27ರಂದು ಮೆಸ್ಕಾಂ ಕಿರುಕುಳ ಖಂಡಿಸಿ ಪ್ರತಿಭಟನೆ

KannadaprabhaNewsNetwork | Published : Nov 23, 2023 1:45 AM

ಸಾರಾಂಶ

ಪ್ರತ್ಯೇಕ ಮೀಟರ್ ಹಾಕಿಸಲು ಪ್ರತಿ ಅಶ್ವಶಕ್ತಿಗೆ ₹10 ಸಾವಿರಗಳಷ್ಟು ದುಬಾರಿ ವೆಚ್ಚ ತಗುಲಲಿದೆ. ಅಲ್ಲದೇ, 10 ತಿಂಗಳ ಅವಧಿಗೆ ಅನಗತ್ಯವಾಗಿ ಕನಿಷ್ಠ ಶುಲ್ಕ ತರಬೇಕಾಗಿದೆ. ಮಲೆನಾಡಿನ ವಾಣಿಜ್ಯ ಬೆಳೆ ಆಗಿರುವ ಅಡಕೆಯಿಂದ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ನೂರಾರು ಕೋಟಿ ಆದಾಯವಿದೆ. ಲಕ್ಷಾಂತರ ಮಂದಿ ದುಡಿಯುವ ಕೈಗಳಿಗೆ ಉದ್ಯೋಗ ಸೃಷ್ಟಿಯಾಗುತ್ತಿದೆ. ಹೀಗಿರುವಾಗ ಅವಮಾನ ಆಗುವಂತೆ ನಡೆದುಕೊಳ್ಳುತ್ತಿರುವ ಮೆಸ್ಕಾಂ ವಿಧಿಸುವ ದಂಡವನ್ನು ರೈತರು ಕಟ್ಟಬಾರದು ಎಂದರು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಎಲೆಚುಕ್ಕಿ ರೋಗ ಮುಂತಾದ ಸಮಸ್ಯೆಗಳಿಂದ ಬಳಲಿರುವ ಅಡಕೆ ಬೆಳೆಗಾರರಿಗೆ ಮನೆ ಬಳಕೆ ಸಂಪರ್ಕವನ್ನು ಬಳಸಿ, ಅಡಕೆ ಸುಲಿಯುವ ಮಿಷನ್ ಬಳಸದಂತೆ ಮೆಸ್ಕಾಂ ಕಿರುಕುಳ ನೀಡುತ್ತಿದೆ. ಈ ನೀತಿ ಖಂಡಿಸಿ ಮಂಡಲ ಬಿಜೆಪಿ ವತಿಯಿಂದ ನ.27ರಂದು ಪಟ್ಟಣದಲ್ಲಿ ಅಡಕೆ ಬೆಳೆಗಾರರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳದಿದ್ದಲ್ಲಿ ಮೆಸ್ಕಾಂ ಕಚೇರಿಗೆ ಮುತ್ತಿಗೆಯನ್ನೂ ಹಾಕುವುದಾಗಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರತ್ಯೇಕ ಮೀಟರ್ ಹಾಕಿಸಲು ಪ್ರತಿ ಅಶ್ವಶಕ್ತಿಗೆ ₹10 ಸಾವಿರಗಳಷ್ಟು ದುಬಾರಿ ವೆಚ್ಚ ತಗುಲಲಿದೆ. ಅಲ್ಲದೇ, 10 ತಿಂಗಳ ಅವಧಿಗೆ ಅನಗತ್ಯವಾಗಿ ಕನಿಷ್ಠ ಶುಲ್ಕ ತರಬೇಕಾಗಿದೆ. ಮಲೆನಾಡಿನ ವಾಣಿಜ್ಯ ಬೆಳೆ ಆಗಿರುವ ಅಡಕೆಯಿಂದ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ನೂರಾರು ಕೋಟಿ ಆದಾಯವಿದೆ. ಲಕ್ಷಾಂತರ ಮಂದಿ ದುಡಿಯುವ ಕೈಗಳಿಗೆ ಉದ್ಯೋಗ ಸೃಷ್ಟಿಯಾಗುತ್ತಿದೆ. ಹೀಗಿರುವಾಗ ಅವಮಾನ ಆಗುವಂತೆ ನಡೆದುಕೊಳ್ಳುತ್ತಿರುವ ಮೆಸ್ಕಾಂ ವಿಧಿಸುವ ದಂಡವನ್ನು ರೈತರು ಕಟ್ಟಬಾರದು ಎಂದರು.

ಕಲ್ಲಿದ್ದಲು ಕಂಪೆನಿಗಳಿಗೆ ಕೋಟ್ಯಂತರ ರು. ಬಾಕಿ ಹಣವನ್ನೂ ಪಾವತಿಸದ ಕಾರಣ, ಈ ವರ್ಷ ವಿದ್ಯುತ್ ಸಮಸ್ಯೆ ಬಿಗಡಾಯಿಸಲಿದೆ. ಕೈಗಾರಿಕಾ ಉದ್ದಿಮೆಗಳು ನಿಲುಗಡೆ ಆಗುವ ಆತಂಕ ಎದುರಾಗಿದೆ. ಗ್ಯಾರಂಟಿ ಯೋಜನೆಗಾಗಿ ರೈತರ ಹಿತವನ್ನು ಬಲಿ ಕೊಟ್ಟಿರುವ ರಾಜ್ಯ ಸರ್ಕಾರ ವಿದ್ಯುತ್ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದರು.

ಗ್ಯಾರಂಟಿ ಕಾರ್ಯಕ್ರಮಗಳಿಂದಾಗಿ ಅಭಿವೃದ್ಧಿ ಯೋಜನೆಗಳು ನನೆಗುದಿಗೆ ಬಿದ್ದಿವೆ. ಗ್ಯಾರಂಟಿ ಪ್ರಚಾರದ ಬಗ್ಗೆಯೇ ನಿರತವಾಗಿರುವ ರಾಜ್ಯ ಸರ್ಕಾರಕ್ಕೆ ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಸಂಬಳ ನೀಡುವುದಕ್ಕೂ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಅಧಿಕಾರಕ್ಕೆ ಬಂದು ಆರೇಳು ತಿಂಗಳು ಕಳೆದಿದ್ದರೂ ಈವರೆಗೂ ಸರ್ಕಾರ ಟೇಕಾಫ್ ಆಗಿಲ್ಲ ಎಂದೂ ದೂರಿದರು.

ಕಾಂತರಾಜ ವರದಿ ಅವೈಜ್ಞಾನಿಕ:

ಕಾಂತರಾಜ ವರದಿಗೆ ಸಂಬಂಧಿಸಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಾಸಕರು, 8 ವರ್ಷಗಳ ಹಿಂದೆ ನಡೆಸಿರುವ ಕಾಂತರಾಜ ವರದಿ ಅವೈಜ್ಞಾನಿಕವಾಗಿದೆ. ಸದರಿ ವರದಿಯನ್ನು ಮಂಡಿಸುವುದು ಸರಿಯಲ್ಲ. ಈ ಅವಧಿಯಲ್ಲಿ ಸಾಮಾಜಿಕವಾಗಿ ಸಾಕಷ್ಟು ಬದಲಾವಣೆ ಕೂಡ ಆಗಿದೆ. ಆದ್ದರಿಂದ ಹೊಸದಾಗಿ ಸರ್ವೆ ನಡೆಸಿರುವುದು ಸೂಕ್ತ ಎಂದೂ ಹೇಳಿದರು.

ಮಂಡಲ ಬಿಜೆಪಿ ಅಧ್ಯಕ್ಷ ರಾಘವೇಂದ್ರ ನಾಯಕ್, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆದ್ದೂರು ನವೀನ್ ಮತ್ತು ಮುಖಂಡರಾದ ಬೇಗುವಳ್ಳಿ ಸತೀಶ್ ಇದ್ದರು.

- - - -22ಟಿಟಿಎಚ್‌01:

ತೀರ್ಥಹಳ್ಳಿಯಲ್ಲಿ ಬುಧವಾರ ಶಾಸಕ ಆರಗ ಜ್ಞಾನೇಂದ್ರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Share this article