ಕನ್ನಡಪ್ರಭ ವಾರ್ತೆ ಬೆಳಗಾವಿ
ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಾರಿಗೆ ಬಸ್ ಸಮಸ್ಯೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಿಲ್ಲಾ ಘಟಕದ ವತಿಯಿಂದ ನಗರದ ಕೇಂದ್ರ ಬಸ್ ನಿಲ್ದಾಣ ಆವರಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿ ಬೆಳಗಾವಿ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಎಬಿವಿಪಿ ನೇತೃತ್ವದಲ್ಲಿ ಭರತೇಶ್ ಕಾಲೇಜ್ ದಿಂದ ಪಾದಯಾತ್ರೆ ಮೂಲಕ ಕೇಂದ್ರೀಯ ಬಸ್ ನಿಲ್ದಾಣಕ್ಕೆ ಆಗಮಿಸಿದ ವಿದ್ಯಾರ್ಥಿಗಳು ಬಸ್ ನಿಲ್ದಾಣದೊಳಗೆ ನುಗ್ಗಲು ಯತ್ನಸಿದರು. ಈ ವೇಳೆ ಪ್ರವೇಶ ದ್ವಾರದಲ್ಲಿಯೇ ತಡೆದ ಪೊಲೀಸರು, ಅಲ್ಲಿಯೇ ಪ್ರತಿಭಟನೆ ಮಾಡಲು ಅವಕಾಶಕೊಟ್ಟರು. ಈ ವಿಚಾರವಾಗಿ ಕೆಲಹೊತ್ತು ಪೊಲೀಸರೊಂದಿಗೆ ವಾಗ್ವಾದವು ನಡೆಯಿತ್ತು. ಬಳಿಕ ಮನವಿ ಸ್ವೀಕರಿಸುವುದಕ್ಕೆ ಡಿಟಿಒ ಡಿ.ಎಚ್.ನಾಯ್ಕ ಆಗಮಿಸಿದರಾದರೂ, ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳೇ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದ ವಿದ್ಯಾರ್ಥಿಗಳ, ಅಲ್ಲಿಯೇ ಧರಣಿ ಕುಳಿತುಕೊಂಡರು.ನಿಯಂತ್ರಾಧಿಕಾರಿಗಳು ಬೇರೆ ಕಡೆ ಇದ್ದಾರೆ, ಬರುವುದು ವಿಳಂಬವಾಗುತ್ತದೆಂದು ಪೊಲೀಸರು ಸಮಜಾಯಿಸಿ ನೀಡಿದರು. ಕೇಳದ ಪ್ರತಿಭಟನಕಾರರು ಬರುವವರೆಗೂ ಕುಳಿತುಕೊಂಡೆ ಇರುತ್ತೇವೆಂದು ಹಠ ಹಿಡಿದರು.
ಬಳಿಕ ಸ್ಥಳಕ್ಕಾಗಮಿಸಿದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ ಹುದ್ದಾರಗೆ ಮನವಿ ಸಲ್ಲಿಸುವ ಮುಂಚೆ ತಮ್ಮ ಅಳಲು ಹೇಳಿಕೊಳ್ಳುತ್ತಿದ್ದ ವೇಳೆ, ಹುದ್ದಾರ ಮತ್ತು ಎಬಿವಿಪಿ ಮುಖಂಡರ ಮಧ್ಯೆ ಸ್ವಲ್ಪ ವಾಗ್ವಾದ ನಡೆಯಿತು. ಬಳಿಕ ಹಂತ ಹಂತವಾಗಿ ಬೇಡಿಕೆ ಇರುವ ಕಡೆ ಬಸ್ ಬಿಡುತ್ತೇವೆಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ ಪಡೆಯಲಾಯಿತು.ಬೆಳಗಾವಿ ನಗಕ್ಕೆ ಹೊಂದಿಕೊಂಡಿರುವ ಬಸವನಕುಡಚಿ, ವಂಟಮುರಿ, ಕಣಬರ್ಗಿ, ಖಾನಾಪುರ ತಾಲೂಕಿನ ಹಲಗಾ, ಸಂಕೇಶ್ವರ, ಮುತ್ನಾಳ, ಬೀಡಿ, ಗಣೇಶಪುರ ಸೇರಿದಂತೆ ಅನೇಕ ಹಲ್ಳಿಗಳ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜ್‌ಗಳಿಗೆ ಬಂದು ಹೋಗಲು ತೊಂದರೆಯಾಗುತ್ತಿವೆ. ಕೆಲವೊಂದು ಊರುಗಳಿಗೆ ಸರಿಯಾದ ಸಮಯಕ್ಕೆ ಬಸ್‌ಗಳು ಬರುತ್ತಿಲ್ಲ. ಕೆಲವೊಂದು ಹಳ್ಳಿಗಳ ಮೂಲಕ ಹಾದು ಹೋಗುವ ಬಸ್‌ಗಳವರು ವಿದ್ಯಾರ್ಥಿಗಳನ್ನು ಕಂಡ ತಕ್ಷಣ ಬಸ್ ನಿಲ್ಲಿಸುತ್ತಿಲ್ಲ. ಇದರಿಂದ ತರಗತಿಗಳು ತಪ್ಪುತ್ತಿವೆ. ಶಿಕ್ಷಣದಿಂದ ವಂಚಿತರಾಗುವಂತಾಗಿದ್ದು, ಶಾಲಾ-ಕಾಲೇಜಗೆ ಬರುವ ಮತ್ತು ಮರಳಿ ಮನೆಗೆ ಹೋಗುವ ಸಮಯಕ್ಕೆ ಸರಿಯಾಗಿ ಬಸ್‌ಗಳನ್ನು ಬಿಡಬೇಕು ಎಂದು ಒತ್ತಾಯಿಸಿದರು.ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಬಸ್‌ನಲ್ಲಿ ಜಾಗವೇ ಇಲ್ಲದಂತಾಗಿದ್ದು, ವಿದ್ಯಾರ್ಥಿಗಳಿಗಾಗಿಯೇ ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸಬೇಕು. ವಿದ್ಯಾರ್ಥಿನಿಯರಂತೆ ವಿದ್ಯಾರ್ಥಿಗಳಿಗೂ ಉಚಿತ ಬಸ್‌ಪಾಸ್ ವ್ಯವಸ್ಥೆ ಕಲ್ಪಿಸಿಕೊಡಬೇಕು. ಕೆಲವೊಂದು ಬಸ್ ಚಾಲಕರು ಮತ್ತು ನಿರ್ವಾಹಕರು ವಿದ್ಯಾರ್ಥಿಗಳೊಂದಿಗೆ ದುವರ್ತನೆ ತೋರುತ್ತಿದ್ದಾರೆ. ಸರಿಯಾಗಿ ಮಾತನಾಡುವುದಿಲ್ಲ ಎಂದು ಪ್ರತಿಭಟನೆಯಲ್ಲಿದ್ದ ಕೆಲವೊಂದು ವಿದ್ಯಾರ್ಥಿಗಳು ದೂರಿದರು.ಸಾಯಿ ಬೋಸಲೆ, ಯಲ್ಲಪ್ಪ ಬೊಮ್ಮನಳ್ಳಿ, ಪ್ರಥಮ ಪಾಟೀಲ, ದರ್ಶಣ ಮಾಕೆನ್ನವರ, ನಿಂಗರಾಜ ಪೂಜೇರಿ, ದರ್ಶನ ವಡ್‌ರಳ್ಳಿ, ಕಲ್ಲಪ್ಪ ಗರಿಇಯಾಲ, ಪ್ರಜ್ವಲ ಅಣ್ಣಿಗೇರಿ, ಕುಶಾಲ ಗೋಡಗೇರಿ ಇತರರಿದ್ದರು.