ಹಾವೇರಿ: ಬಿಸಿಯೂಟ ಯೋಜನೆ ಖಾಸಗೀಕರಣದ ಹುನ್ನಾರ ಖಂಡಿಸಿ, ಬಿಸಿಯೂಟ ತಯಾರಕರಿಗೆ ಸೇವಾ ಭದ್ರತೆ ಒದಗಿಸುವುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬಿಸಿಯೂಟ ಕಾರ್ಯಕರ್ತೆಯರು ಜಿಲ್ಲಾಡಳಿತ ಭವನದ ಎದುರು ಶುಕ್ರವಾರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದರು.
ಈ ವೇಳೆ ಸಂಘಟನೆಯ ರಾಜ್ಯಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಸಿಯೂಟ ತಯಾರಕರಿಗೆ ₹ 6 ಸಾವಿರ ವೇತನ ನೀಡಲಾಗುವುದು ಎಂದು ಬೆಳಗಾವಿ ಜಿಲ್ಲೆ ಖಾನಾಪುರದಲ್ಲಿ ನಡೆದ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರು 6ನೇ ಗ್ಯಾರಂಟಿ ಘೋಷಣೆ ಮಾಡಿದ್ದರು. ಈ ಯೋಜನೆಯನ್ನು ಕೂಡಲೇ ಜಾರಿಗೊಳಿಸಬೇಕು. ಕಳೆದ ಫೆಬ್ರುವರಿ 17ರಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಸಿಯೂಟ ತಯಾರಕರಿಗೆ 2023-24ರ ಬಜೆಟ್‌ನಲ್ಲಿ ₹1 ಸಾವಿರ ಹೆಚ್ಚುವರಿ ವೇತನ ಘೋಷಣೆ ಮಾಡಿದ್ದರು. ಈಗಿರುವ ಕಾಂಗ್ರೆಸ್ ಸರ್ಕಾರ ಕೂಡಲೇ ಕಳೆದ ಜೂನ್ ತಿಂಗಳಿಂದ ಅನ್ವಯವಾಗುವಂತೆ ಹೆಚ್ಚುವರಿ ವೇತನ ನೀಡಬೇಕು ಎಂದು ಒತ್ತಾಯಿಸಿದರು.ಜಿಲ್ಲೆಯಲ್ಲಿ ೨೦೦೨-೦೩ರಿಂದ ಅಕ್ಷರ ದಾಸೋಹ ಬಿಸಿಯೂಟ ಜಾರಿಗೆ ಬಂದಿದ್ದು, ೩೯೦೦ಕ್ಕಿಂತಲೂ ಹೆಚ್ಚು ಬಿಸಿಯೂಟ ತಯಾರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆರಂಭದಲ್ಲಿ ಮುಖ್ಯ ಅಡುಗೆಯವರಿಗೆ ಮಾಸಿಕ ₹೬೫೦ ಅಡುಗೆ ಸಹಾಯಕರು ₹೪೦೦ ಇದ್ದು, ೩ ಮತ್ತು ೪ನೇ ಅಡುಗೆ ಸಹಾಯಕರಿಗೆ ₹೩೦೦ ನೀಡಲಾಗುತ್ತಿತ್ತು. ೨೧ ವರ್ಷಗಳಿಂದ ಅಲ್ಪಸಂಭಾವನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರೂ ಈಗ ಸದ್ಯ ಕೊಡುತ್ತಿರುವ ಮಾಸಿಕ ಸಂಭಾವನೆ ಮುಖ್ಯ ಅಡುಗೆಯವರಿಗೆ ಮಾಸಿಕ ₹೩೭೦೦ ಮತ್ತು ಅಡುಗೆ ಸಹಾಯಕರಿಗೆ ₹೩೬೦೦ ಮಾತ್ರ ನೀಡಲಾಗುತ್ತಿದೆ. ನಿವೃತ್ತ ವೇತನ, ಇಎಸ್‌ಐ ಸೇರಿದಂತೆ ಯಾವುದೇ ಸೌಲಭ್ಯಗಳಿಲ್ಲ. ಆದಾಗ್ಯೂ ಇವರು ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸುತ್ತಿದ್ದು ಇಂದಿನ ಬೆಲೆ ಏರಿಕೆ ದಿನಗಳಲ್ಲಿ ಜೀವನ ಸಾಗಿಸುವುದು ಅತ್ಯಂತ ಕಷ್ಟದಾಯಕವಾಗಿದೆ. ೨೦೦೩ರಿಂದ ನಿರಂತರವಾಗಿ ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಹಲವಾರು ಸಲ ವೇತನ ಹೆಚ್ಚಿಸುವಂತೆ ಮತ್ತು ಇತರ ಬೇಡಿಕೆಗಳನ್ನು ಈಡೇರಿಸುವುಂತೆ ಒತ್ತಾಯಿಸಿ ಪ್ರಧಾನಮಂತ್ರಿಗಳಿಗೆ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಪತ್ರಗಳನ್ನು ಸಲ್ಲಿಸಿದ್ದರೂ ಈ ವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನಾ ಕಾರ್ಯದರ್ಶಿ ವಿನಾಯಕ ಕುರುಬರ ಮಾತನಾಡಿ, ಬಿಸಿಯೂಟ ತಯಾರಕರನ್ನು ಏ. ೧೦ರ ಮೊದಲು ಕೆಲಸ ಮಾಡುತ್ತಿರುವ ಅಡುಗೆಯವರನ್ನೆ ಮುಂದುವರಿಸಬೇಕೆಂದು ಆದೇಶವಿದ್ದರೂ ಆಯುಕ್ತರು ಅಡುಗೆಯವರನ್ನು ಮಾ. ೩೧ಕ್ಕೆ ಬಿಡುಗಡೆಗೊಳಿಸಿ ಜೂ. ೧ಕ್ಕೆ ಪುನಃ ನೇಮಕಾತಿ ಮಾಡಿಕೊಳ್ಳುವಂತೆ ಆದೇಶ ಮಾಡಿದ್ದು, ಅದನ್ನು ಕೂಡಲೇ ವಾಪಸ್ ಪಡೆದು ಹಿಂದಿನಂತೆ ಆದೇಶ ಮುಂದುವರಿಸಬೇಕು. ೨೦೦೨-೦೩ರಿಂದ ಯೋಜನೆ ಆರಂಭವಾದಾಗಿನಿಂದ ಕೆಲಸ ನಿರ್ವಹಿಸುತ್ತಿರುವ ಬಿಸಿಯೂಟ ಯೋಜನೆ ಕಾರ್ಯಕರ್ತರಿಗೆ ಇಲ್ಲಿಯವರೆಗೂ ಸೇವಾ ಭದ್ರತೆ ಕಲ್ಪಿಸಿಲ್ಲ. ಅವರನ್ನು ಅರೆಕಾಲಿಕ ಬಿಸಿಯೂಟ ಕಾಯಂ ನೌಕರರೆಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಅಡುಗೆಯವರು ಅಡುಗೆ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಅವಘಡ ಸಂಭವಿಸಿ ಅಪಘಾತಕ್ಕೊಳಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿ ಚಿಕಿತ್ಸೆ ಪಡೆದಿದ್ದು, ಅವರ ಚಿಕಿತ್ಸೆ ವೆಚ್ಚವಾಗಿ ಪ್ರತಿಯೊಬ್ಬರಿಗೂ ₹೧.೫೦ ಲಕ್ಷ ನೀಡಬೇಕು. ಅಡುಗೆ ಸಿಬ್ಬಂದಿಗೆ ಸಮವಸ್ತ್ರ, ಎಪ್ರಾನ್, ಟೋಫಿ ಮತ್ತು ಕೈ ಗವಸಗಳನ್ನು ವರ್ಷಕ್ಕೆ ೨ ಜತೆಯಂತೆ ಇಲಾಖೆಯಿಂದಲೇ ಕೊಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಜಿಲ್ಲಾಧ್ಯಕ್ಷೆ ಬಿ.ಡಿ. ಪೂಜಾರ, ಲಲಿತಾ ಬುಶೆಟ್ಟಿ, ರಾಜೇಶ್ವರಿ ದೊಡ್ಡಮನಿ, ರೇಖಮ್ಮ ದನ್ನೂರ, ಸರೋಜಮ್ಮ ಹಿರೇಮಠ, ಲತಾ ಹಿರೇಮಠ, ಭಾರತಿ ಕಬನೂರ, ನಿರ್ಮಲಾ ಬಂಕಾಪುರಮಠ ಹಾಗೂ ನೂರಾರು ಬಿಸಿಯೂಟ ಯೋಜನೆಯ ಕಾರ್ಯಕರ್ತೆಯರು ಇದ್ದರು.