿದರು.

ವಿಳಂಬ ತೀರ್ಪೂ ಉಲ್ಲಂಘನೆ?: ನ್ಯಾಯಾಂಗದಲ್ಲಿ 30-40 ವರ್ಷಗಳ ಕಾಲ ತೀರ್ಪು ಬರದೇ ಇದ್ದರೆ ಅದು ಮಾನವ ಹಕ್ಕುಗಳ ಉಲ್ಲಂಘನೆಯಲ್ಲವೇ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಮತ್ತು ದೇಶದಲ್ಲಿ ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿಲ್ಲವೇ ಯಾವುದೇ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಯಾಕೆ ದಾಖಲಾಗುತ್ತಿಲ್ಲ ಎಂಬುದನ್ನು ಗಂಭೀರವಾಗಿ ಚಿಂತಿಸಬೇಕಿದೆ ಎಂದರು.ಬೆಳಗ್ಗೆ 10.30ಕ್ಕೆ ಪ್ರಾರಂಭವಾಗಬೇಕಿದ್ದ ಕಾರ್ಯಕ್ರಮವು ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಯಿತು. ನಿವೃತ್ತ ನ್ಯಾಯಾಧೀಶರು ಮತ್ತು ಕುಲಪತಿಗಳಂತಹ ಗಣ್ಯರು ಇದ್ದಾಗಲೂ ಕಾರ್ಯಕ್ರಮ ಅತ್ಯಂತ ವಿಳಂಬವಾಗಿದ್ದು ಚರ್ಚೆಗೆ ಗ್ರಾಸವಾಯಿತು.

PREV

Latest Stories

ದಾವಣಗೆರೆಯಲ್ಲಿ ವೀರಶೈವ ಪಂಚಪೀಠಗಳ ಸಮಾಗಮ
ಹವ್ಯಕ ಪ್ರತಿಷ್ಠಾನ ವಾರ್ಷಿಕೋತ್ಸವ ಸಂಪನ್ನ
5 ಪಾಲಿಕೆ ರಚನೆಗೆ ಆಕ್ಷೇಪಣೆ ಸಲ್ಲಿಸಲು ಹಕ್ಕಿದೆ: ಡಿಕೆಶಿ