ಕನ್ನಡಪ್ರಭ ವಾರ್ತೆ ಬೀದರ್
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿರುವುದು ಆತುರದ ಹಾಗೂ ಅವೈಜ್ಞಾನಿಕವಾಗಿರುತ್ತದೆ ಎಂದು ಆರೋಪಿಸಿ ಶುಕ್ರವಾರ ಕರ್ನಾಟಕ ಕ್ರೈಸ್ತರ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ನಗರದ ಡಾ. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನೆ ಮಾಡುವ ಮೂಲಕ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಬರೆದ ಮನವಿ ಸಲ್ಲಿಸಲಾಯಿತು.
ಈ ಕುರಿತು ರಾಷ್ಟ್ರಪತಿಗಳಿಗೆ ಬರೆದ ಮನವಿಯಲ್ಲಿ ಮೂಡಾ ವಿಚಾರದಲ್ಲಿ ಮುಖ್ಯಮಂತ್ರಿಗಳ ಪಾತ್ರವೇನು ಇರುವುದಿಲ್ಲ ಮತ್ತು ಕರ್ನಾಟಕದ 6.82 ಕೋಟಿ ಕನ್ನಡಿಗರು ಆಯ್ಕೆ ಮಾಡಿರುವಂಥ ಸರ್ಕಾರದ ಮುಖ್ಯಮಂತ್ರಿ ವಿರುದ್ಧ ತರಾತುರಿಯಲ್ಲಿ ಯಾವುದೋ ಖಾಸಗಿ ದೂರಿನನ್ವಯ 24 ಗಂಟೆಗಳ ಒಳಗಾಗಿ ಶೋಕಾಸ್ ನೋಟಿಸ್ ನೀಡಿ, ಎಲ್ಲಾ ಕಾನೂನು ಹಾಗೂ ರಾಜಭವನದ ಘನತೆಗೆ ದಕ್ಕೆಯನ್ನುಂಟು ಮಾಡಿದ್ದಾರೆ ಎಂದು ಆರೋಪಿಸಿದರು.ಮುಡಾ ಪ್ರಕರಣದ ಮುಂಚೆಯೂ ಪ್ರಾಸಿಕ್ಯೂಶನ್ ಅನುಮತಿಗಾಗಿ ಸುಮಾರು ವರ್ಷಗಳಿಂದ ಬಾಕಿಯಿರುವ ದೂರುಗಳನ್ನು ಪರಿಗಣಿಸದೆ, ಕೇವಲ ಖಾಸಗಿ ದೂರಿನ ಮೇಲೆ 24 ಗಂಟೆಯ ಒಳಗೆ ಶೋಕಾಸ್ ನೋಟಿಸ್ ನೀಡಿರುವುದು ಯಾತಕ್ಕೆ ಎಂದು ಪ್ರಶ್ನಿಸಿ ದೂರುದಾರರ ಮೇಲೆ ಸರ್ವೋಚ್ಛ ನ್ಯಾಯಾಲಯವು 25 ಲಕ್ಷ ರು. ದಂಡ ಹಾಕಿರುತ್ತದೆ. ಟಿ.ಜೆ ಅಬ್ರಹಾಂ ಮೇಲೆ ಈಗಾಗಲೇ ಬ್ಲಾಕ್ ಮೇಲ್ ಮಾಡಿರುವ ಪ್ರಕರಣ ಸಹ ಇರುತ್ತವೆ. ಇಂಥ ಖಾಸಗಿ ವ್ಯಕ್ತಿಯ ದೂರಿನ ಮೇಲೆ ಆತುರದ ಕ್ರಮ ತೆಗೆದುಕೊಂಡಿರುವ ರಾಜ್ಯಪಾಲರು ಏಕಪಕ್ಷೀಯ ಹಾಗೂ ದ್ವೇಷದ ರಾಜಕಾರಣ ಎನ್ನುವಂತಿದೆ. ಈ ಕ್ರಮದಿಂದ ಕರ್ನಾಟಕದ 6.82 ಕೋಟಿ ಜನರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರಾಜೇಶ ಜ್ಯೋತಿ, ಸಂಸ್ಥಾಪಕರಾದ ಭಾಸ್ಕರ್ ಬಾಬು ಎಂ. ಪಾತರಪಳ್ಳಿ , ಜಿಲ್ಲಾ ಕಾರ್ಯಾಧ್ಯಕ್ಷ ಶ್ಯಾಮಸನ್ ಹಿಪ್ಪಳಗಾಂವ್, ಜಿಲ್ಲಾ ಉಪಾಧ್ಯಕ್ಷ ನರಸಿಂಗ ಮಿರ್ಜಾಪೂರ, ಪ್ರಕಾಶ ಕೋಟೆ, ಜಿಲ್ಲಾ ಪ್ರ.ಕಾರ್ಯದರ್ಶಿ ಸುನೀಲ್ ಹಿರೇಮನಿ ಹಾಗೂ ಸಾಲೊಮನ್ ಡಾಕುಳಕಿಕರ್, ಮಹಿಳಾ ಅಧ್ಯಕ್ಷೆ ಸುಕಿರ್ತಾ ವಗ್ಗೆ, ಸಂತೋಷಿ ಎಸ್. ರಾಜಕುಮಾರ ಸಿ, ಕೆಎಸ್. ಶಾಂತಕುಮಾರ, ದಶರಥ ಮೀಸೆ, ಶಿವಕುಮಾರ ಪಾತರಪಳ್ಳಿ, ಅರ್ಜುನ ಅಲ್ಲಾಪೂರ, ಮಾರುತಿ ಜ್ಯೋತಿ, ಇಮ್ಯೂನುವೆಲ್ ಮಂದಕನಳ್ಳಿ ಮತ್ತಿತರರು ಇದ್ದರು.